ಜಿಮ್ ಮಾಡೋವಾಗ್ಲೆ ಹೃದಯಾಘಾತ ! ಇದ್ಯಾಕೆ ಈಗ ಕಾಮನ್ ಆಗುತ್ತಿದೆ!
ಕಳೆದ ಕೆಲವು ವರ್ಷಗಳ ಹೃದಯ ಸಂಬಂಧಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಂಕಿಅಂಶಗಳನ್ನು ಗಮನಿಸಿದರೆ ಶಾಕ್ ಆಗೋದು ಖಂಡಿತಾ. ಯಾಕೆಂದರೆ ಯುವಜನರಲ್ಲಿ ಹೃದ್ರೋಗ ಮತ್ತು ಹೃದಯಾಘಾತದ ಪ್ರಕರಣಗಳು ತುಂಬಾ ಹೆಚ್ಚುತ್ತಿವೆ ಎಂದು ತಿಳಿದಿದೆ. ಸಾಮಾನ್ಯವಾಗಿ ಸಂಶೋಧನೆಗಳ ಪ್ರಕಾರ ದೈಹಿಕ ಚಟುವಟಿಕೆ ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸುತ್ತದೆ, ಆದರೆ ಗಂಭೀರ ವಿಷಯವೆಂದರೆ ಅನೇಕ ಜನರು ಜಿಮ್ ನಲ್ಲಿಯೇ ಹೃದಯಾಘಾತದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.
ಇತ್ತೀಚೆಗೆ, ಹಾಸ್ಯನಟ ರಾಜು ಶ್ರೀವಾಸ್ತವ ಮತ್ತು ನಟ ಸಿದ್ಧಾರ್ಥ್ ಶುಕ್ಲಾ ಜಿಮ್ಮಿಂಗ್ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ಹೀಗಿರೋವಾಗ, ಜಿಮ್ ಗೆ (gym) ಹೋಗುವವರಲ್ಲಿ ಇಂತಹ ಗಂಭೀರ ಸಮಸ್ಯೆ ಏಕೆ ಹೆಚ್ಚುತ್ತಿದೆ ಎಂಬ ಪ್ರಶ್ನೆ ಮೂಡೋದಂತೂ ಖಂಡಿತಾ. ಹಾಗಿದ್ರೆ, ಹೃದ್ರೋಗ ಸಮಸ್ಯೆ ತಪ್ಪಿಸಲು ಜಿಮ್ ಗೆ ಹೋಗುವುದನ್ನು ನಿಲ್ಲಿಸಬೇಕೆ?
ನಿಯಮಿತವಾಗಿ ವ್ಯಾಯಾಮ ಮಾಡೋದ್ರಿಂದ ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಗಟ್ಟಬಹುದು. ಆದ್ದರಿಂದ ಜಿಮ್ ಹೋಗೋದನ್ನು ನಿಲ್ಲಿಸೋದು ಒಂದು ಆಯ್ಕೆಯಲ್ಲ ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ. ಮೊದಲನೆಯದಾಗಿ, ಜನರು ಜಿಮ್ ನಲ್ಲಿ ಏಕೆ ಹೃದಯಾಘಾತಕ್ಕೆ (heart attack) ಒಳಗಾಗುತ್ತಿದ್ದಾರೆ ಎಂದು ನಾವು ಅರ್ಥಮಾಡಿಕೊಳ್ಳಬೇಕು? ಅಪಾಯದ ಅಂಶಗಳನ್ನು ಅರ್ಥಮಾಡಿಕೊಂಡ ನಂತರ, ಅವುಗಳನ್ನು ತಡೆಗಟ್ಟುವ ಮಾರ್ಗಗಳನ್ನು ಅನುಸರಿಸಿದ್ರೆ ಹೃದಯಾಘಾತದ ಅಪಾಯ ಕಡಿಮೆಯಾಗುತ್ತೆ.
ಹೃದಯಾಘಾತಗಳು ಜಿಮ್ ಗೆ ಹೋಗುವುದರಿಂದ ಉಂಟಾಗುವುದಿಲ್ಲ, ಆದರೆ ನಮ್ಮ ಕೆಲವು ತಪ್ಪುಗಳು ಮತ್ತು ಸಮಸ್ಯೆಗಳು ಅದರ ಅಪಾಯವನ್ನು ಹೆಚ್ಚಿಸುತ್ತವೆ, ಇದನ್ನು ಎಲ್ಲಾ ಜನರು ಅರ್ಥ ಮಾಡಿಕೊಳ್ಳಬೇಕು. ಹಾಗಿದ್ರೆ ಬನ್ನಿ, ಜಿಮ್ ನಲ್ಲಿ ಯಾವ ತಪ್ಪು ಮಾಡಬಾರದು ಅನ್ನೋದನ್ನು ನಾವು ನೋಡೋಣ.
ವೈದ್ಯರು ಏನು ಹೇಳುತ್ತಾರೆ?
ಕೆಲವು ಹೃದಯಾಘಾತ ಪ್ರಕರಣಗಳಿಂದ, ಜಿಮ್ಗೆ ಹೋಗುವ ಬಗ್ಗೆ ಜನರ ಮನಸ್ಸಿನಲ್ಲಿ ಭಯವಿದೆ. ಆದಾಗ್ಯೂ, ಕೆಲವು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಅಂತಹ ಅಪಾಯಗಳಿಂದ ಸುರಕ್ಷಿತವಾಗಿರಬಹುದು. ಹಾಗಿದ್ರೆ ಅದಕ್ಕೆ ನಾವೇನು ಮಾಡಬೇಕು? ಅನ್ನೋದನ್ನು ವೈದ್ಯರು ತಿಳಿಸಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯ ದೇಹ, ಶಕ್ತಿ ಮತ್ತು ಸಾಮರ್ಥ್ಯ ವಿಭಿನ್ನವಾಗಿವೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಜಿಮ್ ನಲ್ಲಿ ಅಭ್ಯಾಸ ಮಾಡುತ್ತಿದ್ದರೆ ಅದು ಸುರಕ್ಷಿತ. ನೀವು ಈಗಾಗಲೇ ಹೃದ್ರೋಗ (heart problem) ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಹೊಂದಿದ್ದರೆ, ಈ ಬಗ್ಗೆ ನಿಮ್ಮ ತಜ್ಞರ ಸಲಹೆಯ ಆಧಾರದ ಮೇಲೆ ಮಾತ್ರ ಜಿಮ್ ಅಥವಾ ವ್ಯಾಯಾಮ ಆಯ್ಕೆ ಮಾಡಿ. ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವ ಮೂಲಕ, ನೀವು ಅಪಾಯವನ್ನು ಕಡಿಮೆ ಮಾಡಬಹುದು.
ಜಿಮ್ ಸಮಯದಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಡಿ
ಜಿಮ್ ಸಮಯದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ತಪ್ಪಿಸಲು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ. ವ್ಯಾಯಾಮ ಮಾಡೋ ಮುನ್ನ ದೇಹವನ್ನು ಚೆನ್ನಾಗಿ ವಾರ್ಮ್ ಅಪ್ (warmup) ಮಾಡುವುದು ಮತ್ತು ವ್ಯಾಯಾಮದ ನಂತರ ದೇಹವನ್ನು ತಂಪಾಗಿಸುವುದು ತುಂಬಾ ಅಗತ್ಯ.
ಹೃದಯದಿಂದ ಹೆಚ್ಚುವರಿ ಒತ್ತಡ ಕಡಿಮೆ ಮಾಡುವಲ್ಲಿ ವ್ಯಾಯಮದ ಮೊದಲು ಮತ್ತು ನಂತರ ಮಾಡುವ ಕ್ರಿಯೆಗಳು ನಿಮಗೆ ಸಹಾಯಕ. ವ್ಯಾಯಾಮದ ಸಮಯದಲ್ಲಿ ಹಗುರವಾದ ಬಟ್ಟೆಗಳನ್ನು ಧರಿಸಿ, ನೀವು ಜಿಮ್ ಮಾಡುವ ಸ್ಥಳದಲ್ಲಿ, ಗಾಳಿಯಾಡುವಿಕೆಯ ಉತ್ತಮ ವ್ಯವಸ್ಥೆ ಇದೆಯೇ ಅನ್ನೋದನ್ನು ನೋಡಿ. ಫಿಟ್ ನೆಸ್ ಟ್ರೈನರ್ ಮೇಲ್ವಿಚಾರಣೆಯಲ್ಲಿ ಮಾತ್ರ ವರ್ಕೌಟ್ ಮಾಡಿ, ಇದು ಯಾವುದೇ ರೀತಿಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಇಂತಹ ತಪ್ಪುಗಳನ್ನು ತಪ್ಪಿಸಿ
ಆರೋಗ್ಯ ತಜ್ಞರು ಹೇಳುವ ಪ್ರಕಾರ, ಜಿಮ್ನಲ್ಲಿ ಹೃದಯಾಘಾತ ಅಥವಾ ಇತರ ರೀತಿಯ ಗಾಯ ಅಪಘಾತಗಳಿಗೆ ಪ್ರಮುಖ ಕಾರಣವೆಂದರೆ ನಾವು ನಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ತೂಕ ಎತ್ತಲು ಪ್ರಾರಂಭಿಸುತ್ತೇವೆ ಅಥವಾ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಹೆಚ್ಚು ತೀವ್ರತೆಯ ವ್ಯಾಯಾಮಗಳನ್ನು (exercise)ಮಾಡೋದು. ಈ ತಪ್ಪುಗಳನ್ನು ಯಾವತ್ತೂ ಮಾಡಬೇಡಿ.
ನಿಮ್ಮ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಯಾವಾಗಲೂ ವ್ಯಾಯಾಮವನ್ನು ಮಾಡಬೇಕು. ವ್ಯಾಯಾಮದ ಸಮಯದಲ್ಲಿ ನೀವು ನೋವು, ಅಸೌಕರ್ಯ, ವಾಕರಿಕೆ, ತಲೆತಿರುಗುವಿಕೆ ಅಥವಾ ಎದೆ ನೋವನ್ನು ಅನುಭವಿಸಿದರೆ, ತಕ್ಷಣ ವ್ಯಾಯಾಮವನ್ನು ನಿಲ್ಲಿಸಿ. ಜೊತೆಗೆ ಜಿಮ್ ನಲ್ಲಿ ಇರುವವರ ಗಮನಕ್ಕೆ ತರುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.
ನೀವು ಈಗಾಗಲೇ ಯಾವುದೇ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದರೆ, ವೈದ್ಯರ ಸಲಹೆ ಮೇರೆಗೆ ಮಾತ್ರ ವ್ಯಾಯಾಮ ಮಾಡಿ ಮತ್ತು ಹೃದಯದ ಮೇಲೆ ಯಾವುದೇ ಹೆಚ್ಚುವರಿ ಒತ್ತಡ ಉಂಟಾಗದಂತೆ ವ್ಯಾಯಾಮಗಳನ್ನು ನೀವೇ ಆರಿಸಿಕೊಳ್ಳಿ. ಇದನ್ನು ಸರಿಯಾಗಿ ಅನುಸರಿಸಿದರೆ ಮಾತ್ರ ಹೃದಯಾಘಾತದ ಅಪಾಯ ಕಡಿಮೆಯಾಗುತ್ತೆ.