Mandya ಮಾಜಿ ಸಂಸದೆ ಸುಮಲತಾ ಅಂಬರೀಶ್ ನಿರ್ಮಿಸಿದ್ದ ಬಸ್ ತಂಗುದಾಣ ನೆಲಸಮ
ಮಾಜಿ ಸಂಸದೆ ಸುಮಲತಾ ಅಂಬರೀಶ್ ನಿರ್ಮಿಸಿದ ಬಸ್ ತಂಗುದಾಣವನ್ನು ನೆಲಸಮಗೊಳಿಸಲಾಗಿದೆ. ಕೇವಲ ಎರಡು ವರ್ಷದ ಹಳೆಯ ಬಸ್ ನಿಲ್ದಾಣವನ್ನು ಕೆಡವಿದ್ದಕ್ಕೆ ಆಕ್ರೋಶ ವ್ಯಕ್ತವಾಯಿತು.

ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಅನುದಾನದಲ್ಲಿ ನಿರ್ಮಿಸಿದ್ದ ಬಸ್ ತಂಗುದಾಣವನ್ನು ನೆಲಸಮಗೊಳಿಸಿ ಅದೇ ಜಾಗದಲ್ಲಿ ಗ್ರಾಮ ಪಂಚಾಯ್ತಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾಗ ಬೆಂಬಲಿಗರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಚಿವ ಚಲುವರಾಸ್ವಾಮಿ ಅವರ ಗುದ್ದಲಿ ಪೂಜೆ ಕಾರ್ಯಕ್ರಮ ರದ್ದು ಮಾಡಲಾಯಿತು.
ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮಸ್ಥರ ಒತ್ತಾಯದ ಮೇರೆಗೆ ಈ ಹಿಂದೆ ಸಂಸದರಾಗಿದ್ದ ಸುಮಲತಾ ಅಂಬರೀಶ್ ಅವರು ತಮ್ಮ 5 ಲಕ್ಷ ರು. ಅನುದಾನದಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಿದ್ದರು. ಆದರೆ, ಇದೇ ಜಾಗದಲ್ಲಿ ಗ್ರಾಮ ಪಂಚಾಯ್ತಿ ನೂತನ ಕಟ್ಟಡ ಕಟ್ಟಲು ಬಸ್ ತಂಗುತಾಣವನ್ನು ಗ್ರಾಪಂ ಆಡಳಿತ ಮಂಡಳಿ ನೆಲಸಮ ಮಾಡಿತ್ತು.
ಭಾನುವಾರ ಸಚಿವ ಚಲುವರಾಯಸ್ವಾಮಿ ಅವರು ಕೊಪ್ಪ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆ ಕೌಡ್ಲೆ ಗ್ರಾಮದಲ್ಲಿ ನೂತನ ಗ್ರಾಪಂ ಕಚೇರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಆದರೆ, ಈ ವಿಷಯ ತಿಳಿದ ಮಾಜಿ ಸಂಸದೆ ಸುಮಲತಾ ಬೆಂಬಲಿಗರು, ಗ್ರಾಮಸ್ಥರು ಬಸ್ ತಂಗುದಾಣ ನಿರ್ಮಾಣವಾದ ಎರಡೇ ವರ್ಷದಲ್ಲಿ ಕೆಡವಿ ಗ್ರಾಮ ಪಂಚಾಯ್ತಿ ಕಚೇರಿ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಉಸ್ತುವಾರಿ ಸಚಿವರು ಗುದ್ದಲಿ ಪೂಜೆ ನೆರವೇರಿಸದಂತೆ ಆಗ್ರಹ ಪಡಿಸಿದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ನೂತನ ಗ್ರಾಮ ಪಂಚಾಯ್ತಿ ಕಟ್ಟಡ ನಿರ್ಮಾಣ ಮಾಡಲು ಬಸ್ ತಂಗುತಾಣ ನೆಲಸಮ ಮಾಡಲಾಯಿತು ಎಂದು ಹೇಳಿಕೆ ನೀಡಿ ಹಿನ್ನೆಲೆಯಲ್ಲಿ ಮಾಜಿ ಸಂಸದರ ಬೆಂಬಲಿಗರು ಸಾರ್ವಜನಿಕರ ದುಡ್ಡು ಹೊಡೆಯಲು ಹೊಸ ಕಾಮಗಾರಿ ನಡೆಸಲಾಗುತ್ತಿದೆ ಗ್ರಾಪಂ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದ ಘಟನೆಯೂ ಜರುಗಿತು.