ಬೆಳಗಾವಿ ಕಾರಕೂನ ದುರಂತ ಅಂತ್ಯ; ಹೆಂಡತಿ ಮೇಲೆ ಕಣ್ಣಾಕಿದ ಕ್ಲರ್ಕ್ ಕಥೆ ಮುಗಿಸಿದ ಗಂಡ!
ಸ್ನೇಹಿತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜು ಕ್ಲರ್ಕ್ ಮಹಾಂತೇಶ್ ಬುಕನಟ್ಟಿ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾತ್ರಿ ಮನೆಗೆ ಹಿಂದಿರುಗುತ್ತಿದ್ದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದಾನೆ.

ಬೆಳಗಾವಿ (ಸೆ.18): ಅನೈತಿಕ ಸಂಬಂಧದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ್ ಬುಕನಟ್ಟಿ (24) ಎಂಬ ಯುವಕ ಹತ್ಯೆಯಾದ ದುರ್ದೈವಿ.
ಘಟನೆಯ ಹಿನ್ನೆಲೆ:
ಕೊಲೆಯಾದ ಮಹಾಂತೇಶ್ ಹಾಗೂ ಆರೋಪಿ ಬಸವರಾಜ್ ಬುಕನಟ್ಟಿ ಅವರ ಪತ್ನಿ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಈ ವಿಷಯ ಒಂದು ವರ್ಷದ ಹಿಂದೆಯೇ ಬೆಳಕಿಗೆ ಬಂದಿತ್ತು. ಆಗ ಈ ಕುರಿತು ಪೊಲೀಸರ ಬಳಿ ಎಫ್‌ಐಆರ್ ಕೂಡ ದಾಖಲಾಗಿತ್ತು. ನಂತರ ಹಿರಿಯರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ಮಾಡಲಾಗಿತ್ತು.
ಆದರೆ, ಇದೇ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಬಸವರಾಜ್, ಮಹಾಂತೇಶನ ಕೊಲೆಗೆ ಸಂಚು ರೂಪಿಸಿದ್ದಾನೆ. ಮಹಾಂತೇಶನು ಬೆಳಗಾವಿಯಲ್ಲಿ ಖಾಸಗಿ ಕಾಲೇಜಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದು, ಪ್ರತಿದಿನ ರಾತ್ರಿ ಕೆಲಸ ಮುಗಿಸಿ ಶಹಾಬಂದರ ಗ್ರಾಮಕ್ಕೆ ಹಿಂದಿರುಗುತ್ತಿದ್ದನು. ಇದನ್ನು ಗಮನಿಸಿದ ಆರೋಪಿಗಳು, ನಿನ್ನೆ ರಾತ್ರಿ ಆತನಿಗಾಗಿ ಕಾದು ಕುಳಿತಿದ್ದಾರೆ.
ಘಟನೆ ನಡೆದ ರೀತಿ:
ಮಹಾಂತೇಶ್ ಬಸ್‌ನಿಂದ ಇಳಿದು ಮನೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ, ಬಸವರಾಜ್ ಮತ್ತು ಆತನ ಮೂರ್ನಾಲ್ಕು ಮಂದಿ ಸ್ನೇಹಿತರು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಲಾಂಗ್ ಮತ್ತು ಮಚ್ಚುಗಳಿಂದ ಕತ್ತು, ಹೊಟ್ಟೆ, ಬೆನ್ನು ಸೇರಿದಂತೆ ಎಲ್ಲೆಂದರಲ್ಲಿ ಮನಬಂದಂತೆ ಕೊಚ್ಚಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಹಾಂತೇಶ್ ಮನೆಯತ್ತ ಹೋಗುತ್ತಿದ್ದ ದೃಶ್ಯ ಹಾಗೂ ಆತನನ್ನು ಹಿಂಬಾಲಿಸಿಕೊಂಡು ಹೋಗುತ್ತಿರುವ ಯುವಕನ ದೃಶ್ಯ ದಾಖಲಾಗಿದೆ. ಇದೇ ಯುವಕ ಬಸವರಾಜ್‌ಗೆ ಮಾಹಿತಿ ನೀಡಿ ಕೊಲೆಗೆ ಸಹಕರಿಸಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸ್ ತನಿಖೆ:
ಘಟನೆ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಯಮಕನಮರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಾಂತೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಗೆ ಬಂದ ಮೃತ ಯುವಕನ ಕುಟುಂಬಸ್ಥರು, ಒಂದು ವರ್ಷದ ಹಿಂದಿನ ಸೇಡಿಗಾಗಿ ಕೊಲೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.