- Home
- Karnataka Districts
- ಬೆಂಗಳೂರು ಗ್ಯಾಸ್ಟ್ರಿಕ್ ಹೆಂಡ್ತಿಗೆ ಹೈಡೋಸ್ ಅನಸ್ತೇಶಿಯಾ ಕೊಟ್ಟ ಡಾಕ್ಟರ್ ಗಂಡ; FSL ವರದಿ ಬಿಚ್ಚಿಟ್ಟ ಪೊಲೀಸರು!
ಬೆಂಗಳೂರು ಗ್ಯಾಸ್ಟ್ರಿಕ್ ಹೆಂಡ್ತಿಗೆ ಹೈಡೋಸ್ ಅನಸ್ತೇಶಿಯಾ ಕೊಟ್ಟ ಡಾಕ್ಟರ್ ಗಂಡ; FSL ವರದಿ ಬಿಚ್ಚಿಟ್ಟ ಪೊಲೀಸರು!
ಬೆಂಗಳೂರಿನ ವೈದ್ಯ ದಂಪತಿಯ 11 ತಿಂಗಳ ದಾಂಪತ್ಯವು ಪತ್ನಿಯ ಸಾವಿನೊಂದಿಗೆ ದುರಂತ ಅಂತ್ಯ. ಆರಂಭದಲ್ಲಿ ಸಹಜ ಸಾವು ಎಂದು ಭಾವಿಸಲಾಗಿದ್ದ ಈ ಪ್ರಕರಣ, ಎಫ್‌ಎಸ್‌ಎಲ್ ವರದಿಯಿಂದ ಕೊಲೆ ಎಂದು ಸಾಬೀತು. ಪತಿಯೇ ಪತ್ನಿಗೆ ಅನಸ್ತೇಶಿಯಾ ಓವರ್‌ಡೋಸ್ ನೀಡಿ ಕೊಲೆ ಮಾಡಿರುವುದು ಬಯಲು.

ಎಫ್‌ಎಸ್‌ಎಲ್ ವರದಿ ಬಿಚ್ಚಿಟ್ಟ ಸಾವಿನ ಸತ್ಯ
ಬೆಂಗಳೂರು ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರಿಬ್ಬರು ಪರಸ್ಪರ ಒಪ್ಪಿ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಇಬ್ಬರ ಹೈಪ್ರೊಫೈಲ್ ದಾಂಪತ್ಯ ಕೇವಲ 11 ತಿಂಗಳಿಗೆ ಹೆಂಡತಿ ಸಾವಿನ ಮೂಲಕ ಅಂತ್ಯವಾಗಿದೆ. ಇದನ್ನು ಸಹಜ ಸಾವೆಂದು ಅಂತ್ಯಕ್ರಿಯೆ ಮಾಡಲಾಗಿತ್ತು.
ಆದರೆ, ಪೊಲೀಸರ ತನಿಖೆ ಉದ್ದೇಶದಿಂದ ಮೃತದೆಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿದಾಗ ಆಕೆಯ ಗಂಡ ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿಯೇ ಪತ್ನಿ ಡಾ. ಕೃತಿಕಾ ರೆಡ್ಡಿ ಅವರಿಗೆ ಅನಸ್ತೇಶಿಯಾ ಓವರ್‌ಡೋಸ್ ನೀಡಿ ಕೊಲೆ ಮಾಡಿರುವುದು ಎಫ್‌ಎಸ್‌ಎಲ್ ವರದಿಯಿಂದ ಸಾಬೀತಾಗಿದೆ.
ಅಹಸಜ ಸಾವು ಕೇಸ್, ಕೊಲೆಯಾಗಿ ಬದಲು
ಈ ಕುರಿತು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ದಾಖಲಾಗಿದ್ದ 'ಯುಡಿಆರ್' (ಅಸಹಜ ಸಾವು) ಪ್ರಕರಣವನ್ನು ಕೊಲೆ ಪ್ರಕರಣವಾಗಿ ಮಾರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ ಮತ್ತು ತನಿಖೆ:
ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಡಾ. ಮಹೇಂದ್ರ ರೆಡ್ಡಿ ಮತ್ತು ಡಾ. ಕೃತಿಕಾ ರೆಡ್ಡಿ ಇಬ್ಬರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷವಷ್ಟೇ ಅಂದರೆ 26/05/2024 ರಂದು ಮದುವೆಯಾಗಿದ್ದರು. ಈ ದಂಪತಿ ಮದುವೆಯಾಗಿ ಕೇವಲ 11 ತಿಂಗಳ ನಂತರ, ಅಂದರೆ 23/04/2025 ರಂದು ಕೃತಿಕಾ ರೆಡ್ಡಿ ತಮ್ಮ ತಂದೆಯ ಮನೆಯಲ್ಲಿದ್ದಾಗ ಸಾವನ್ನಪ್ಪಿದ್ದರು.
ಸಾವಿನ ಬಗ್ಗೆ ಯಾರೂ ದೂರು ಕೊಡಲಿಲ್ಲ
ಈ ಕುರಿತು ಮಾಹಿತಿ ನೀಡಿದ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, 'ಏಪ್ರಿಲ್ ತಿಂಗಳಲ್ಲಿ ಮಹಿಳೆಯ ಸಾವಿನ ಬಗ್ಗೆ ಯುಡಿಆರ್ ಪ್ರಕರಣ ದಾಖಲಿಸಲಾಗಿತ್ತು. ಮಹಿಳೆ ಸಾವನ್ನಪ್ಪಿದಾಗ ಯಾರೂ ದೂರು ನೀಡಿರಲಿಲ್ಲ. ಕುಟುಂಬದವರು ಕೂಡ ಮೊದಲು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರಲಿಲ್ಲ. ಹೀಗಾಗಿ ನಾವೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೆವು' ಎಂದು ತಿಳಿಸಿದರು.
ಎಫ್‌ಎಸ್‌ಎಲ್ ವರದಿಯೇ ನಿರ್ಣಾಯಕ
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸ್ಯಾಂಪಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿತ್ತು. ಸುಮಾರು 6 ತಿಂಗಳ ಬಳಿಕ ಬಂದ ಎಫ್‌ಎಸ್‌ಎಲ್ ವರದಿಯು ಪ್ರಕರಣದ ದಿಕ್ಕನ್ನೇ ಬದಲಾಯಿಸಿತು.
ಅನಸ್ತೇಶಿಯಾ ಓವರ್‌ಡೋಸ್
ವೈದ್ಯಕೀಯ ಇಲಾಖೆಯಿಂದ ಎಫ್‌ಎಸ್‌ಎಲ್ ವರದಿಯಲ್ಲಿ ಡಾ. ಕೃತಿಕಾಗೆ ಅನಸ್ತೇಶಿಯಾ ಓವರ್‌ಡೋಸ್ ಕೊಟ್ಟು ಸಾವಾಗಿದೆ ಎಂಬುದು ಗೊತ್ತಾಗಿದೆ. ಇದರ ಅನ್ವಯ ಈಗ ಯುಡಿಆರ್ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಮಾರ್ಪಡಿಸಿದ್ದೇವೆ' ಎಂದು ಕಮಿಷನರ್ ಸ್ಪಷ್ಟಪಡಿಸಿದರು.
ಆರೋಪಿ ಬಂಧನ:
ಎಫ್‌ಎಸ್‌ಎಲ್ ವರದಿ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿ ಮೃತ ಮಹಿಳೆ ಕೃತಿಕಾ ಅವರ ಗಂಡ ಡಾ. ಮಹೇಂದ್ರ ರೆಡ್ಡಿ ಅವರನ್ನು ಮಣಿಪಾಲದಲ್ಲಿ ಬಂಧಿಸಿದ್ದಾರೆ.
ಡಾ.ಕೃತಿಕಾ ಅಪ್ಪನಿಂದ ದೂರು ಸ್ವೀಕಾರ
ನಮ್ಮ ಪೊಲೀಸ್ ಇಲಾಖೆಯ ಸೋಕೋ ಟೀಮ್ (SOCO Team) ಮತ್ತು ಎಫ್‌ಎಸ್‌ಎಲ್ (FSL) ತನಿಖಾ ತಂಡಗಳು ತುಂಬಾ ಚೆನ್ನಾಗಿ ಸಾಕ್ಷ್ಯ ಕಲೆ ಹಾಕಿದ್ದರು ಎಂದು ಕಮಿಷನರ್ ಶ್ಲಾಘಿಸಿದರು. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಮೃತ ಕೃತಿಕಾ ಅವರ ತಂದೆಯನ್ನು ಕರೆಸಿ ಮತ್ತೆ ದೂರು ಪಡೆದುಕೊಂಡಿದ್ದೇವೆ. ಆಗ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.
ಕೊಲೆ ಹಿಂದಿನ ಕಾರಣ ಇನ್ನೂ ನಿಗೂಢ
ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, 'ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬ ಬಗ್ಗೆ ಕೂಡ ತನಿಖೆ ಮುಂದುವರೆಸಿದ್ದಾರೆ' ಎಂದು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಅನೈತಿಕ ಸಂಬಂಧ, ಆಸ್ತಿ ಕಾರಣವಿದೆಯೇ?
ಅನಸ್ತೇಶಿಯಾದಂತಹ ಸೂಕ್ಷ್ಮ ವೈದ್ಯಕೀಯ ಜ್ಞಾನವನ್ನು ಬಳಸಿಕೊಂಡು ಪತ್ನಿಯನ್ನು ಕೊಲೆ ಮಾಡಿದ ಈ ಕ್ರೂರ ಘಟನೆ ಬಗ್ಗೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಇದರ ಹಿಂದೆ ಅನೈತಿಕ ಸಂಬಂಧದ ಕೈವಾಡವಿದೆಯೇ ಅಥವಾ ಆಸ್ತಿ ಇತ್ಯಾದಿ ಕಾರಣಗಳಿವೆಯೇ ಎಂಬುದರ ಬಗ್ಗೆ ತನಿಖೆ ಮುಂದುವರೆಯುತ್ತಿದೆ.