ಪರಿಸರಕ್ಕಾಗಿ ಉರಗ ರಕ್ಷಣೆ: ಮಂಗಳೂರಿನಲ್ಲೊಬ್ಬ ಪ್ರಕೃತಿ ಪ್ರೇಮಿ
ಹಾವು ಎಂದ ಕೂಡಲೇ ಭಯ ಪಟ್ಟು ದೂರ ಓಡುವ ಜನರ ಮಧ್ಯೆ, ಹಾವುಗಳ ರಕ್ಷಣೆಯನ್ನೇ ತನ್ನ ಹವ್ಯಾಸವಾಗಿಸಿಕೊಂಡಿದ್ದಾನೆ ಈ ಯುವಕ. ಆ ವಿಘ್ನ ನಿವಾರಕ ವಿಘ್ನೇಶ್ವರ ಹೊಟ್ಟೆಗೆ ಹಾವು ಸುತ್ತಿಕೊಂಡರೆ ಮಂಗಳೂರಿನ ಈ ವಿಘ್ನೇಶ ಹಾವುಗಳ ರಕ್ಷಣೆ ಮಾಡಲು ಯಾವುದೇ ಸಮಯದಲ್ಲಾದರೂ ಆಗಮಿಸಿ, ಹಾವನ್ನು ಕೈಯಲ್ಲಿ ಹಿಡಿದು ಸುರಕ್ಷಿತ ಜಾಗದಲ್ಲಿ ಬಿಟ್ಟು ಬರುತ್ತಾರೆ. ಹಾವುಗಳನ್ನು ಪ್ರೀತಿಸುವ ಈ ಯುವಕನ ಹೆಸರು ವಿಘ್ನೇಶ್ ಆಚಾರ್ಯ ಕೋಟೆಕಾರ್. ಕೇವಲ ಹಾವು ಮಾತ್ರವಲ್ಲ, ಪ್ರಾಣಿ - ಪಕ್ಷಿಗಳ ರಕ್ಷಣೆ, ಚಿಕಿತ್ಸೆ, ಸೈಕಲಿಂಗ್, ಬೀಚ್ ಕ್ಲೀನಿಂಗ್, ಸ್ವಚ್ಛ ಪರಿಸರ ಅಭಿಯಾನ, ರಕ್ತದಾನ ಶಿಬಿರ ಹೀಗೆ ಎಲ್ಲಾ ವಿಷಯಗಳಲ್ಲೂ ಮುಂದು ಈ ವಿಘ್ನೇಶ್ ಆಚಾರ್ಯ.
ವಿಘ್ನೇಶ್ ಆಚಾರ್ಯ ಕೋಟೆಕಾರ್
ವಿಘ್ನೇಶ್ ಆಚಾರ್ಯ ಕೋಟೆಕಾರ್ ಮಂಗಳೂರಿನ, ಕೋಟೆಕಾರು ಗ್ರಾಮದ ಯುವಕ. ಇವರ ತಂದೆ ಶಂಕರ ನಾರಾಯಣ ಆಚಾರ್ಯ ಮತ್ತು ತಾಯಿ ಭಾರತಿ. ವಿಘ್ನೇಶ್ ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನಿಂಗ್ ಪದವಿ ಪಡೆದಿದ್ದು, ಫ್ರೀ ಲ್ಯಾನ್ಸರ್ ಆಗಿ ತಮ್ಮದೇ ಆದ ಆಚಾರ್ಯ ಇಂಟೀರಿಯರ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಸ್ಯೆಯಲ್ಲಿ ಸಿಲುಕಿರುವ ಹಾವುಗಳನ್ನು ರಕ್ಷಿಸುವುದು ಈ 26 ವರ್ಷದ ಯುವಕನ ನೆಚ್ಚಿನ ಹವ್ಯಾಸಗಳಲ್ಲೊಂದು.
ಹಾವುಗಳ ರಕ್ಷಣೆ ಕಡೆಗೆ ಒಲವು ಹುಟ್ಟಲು ಕಾರಣ
ಹಾವು ಹಿಡಿಯಲು ಪ್ರೇರಣೆ ಅಪ್ಪ ಎಂದು ಹೇಳುವ ಇವರ ತಂದೆ ಸಾಮಾನ್ಯವಾಗಿ ಹತ್ತಿರದ ಯಾವುದೇ ಮನೆಯೊಳಗೆ ಹೆಬ್ಬಾವು ಸೇರಿ ಯಾವುದೇ ತರದ ಹಾವು ಹೊಕ್ಕರೂ ಅದನ್ನು ಜಾಗರೂಕತೆಯಿಂದ ಹಿಡಿದು ಸುರಕ್ಷಿತ ಜಾಗದಲ್ಲಿ ಬಿಡುತ್ತಿದ್ದರಂತೆ. ಅವರನ್ನು ನೋಡಿಕೊಂಡೇ ಬೆಳೆದ ವಿಘ್ನೇಶ್‌ಗೂ ಹಾವುಗಳನ್ನು ಹಿಡಿಯೋದು ಹವ್ಯಾಸವಾಗಿಬಿಟ್ಟಿದೆ. ಜೊತೆಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ ತುಂಬಾ ಇಷ್ಟಪಡುತ್ತಿದ್ದ ವಿಘ್ನೇಶ್ ಗೆ ಹಾವುಗಳ ರಕ್ಷಣೆ ಮಾಡೋದು ಕಷ್ಟವಾಗಲಿಲ್ಲವಂತೆ.
ಯಾವೆಲ್ಲಾ ಹಾವುಗಳ ರಕ್ಷಣೆ?
ಇಲ್ಲಿವರೆಗೆ ವಿವಿಧೆಡೆ ಸುಮಾರು 110 ಹಾವನ್ನು ರಕ್ಷಿಸಿದ ಇವರು, ಇಲ್ಲೀವರೆಗೆ ಹೆಬ್ಬಾವನ್ನು ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಿಸಿದ್ದಾರೆ. ಹೆಬ್ಬಾವು ಹಿಡಿಯಲು ಮೊದಲಿಗೆ ಆರಂಭಿಸಿದ ಇವರು ಅನುಭವದ ಬಳಿಕ, rat ಸ್ನೇಕ್ (ಕೆರೆ ಹಾವು ), ರಸಲ್ ವೈಪರ್ (ಕೊಳಕು ಮಂಡಲ), ಕಟ್ಟ ಕಡಂಬ, ನಾಗರಹಾವು, ಬಿಸಿಲು ಹಾವು, ಗ್ರೀನ್ ವೈನ್ ಸ್ನೇಕ್ (ಹಸಿರು ಹಾವು), ವೂಲ್ಫ್ ಸ್ನೇಕ್, ಕುಕ್ರಿ, ಬ್ಲಾಕ್ ಹೆಡೆಡ್ ಸ್ನೇಕ್ ಮೊದಲಾದ ವಿಷಯುಕ್ತ ಮತ್ತು ನಿರ್ವಿಷವುಳ್ಳ ಹಾವುಗಳನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಬಿಟ್ಟಿದ್ದಾರೆ.
ಹಾವನ್ನು ಹಿಡಿಯಲು ಭಯವಾಗಿಲ್ಲವೇ?
ಮಂಗಳೂರಿನ ಯಾವುದೇ ಪ್ರದೇಶದಿಂದ ಯಾರೇ ಹಾವುಗಳನ್ನು ಹಿಡಿಯಲು ಕರೆ ಮಾಡಿದರೆ, ಕೂಡಲೇ ತಮ್ಮೆಲ್ಲಾ ಕೆಲಸಗಳನ್ನು ಬದಿಗಿಟ್ಟು ತೆರಳುವ ಇವರಿಗೆ ಈ ಸರಿಸೃಪವೆಂದರೆ ಭಯವೇ ಇಲ್ಲವಂತೆ. ಆರಂಭದಲ್ಲಿ ವಿಷಯುಕ್ತ ಹಾವನ್ನು ಹಿಡಿಯಲು ಭಯವಾಗುತ್ತಿತ್ತು. ಆದರೆ ಕ್ರಮೇಣ ಭಯ ಕಡಿಮೆ ಆಗಿದೆ. ಆದರೆ ಕೆಲವೊಮ್ಮೆ ಹಾವುಗಳು ಸಿಟ್ಟಾಗಿದ್ದರೆ ಹಿಡಿಯಲು ಭಯವಾಗುತ್ತದೆ, ಆ ಭಯ ಇರಲೇಬೇಕು, ಆದರೆ ಆ ಭಯವನ್ನು ಹಿಮ್ಮೆಟ್ಟಿ ಧೈರ್ಯದಿಂದ ಅದರ ರಕ್ಷಿಸಿದಾಗ ಒಂದೊಳ್ಳೆ ಅನುಭವ ಸಿಗುತ್ತದೆ. ಜೊತೆಗೆ ಹಾವುಗಳ ರಕ್ಷಣೆ ಮಾಡಿದ ಸಾರ್ಥಕತೆ ಇರುತ್ತದೆ, ಎನ್ನುತ್ತಾರೆ ವಿಘ್ನೇಶ್.
ಹಾವುಗಳ ರಕ್ಷಣೆ ಬಗ್ಗೆ ಜನರಿಗೇನು ಹೇಳುವಿರಿ..
ಹಾವುಗಳನ್ನು ಕಂಡಾಗ ಮೊದಲು ಹೆಚ್ಚಿನ ಜನರು ಅದನ್ನು ಕೊಲ್ಲಲು ಮುಂದಾಗುತ್ತಿದ್ದರು, ಜನಕ್ಕೆ ಹೆಚ್ಚಾಗಿ ಹೆಬ್ಬಾವು, ನಾಗರಹಾವು ಬಿಟ್ಟು ಬೇರೆ ಯಾವುದೇ ಹಾವು ತಿಳಿದಿರಲಿಲ್ಲ, ಯಾವುದೇ ಹಾವನ್ನು ನೋಡಿದರೂ ಅದು ವಿಷದ ಹಾವು ಎಂದು ಹೊಡೆದು ಸಾಯಿಸುತ್ತಿದ್ದರು. ಅದೇ ಕಾರಣಕ್ಕೆ ಹಾವುಗಳನ್ನು ಹಿಡಿದು, ರಕ್ಷಣೆ ಮಾಡುವ ಕಾರ್ಯಕ್ಕೆ ಮುಂದಾದೆ ಎನ್ನುವ ವಿಘ್ನೇಶ್ ಪರಿಸರದ ಉಳಿವಿಗೆ ಹಾವುಗಳು ಸಹ ಪ್ರಕೃತಿಯಲ್ಲಿ ಇರಬೇಕು ಎಂದು ಹೇಳುತ್ತಾರೆ.
ಹಾವುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ
ಇತ್ತೀಚಿನ ದಿನಗಳಲ್ಲಿ ಹಾವುಗಳ ರಕ್ಷಣೆಯ ಬಗ್ಗೆ ಜಾಗೃತಿ ಕಾರ್ಯಕ್ರಮದ ಅಗತ್ಯತೆ ಇದೆ. ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ. ಶಾಲೆ, ಕಾಲೇಜು ಮೊದಲಾದೆಡೆ ಕಾರ್ಯಕ್ರಮಗಳನ್ನು ನೀಡಬೇಕಿದೆ. ಜೊತೆಗೆ ಹಾವುಗಳನ್ನು ಸಾಯಿಸಲು ಮುಂದಾಗುವ ಕೆಲವು ಪ್ರದೇಶಗಳಲ್ಲೂ ಜನರಿಗೆ ಜಾಗೃತಿ ನೀಡಬೇಕಿದೆ. ಅದಕ್ಕೂ ಮುನ್ನ ನಾನು ಹಾವಿನ ಬಗ್ಗೆ ಸರಿಯಾದ ಅಧ್ಯಯನ ನಡೆಸಬೇಕು ಎಂದು ಹೇಳುತ್ತಾರೆ ವಿಘ್ನೇಶ್.
ಹಾವನ್ನು ಹಿಡಿಯುವ ರೀತಿ ಹೇಗೆ ?
ಹಾವುಗಳನ್ನು ಹಿಡಿಯುವ ವಿವಿಧ ವಿಡಿಯೋಗಳನ್ನು ನೋಡಿ ಅದನ್ನು ಯಾವ ರೀತಿ ಹ್ಯಾಂಡಲ್ ಮಾಡಬಹುದು ಎನ್ನುವುದನ್ನು ಕಲಿತೆ, ಅಲ್ಲದೆ ಬೇರೆ ಬೇರೆ ಹಾವು ಹಿಡಿಯುವವರ ಮತ್ತು ಉರಗ ತಜ್ಞರ ಜೊತೆ ಮಾತುಕತೆ ನಡೆಸಿ, ವಿವಿಧ ಹಾವುಗಳ ಜೀವನ, ಅವುಗಳನ್ನು ಹಿಡಿಯುವ ರೀತಿ, ವಿಷದ ಹಾವುಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ವಿಘ್ನೇಶ್ ಹೇಳುತ್ತಾರೆ. ಹೊಸ ಹಾವನ್ನು ನೋಡಿದಾಗ, ಅವುಗಳನ್ನು ಫೋಟೋ ಸೆರೆ ಹಿಡಿದು ತಜ್ಞರಿಗೆ ಕಳುಹಿಸಿ ಬಳಿಕ ಅದನ್ನು ಹಿಡಿಯುವುದಾಗಿ ಅವರು ಹೇಳಿದ್ದಾರೆ. ಇಲ್ಲಿವರೆಗೆ ಯಾವುದೇ ರೀತಿಯ ಕೋರ್ಸ್ ಮಾಡಿಲ್ಲ, ಮುಂದೆ ಮಾಡುವ ಯೋಚನೆ ಇದೆ. ಆನ್ಲೈನ್ ಕ್ಲಾಸ್ ಮತ್ತು ಪುಸ್ತಕಗಳನ್ನು ಓದುವ ಮೂಲಕ ಹಾವಿನ ಬಗ್ಗೆ ಅಧ್ಯಯನ ನಡೆಸಿದ್ದೇನೆ.
ಹಾವುಗಳನ್ನು ರಕ್ಷಣೆ ಮಾಡಿ ಎಲ್ಲಿ ಬಿಡ್ತೀರಾ?
ಹಾವುಗಳನ್ನು ರಕ್ಷಣೆ ಮಾಡುವುದು ಎಷ್ಟು ಮುಖ್ಯವೋ ಅದನ್ನು ಸೇಫ್ ಆದ ಜಾಗದಲ್ಲಿ ಬಿಡುವುದು ಸಹ ಮುಖ್ಯವಾಗಿದೆ. ಹಾವುಗಳನ್ನು ಹಿಡಿದರೆ ಅವುಗಳನ್ನು ಮೂರು ಕಿ. ಮೀಟರ್ ವ್ಯಾಪ್ತಿಯೊಳಗೆ ಸುರಕ್ಷಿತ ಜಾಗದಲ್ಲಿ ಬಿಡಬೇಕು. ಯಾಕೆಂದರೆ ತುಂಬಾ ದೂರ ಹೋದಾಗ ವಾತಾವರಣ ಬದಲಾವಣೆಯಾಗುತ್ತದೆ. ಇದು ಹಾವುಗಳಿಗೆ ಬೇಗನೆ ತಿಳಿಯುತ್ತದೆ. ಇದರಿಂದ ಹಾವುಗಳಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಸಾಯುವ ಸಾಧ್ಯತೆ ಇದೆ. ಆದುದರಿಂದ ಖಾಲಿ ಜಾಗ ನೋಡಿ ಹಾವುಗಳನ್ನು ಬಿಡಲಾಗುತ್ತದೆ.
ಅತ್ಯುತ್ತಮ ಅನುಭವ :
ಮರೆಯಲಾರದ ಅನುಭವ ಅಂದ್ರೆ ಒಂದೆಡೆ ಹೆಬ್ಬಾವನ್ನು ಹಿಡಿಯಲು ಹೋಗಿದ್ದೆ, ಅದು ಸುಮಾರು 10 ಅಡಿ ಇದ್ದು, ದೈತ್ಯಾಕಾರವಾಗಿತ್ತು, ಜೊತೆಗೆ ತುಂಬಾನೇ ಕ್ರೋಧಿತವಾಗಿತ್ತು. ಅದನ್ನು ಹಿಡಿಯಲು ತುಂಬಾ ಕಷ್ಟ ಪಡಬೇಕಾಗಿದ್ದು, ಜೊತೆಗೆ ಅದರಿಂದ ಕಚ್ಚಿಸಿಕೊಂಡಿದ್ದೇನೆ ಎಂದು ಭಯಾನಕ ಅನುಭವವನ್ನು ಬಿಚ್ಚಿಟ್ಟರು ವಿಘ್ನೇಶ್. ಮತ್ತೊಂದು ಮೆಮೊರೇಬಲ್ ಘಟನೆ ಎಂದರೆ ನಾಗರಹಾವನ್ನು ಬಾವಿಯಿಂದ ಸುಲಭವಾಗಿ ಮರದ ಗೆಲ್ಲನ್ನು ಇಳಿಸಿ ಮೇಲೆ ತೆಗೆದ ಅನುಭವ ಚೆನ್ನಾಗಿತ್ತು. ಇದರಿಂದ ಹೊಸ ಹೊಸ ಎಕ್ಸ್ ಪೀರಿಯನ್ಸ್ ದೊರೆತಿದೆ ಎನ್ನುತ್ತಾರೆ.
ಇಷ್ಟೇ ಅಲ್ಲದೆ ನಾಗರ ಹಾವಿನ ಮರಿಯನ್ನು ರಕ್ಷಿಸಿ, ಅದಕ್ಕೆ ಚಿಕಿತ್ಸೆ ಕೊಟ್ಟು ಸುರಕ್ಷಿತ ಜಾಗದಲ್ಲಿ ಬಿಟ್ಟಿದ್ದೂ ಇದೆಯಂತೆ. ಇದರ ಜೊತೆ ಮತ್ತೊಂದೆಡೆ ಬಾವಿಯ ನೆಟ್‌ನಲ್ಲಿ ಸಿಲುಕಿಕೊಂಡಿದ್ದ ದೊಡ್ಡ ನಾಗರ ಹಾವನ್ನು ರಕ್ಷಿಸಿದ ಅನುಭವವೂ ಮರೆಯಲಾಗದ್ದು ಎನ್ನುತ್ತಾರೆ. ಯಾಕೇಂದ್ರ ನಾಗರಹಾವು ವಿಷ ಜಂತು, ನಾಗರಹಾವಿನ ತಲೆ ನೆಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ತಲೆಯನ್ನೇ ಹಿಡಿಯಬೇಕಾಗಿ ಬಂತು. ಅಲ್ಲಿವರೆಗೆ ವಿಷ ಹಾವಿನ ತಲೆ ಹಿಡಿದ ಅನುಭವವೇ ಇಲ್ಲದ ವಿಘ್ನೇಶ್‌ಗೆ ಹಾವನ್ನು ರಕ್ಷಿಸುವುದು ಮತ್ತು ಹೊಸ ಅನುಭವವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಭಯದಿಂದಲೇ ಅದನ್ನು ರಕ್ಷಣೆ ಮಾಡಿ ಬಿಟ್ಟಿರುವ ಎದೆ ಝಲ್ ಎನಿಸುವಂತೆ ಅನುಭವ ಬಿಚ್ಚಿಟ್ಟರು ಈ ಉರಗ ಪ್ರೇಮಿ.
ಯಾರು ಸೇಫ್ ಆಗಿರಬೇಕು? ಮನುಷ್ಯರೋ ಅಥವಾ ಹಾವುಗಳೋ
ಖಂಡಿತವಾಗಿ ಹಾವುಗಳೇ ಸೇಫ್ ಆಗಿರಬೇಕು ಎನ್ನುತ್ತಾರೆ ವಿಘ್ನೇಶ್. ಯಾಕೆಂದರೆ ಮನುಷ್ಯರು ತಮ್ಮ ಇರುವಿಕೆಗಾಗಿ ಕಾಡುಗಳನ್ನು ನಾಶ ಮಾಡುವುದರಿಂದ ಹಾವುಗಳಿಗೆ ನೆಲೆ ಇಲ್ಲದಂತಾಗಿದೆ. ನಾವು ಹಾವುಗಳ ಅಥವಾ ಪ್ರಾಣಿಗಳ ಜಾಗದಲ್ಲಿ ವಾಸಿಸುತ್ತಿದ್ದೇವೆಯೇ ಹೊರತು, ನಮ್ಮ ಜಾಗದಲ್ಲಿ ಅವುಗಳು ಬಂದಿಲ್ಲ. ಆದುದರಿಂದ ಅವುಗಳನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಹಾವುಗಳು ಪರಿಸರ ಉಳಿಸಲು ಮುಖ್ಯವಾಗಿ ಬೇಕು. ಹಾವು ಇಲಿ, ಕಪ್ಪೆಗಳನ್ನು ತಿನ್ನುವುದರಿಂದ ನಮ್ಮ ಪರಿಸರವು ಸ್ವಚ್ಛವಾಗಿ, ರೋಗಗಳಿಲ್ಲದೆ ಬದುಕಲು ಸಾಧ್ಯ. ಆದುದರಿಂದ ಹಾವುಗಳ ರಕ್ಷಣೆ ಮಾಡಬೇಕು, ನಾವು ಹಾವುಗಳ ಜೊತೆ ಬದುಕಲು ಕಲಿಯಬೇಕು. ಜೊತೆಗೆ ಮನೆಯನ್ನು ನಾವು ಸ್ವಚ್ಛವಾಗಿಟ್ಟುಕೊಂಡರೆ ಹಾವುಗಳು ಬರುವುದಿಲ್ಲ, ಮನೆಯಲ್ಲಿ ಕಸದ ರಾಶಿ ಇದ್ದರೆ, ಕಪ್ಪೆ, ಇಲಿ ಬಂದು ಸೇರಿಕೊಳ್ಳುತ್ತದೆ, ಅವುಗಳನ್ನು ಹಿಡಿಯಲು ಹಾವು ಬರುತ್ತವೆ. ಆದುದರಿಂದ ಮನೆ ಸ್ವಚ್ಛವಾಗಿರುವುದು ಮುಖ್ಯ. ರಾತ್ರಿ ವೇಳೆ ತುಂಬಾ ಎಚ್ಚರಿಕೆಯಿಂದ ಲೈಟ್, ಟಾರ್ಚ್ ಬಳಸಿ ನಡೆದರೆ ಹಾವುಗಳನ್ನು ಮೆಟ್ಟುವುದು ಕಚ್ಚಿಸಿಕೊಳ್ಳುವುದನ್ನು ತಪ್ಪಿಸಬಹುದು.
ಹಾವು ಕಚ್ಚಿದ ಕೂಡಲೇ ಏನು ಮಾಡಬೇಕು ?
ಹಾವು ಕಚ್ಚಿದ ಕೂಡಲೇ ಆ ಜಾಗವನ್ನು ಸ್ವಲ್ಪ ಕತ್ತರಿಸಿ ರಕ್ತ ತೆಗೆಯುವುದು ಅಥವಾ ಅದನ್ನು ಹೀರುವುದು ಇದನ್ನೆಲ್ಲಾ ಮಾಡಬಾರದು. ಇದರಿಂದ ಅಪಾಯ ಜಾಸ್ತಿಯಾಗುತ್ತದೆ. ಹಾವು ಕಚ್ಚಿದ ಕೂಡಲೇ ಧೈರ್ಯ ಕೆಡಬಾರದು, ಧೈರ್ಯದಿಂದ ಇರಬೇಕು. ಧೈರ್ಯ ಕಳೆದುಕೊಂಡರೆ ಒತ್ತಡ ಹೆಚ್ಚಾಗಿ, ಹೃದಯದ ವೇಗ ಹೆಚ್ಚಿ, ರಕ್ತ ದೇಹದಲ್ಲಿ ವೇಗದಲ್ಲಿ ಪಂಪ್ ಆಗುವುದರಿಂದ ವಿಷ ದೇಹದಲ್ಲಿ ಹರಡುವ ಸಾಧ್ಯತೆ ಇದೆ. ಯಾವುದೇ ರೀತಿಯ ಚಿಕಿತ್ಸೆ ಮನೆಯಲ್ಲೇ ಮಾಡುವುದಕ್ಕಿಂತ, ಎಷ್ಟು ಸಾಧ್ಯವೋ ಅಷ್ಟು ಬೇಗ ಆಸ್ಪತ್ರೆಗೆ ದಾಖಲು ಮಾಡಿದರೆ ಉತ್ತಮ, ಯಾಕೆಂದರೆ ವಿಷಕ್ಕೆ ವಿಷವೇ ಮದ್ದಾಗಿದೆ, ಬೇರೆ ಮದ್ದಿಲ್ಲ, ಆಸ್ಪತ್ರೆಯಲ್ಲಿ ಕೂಡಲೇ ಚಿಕಿತ್ಸೆ ದೊರೆತರೆ ಪ್ರಾಣಾಪಾಯ ಇರುವುದಿಲ್ಲ.
ಇತರ ಪ್ರಾಣಿ-ಪಕ್ಷಿಗಳ ರಕ್ಷಣಾ ಕಾರ್ಯ :
ಹಾವುಗಳ ರಕ್ಷಣೆ ಅಲ್ಲದೆ ಇತರ ಪ್ರಾಣಿ, ಪಕ್ಷಿಗಳ ರಕ್ಷಣೆಗೂ ಸದಾ ಮುಂದಿರುವ ವಿಘ್ನೇಶ್, ಅಪಘಾತದಲ್ಲಿ ಗಾಯಗೊಂಡ ಪ್ರಾಣಿಗಳು, ಗಾಯಗೊಂಡ ಹಕ್ಕಿ ಮರಿಗಳು, ಗಿಡುಗ, ಪಾರಿವಾಳ ಮೊದಲ ಪಕ್ಷಿಗಳನ್ನು ರಕ್ಷಿಸಿ ಚಿಕಿತ್ಸೆ ನೀಡಿ ಬಿಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಪ್ರಾಣಿ ಪಕ್ಷಿಗಳನ್ನು ಮಂಗಳೂರಿನ ಶಕ್ತಿ ನಗರದಲ್ಲಿರುವ ಅನಿಮಲ್ ಕೇರ್ ಟ್ರಸ್ಟ್‌ಗೆ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ನೀಡಿ, ಅಲ್ಲೇ ಆಶ್ರಯ ಪಡೆಯುವಂತೆ ಮಾಡಿದ್ದಾರೆ.
ಹವ್ಯಾಸ -ಅಭ್ಯಾಸ :
ಪರಿಸರ ಸ್ವಚ್ಛತೆಯ ಕಡೆಗೆ ಹೆಚ್ಚು ಒತ್ತು ನೀಡುವ ಇವರು ಅನೇಕಾ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಪರಿಸರ, ಬೀಚ್ ಮೊದಲಾದ ತಾಣಗಳನ್ನು ಸ್ವಚ್ಛಗೊಳಿಸಿದ್ದಾರೆ. ಸ್ವತಃ ತಾವೇ ಮುಂದೆ ಬಂದು ಉಳ್ಳಾಲದಲ್ಲಿನ ಬೀಚನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸುವ ಮೂಲಕ ಯುವ ಜನರಿಗೆ ಸ್ವಚ್ಛತೆಯ ಪಾಠವನ್ನು ಹೇಳಿಕೊಟ್ಟಿದ್ದಾರೆ. ಇದಲ್ಲದೆ ಸಂಘಗಳ ಮೂಲಕ, ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾರೆ. ಇದರ ಜೊತೆಗೆ ಇವರೊಬ್ಬ ಸೈಕಲಿಂಗ್ ಪ್ರಿಯರಾಗಿದ್ದು, ಬೈಕ್ ರೈಡಿಂಗ್ ಕೂಡ ಮಾಡುತ್ತಾರೆ. ಜೊತೆಗೆ ಗಣೇಶ ಚತುರ್ಥಿ ಸಮಯದಲ್ಲಿ ಗೌರಿ, ಗಣೇಶನ ಮೂರ್ತಿ ಸಹ ಮಾಡುತ್ತಾರೆ.
ಮಂಗಳೂರಿನ ಸುತ್ತ ಮುತ್ತಲೂ ಎಲ್ಲಿಯಾದರೂ ಹಾವಿನ ರಕ್ಷಣೆ ಮಾಡಬೇಕಾಗಿ ಬಂದಲ್ಲಿ ಅಥವಾ ಮನೆಯೊಳಗೇ ಸೇರಿದ ಹಾವುಗಳನ್ನು ಹಿಡಿದು ಸುರಕ್ಷಿತ ಜಾಗದಲ್ಲಿ ಬಿಡಬೇಕೆಂದು ಬಂದರೆ ಖಂಡಿತವಾಗಿಯೂ ನೀವು ವಿಘ್ನೇಶ್ ಆಚಾರ್ಯ ಕೋಟೆಕಾರ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ಸಂಖ್ಯೆ 8904816235. ಯಾವುದೇ ಸಮಯದಲ್ಲೂ ಹಾವುಗಳ ರಕ್ಷಣೆಗೆ ಅವರು ರೆಡಿ. ಜೊತೆಗೆ ಪರಿಸರದ ಉಳಿವಿಗೆ ಈ ರೀತಿಯಾಗಿ ಕೊಡುಗೆ ನೀಡುವ ಮೂಲಕ ಯುವ ಜನರಿಗೆ ಮಾದರಿಯಾಗಿದ್ದಾರೆ.