ಭಾರತದಲ್ಲಿ ಈ ಪ್ರಾಣಿ-ಪಕ್ಷಿಗಳನ್ನು ಮನೆಯಲ್ಲಿ ಸಾಕುವಂತಿಲ್ಲ, ಇಲ್ಲಿದೆ ಪರಿಷ್ಕೃತ ಪಟ್ಟಿ!
ವನ್ಯಜೀವಿ ಕಾಯ್ದೆ ನಿಯಮಗಳು ಮತ್ತಷ್ಟು ಬಿಗಿಯಾಗಿದೆ. ನಿಮಗೆ ಇಷ್ಟ ಎಂದು ಅಥವಾ ಆರೈಕೆ ಮಾಡಿದ್ದೀರಿ ಎಂದು ವನ್ಯ ಜೀವಿಗಳನ್ನು ಮನೆಯಲ್ಲಿ ಸಾಕುವಂತಿಲ್ಲ. ಈ ಪಟ್ಟಿಗೆ ಒಂದಷ್ಟು ಪ್ರಾಣಿ ಪಕ್ಷಿಗಳನ್ನು ಇತ್ತೀಚೆಗೆ ಸೇರಿಸಲಾಗಿದೆ. ಹೊಸದಾಗಿ ಸೇರ್ಪಡೆಯಾದ ಪ್ರಾಣಿ ಪಕ್ಷಿಗಳ ಲಿಸ್ಟ್ ಇಲ್ಲಿದೆ.
ಭಾರತದಲ್ಲಿ ವನ್ಯ ಜೀವಿ ಕಾಯ್ದೆ ನಿಯಮಗಳು ಹೊಸ ವರ್ಷದಿಂದ ಮತ್ತಷ್ಟು ಬಿಗಿಯಾಗಿದೆ. ಯಾವುದೋ ಕಾರಣದಿಂದ ಅನಾಥವಾದ ಅಥವಾ ಬೇರೆ ರೂಪದಲ್ಲಿ ವನ್ಯ ಪ್ರಾಣಿಗಳನ್ನು ಆರೈಕೆ ಮಾಡಿ ಸಾಕುವಂತಿಲ್ಲ. ನಾಯಿ, ಬೆಕ್ಕು ಸೇರಿದಂತೆ ಒಂದಷ್ಟು ಪ್ರಾಣಿ ಪಕ್ಷಿಗಳು ಮುದ್ದಿನ ಸಾಕು ಪ್ರಾಣಿಗಳ ಲಿಸ್ಟ್‌ನಲ್ಲಿದೆ. ಆದರೆ ಇನ್ನುಳಿದ ವನ್ಯ ಜೀವಿಗಳು ಮನೆಯಲ್ಲಿ ಸಾಕುವಂತಿಲ್ಲ.
ಇತ್ತೀಚೆಗೆ ಒಂದಷ್ಟು ಪ್ರಾಣಿ ಪಕ್ಷಿಗಳನ್ನು ನಿಷೇಧಿತ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಮೂಲಕ ವನ್ಯ ಜೀವಿಗಳ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಹೊಸ ಪರಿಷ್ಕೃತ ಪಟ್ಟಿ ಪ್ರಕಾರ ಮನೆಯಲ್ಲಿ ಸಣ್ಣ ಜಾತಿಯ ಗಿಳಿಯನ್ನು ಸಾಕುವಂತಿಲ್ಲ. ವನ್ಯ ಪಕ್ಷಿ ಹಾಗೂ ಅಳಿವಿನಂಚಿನಲ್ಲಿರುವ ಪ್ರಬೇಧವಾಗಿರುವ ಈ ಗಿಳಿಗಳನ್ನು ಮನೆಯಲ್ಲಿ ಸಾಕುವಂತಿಲ್ಲ.
ಹಿಂದೆ ಕಪಿ ಚೇಷ್ಠೆ ಅಥವಾ ಕೋತಿಗಳ ಹಿಡಿದು ಪಳಗಿಸಿ ಪ್ರದರ್ಶನ ಮಾಡುವುದು, ಮನೆಯಲ್ಲಿ ಸಾಕುವ ಹವ್ಯಾಸಗಳಿತ್ತು. ಆದರೆ ಇದೀಗ ಕೋತಿಗಳನ್ನು ಸಾಕುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆಗೆ ಗುರಿಯಾಬೇಕಾಗುತ್ತದೆ. ಮಂಗಗಳಲ್ಲಿ ಹಲವು ಪ್ರಬೇಧಗಳಿದ್ದು, ಹಲವು ಪ್ರಬೇಧ ಅಳಿವಿನಂಚಿನಲ್ಲಿದೆ.
ಹಾವುಗಳನ್ನು ಮನೆಯಲ್ಲಿ ಸಾಕಲು ಭಾರತದಲ್ಲಿ ಅನುಮತಿ ಇಲ್ಲ. ಇದೀಗ ಈ ಪಟ್ಟಿಗೆ ಕೆಂಪು ಹಾವು ಎಂದೇ ಗುರುತಿಸಿಕೊಂಡಿರುವ ರೆಡ್ ಸ್ಯಾಂಡ್ ಬೋ ಹಾವನ್ನು ಸೇರಿಸಲಾಗಿದೆ. ಇದು ಅಳಿವಿನಂಚಿನಲ್ಲಿರುವ ಸರಿಸೃಪವಾಗಿದೆ. ತೋಳ ಹಾಗೂ ನರಿಗಳನ್ನು ಸಾಕುವಂತಿಲ್ಲ. ಇದು ಕಾಡು ಪ್ರಾಣಿಗಳಾಗಿದ್ದು, ಹಿಡಿಯುವುದು ಕೂಡ ಅಪರಾಧವಾಗಿದೆ.
ಕಾಡು ಪಾಪ, ಗೂಬೆ, ಗಿಡುಗಗಳನ್ನು ಮನೆಯಲ್ಲಿ ಸಾಕುವಂತಿಲ್ಲ. ಕಾಡು ಬೆಕ್ಕು ಸಾಕಾಣಿಗೂ ನಿಷೇಧ ಹೇರಲಾಗಿದೆ. ಇನ್ನು ಅಳಿವಿನಂಚಿನಲ್ಲಿರುವ ಭಾರತದ ದೊಡ್ಡ ಗಾತ್ರದ ಅಳಿಲು ಅಥವಾ ಮಲಬಾರ್ ಸ್ಕ್ವಿರಿಲ್ ಕೂಡ ಸಾಕುವಂತಿಲ್ಲ. ಇದೇ ರೀತಿ ಆಮೆ, ಉಡ ಸೇರಿದಂತೆ ಇತರ ಸರಿಸೃಪ ಹಾಗೂ ಪ್ರಾಣಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ.
ಭಾರತದ ವೈಲ್ಡ್ ಲೈಫ್ ಪ್ರೊಟೆಕ್ಷನ್ ಡೈರೆಕ್ಟರ್ ಸುಮಂತಬಿಂದುಮಾಧವ್ ಈ ಕುರಿತು ಮಾತನಾಡಿದ್ದಾರೆ. ವನ್ಯ ಜೀವಿಗಳನ್ನು ನೋಯಿಸುವುದು ಅಪರಾಧವಾಗಿದೆ. ಹಲವು ಪ್ರಬೇಧಗಳು ನಶಿಸಿ ಹೋಗಿದೆ. ಇರುವ ವನ್ಯ ಜೀವಿಗಳ ಸಂತತಿಯೂ ಕಡಿಮೆಯಾಗಿದೆ. ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಇನ್ನು ಕಾಡಿನಂಚಿನಲ್ಲಿ ನಡೆಯುತ್ತಿರುವ ವನ್ಯ ಜೀವಿ ಹಾಗೂ ಮಾನವ ಸಂಘರ್ಷಕ್ಕೆ ಅಂತ್ಯ ಹಾಡುವ ನಿಟ್ಟನಲ್ಲಿ ಕಾರ್ಯಕ್ರಮ ರೂಪಿಸಬೇಕಿದೆ ಎಂದಿದ್ದಾರೆ.