- Home
- Karnataka Districts
- Bengaluru Urban
- ಚಿನ್ನದಂಥ ಹೆಂಡ್ತಿ ಇದ್ದರೂ ಇನ್ನೊಬ್ಬಳ ಮೋಹಕ್ಕೆ ಬಿದ್ದ, ಪ್ರಶ್ನೆ ಮಾಡಿದ್ದಕ್ಕೆ ವರದಕ್ಷಿಣೆ ಕಿರುಕುಳ ಕೊಟ್ಟ!
ಚಿನ್ನದಂಥ ಹೆಂಡ್ತಿ ಇದ್ದರೂ ಇನ್ನೊಬ್ಬಳ ಮೋಹಕ್ಕೆ ಬಿದ್ದ, ಪ್ರಶ್ನೆ ಮಾಡಿದ್ದಕ್ಕೆ ವರದಕ್ಷಿಣೆ ಕಿರುಕುಳ ಕೊಟ್ಟ!
ಬೆಂಗಳೂರಿನಲ್ಲಿ ಪತಿಯ ಅಕ್ರಮ ಸಂಬಂಧ ಮತ್ತು ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ವಿವಾಹವಾದ ದಂಪತಿಗೆ ಒಂದು ಮಗು ಇದೆ. ಪತಿಯ ಕಿರುಕುಳದಿಂದ ಬೇಸತ್ತು ಪತ್ನಿ ನೇಣಿಗೆ ಶರಣಾಗಿದ್ದಾರೆ.

ಚಿನ್ನದಂಥ ಹೆಂಡ್ತಿ ಇದ್ದರೂ ಇನ್ನೊಬ್ಬಳ ಮೋಹಕ್ಕೆ ಪತಿರಾಯ ಬಿದ್ದಿದ್ದ. ಇದನ್ನು ಹೆಂಡ್ತಿ ಪ್ರಶ್ನೆ ಮಾಡಿದ್ದಕ್ಕೆ ಅವಳಿಗೆ ವರದಕ್ಷಿಣೆ ಕಿರುಕುಳ ಕೊಡೋಕೆ ಶುರು ಮಾಡಿದ್ದ. ಗಂಡ ಹಿಂಸೆಯಿಂದ ಬೇಸತ್ತ ಪತ್ನಿ ತನ್ನ ಪುಟ್ಟ ಹೆಣ್ಣುಮಗುವನ್ನು ಬಿಟ್ಟು ನೇಣಿಗೆ ಕೊರಳೊಡ್ಡಿರುವ ಘಟನೆ ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಬಾಗಲಗುಂಟೆಯ ದಾಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ. 28 ವರ್ಷದ ಪೂಜಶ್ರೀ ಗಂಡನ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಘಟನೆ ನಡೆದಿದೆ.
ಮೂರು ವರ್ಷದ ಹಿಂದೆ ಮನೆಯವರ ನಿಶ್ಚಯದಂತೆ ನಂದೀಶ್ ಅವರನ್ನು ಪೂಜಶ್ರೀ ವಿವಾಹವಾಗಿದ್ದರು. ನಂದೀಶ್ ಹಾಗೂ ಪೂಜಶ್ರೀಗೆ ಒಂದು ಹೆಣ್ಣು ಮಗು ಕೂಡ ಇದೆ.
ನಂದೀಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರೆ, ಪೂಜಶ್ರೀ ಕೂಡಾ ಖಾಸಗಿ ಬ್ಯಾಂಕ್ ನಲ್ಲಿ ಕ್ಯಾಷಿಯರ್ ಆಗಿ ವೃತ್ತಿ ಮಾಡುತ್ತಿದ್ದರು.
ಮದುವೆಯಾದ ಒಂದು ವರ್ಷದ ನಂತರ ನಂದೀಶ್ ಗೆ ಅಕ್ರಮ ಸಂಬಂಧ ಇರುವುದು ಪೂಜಶ್ರೀಗೆ ಗೊತ್ತಾಗಿದೆ. ಇದೇ ವಿಚಾರಕ್ಕೆ ಪೂಜಶ್ರೀ ಪದೇ ಪದೇ ಪ್ರಶ್ನೆ ಮಾಡುತ್ತಿದ್ದಳು. ಈ ವೇಳೆ ನಂದೀಶ್ ನಿಮ್ಮ ತಾಯಿ ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಜಗಳವಾಡುತ್ತಿದ್ದ.
ಎರಡು ಮೂರು ಬಾರಿ ಇವರ ನಡುವೆ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಕಿರುಕುಳ ನೀಡೋದಿಲ್ಲ ಅಂತ ಹೇಳಿ ಪೂಜಶ್ರೀಯನ್ನು ನಂದೀಶ್ ಕರೆದುಕೊಂಡು ಹೋಗುತ್ತಿದ್ದ. ಮೂರು ದಿನಗಳ ಹಿಂದೆ ನಂದೀಶ್ ಇದೇ ರೀತಿ ಮತ್ತೆ ಜಗಳವಾಡಿದ್ದ.
ಹಲ್ಲೆ ಮಾಡಿದ್ದ ಹಿನ್ನೆಲೆ ಪೂಜಶ್ರೀ ತಾಯಿ ಮನೆಗೆ ಬಂದಿದ್ದಳು. ಮರು ದಿನ ಬೆಳಿಗ್ಗೆ ನಂದೀಶ್ ಕಥೆ ಕಟ್ಟಿ ಕರೆದುಕೊಂಡು ಹೋಗಿದ್ದ. ಭಾನುವಾರ ಬೆಳಗ್ಗೆ ಪೂಜಶ್ರೀ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.