Asia Cup 2025: ಶತಕದ ಹೊಸ್ತಿಲಲ್ಲಿ ಅರ್ಶದೀಪ್ ಸಿಂಗ್! ಈ ದಾಖಲೆ ಯಾವ ಭಾರತೀಯನೂ ಮಾಡಿಲ್ಲ
ದುಬೈ: ಏಷ್ಯಾಕಪ್ ಟೂರ್ನಿಯಲ್ಲಿಂದು ಭಾರತ ತಂಡವು ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವ ಎಡಗೈ ವೇಗಿ ಅರ್ಶದೀಪ್ ಸಿಂಗ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

2025ರ ಏಷ್ಯಾಕಪ್ ಟೂರ್ನಿಯಲ್ಲಿಂದು ಹಾಲಿ ಚಾಂಪಿಯನ್ ಭಾರತ ತಂಡವು ಯುಎಇ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ ವಹಿಸಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಏಷ್ಯಾಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಮೇಲ್ನೋಟಕ್ಕೆ ಭಾರತ ಈ ಬಾರಿ ಏಷ್ಯಾಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.
ಇನ್ನು ಇದೇ ವೇಳೆ ಟೀಂ ಇಂಡಿಯಾ ಎಡಗೈ ವೇಗಿ ಅರ್ಶದೀಪ್ ಸಿಂಗ್, ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಅರ್ಶದೀಪ್ ಸಿಂಗ್ ಇದೀಗ ಶತಕದ ಹೊಸ್ತಿಲಲ್ಲಿದ್ದಾರೆ.
ಹೌದು, ಅರ್ಶದೀಪ್ ಸಿಂಗ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 63 ಪಂದ್ಯಗಳನ್ನಾಡಿ ಈಗಾಗಲೇ 99 ವಿಕೆಟ್ ಕಬಳಿಸಿದ್ದು, ಇನ್ನೊಂದು ವಿಕೆಟ್ ಕಬಳಿಸಿದರೆ 100 ವಿಕೆಟ್ ಕಬಳಿಸಿದ ಅಪರೂಪದ ಸಾಧನೆ ಮಾಡಲಿದ್ದಾರೆ.
ಇದುವರೆಗೂ ಭಾರತದ ಯಾವೊಬ್ಬ ಬೌಲರ್ ಕೂಡಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನೂರು ವಿಕೆಟ್ ಕಬಳಿಸಿದ ಸಾಧನೆ ಮಾಡಿಲ್ಲ. ಹೀಗಾಗಿ ಅರ್ಶದೀಪ್ ಸಿಂಗ್ ಹೊಸ ಮೈಲಿಗಲ್ಲು ನೆಡಲು ಸಜ್ಜಾಗಿದ್ದಾರೆ.
ಸದ್ಯ ಟೀಂ ಇಂಡಿಯಾ ಅನುಭವಿ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್, 80 ಪಂದ್ಯಗಳನ್ನಾಡಿ 96 ವಿಕೆಟ್ ಕಬಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ 114 ಪಂದ್ಯಗಳಿಂದ 94 ವಿಕೆಟ್ ಹಾಗೂ ಜಸ್ಪ್ರೀತ್ ಬುಮ್ರಾ 70 ಪಂದ್ಯಗಳನ್ನಾಡಿ 89 ವಿಕೆಟ್ ಕಬಳಿಸುವ ಮೂಲಕ ಕ್ರಮವಾಗಿ ಮೊದಲ ನಾಲ್ಕು ಸ್ಥಾನದಲ್ಲಿದ್ದಾರೆ.