ರಾಯಲ್ ಎನ್‌ಫೀಲ್ಡ್ ಬುಲೆಟ್ ಫ್ಯಾಕ್ಟರಿ ಹೇಗಿದೆ ಗೊತ್ತಾ?
- ಆರ್‌ಕೆಬಿ
1955ರಲ್ಲಿ ಆಗಿನ ಮದ್ರಾಸಿನಲ್ಲಿ ಮೊತ್ತಮೊದಲ ಬಾರಿಗೆ ಆರಂಭವಾದ ಬ್ರಿಟನ್ ಮೂಲದ ರಾಯಲ್ ಎನ್‌ಫೀಲ್ಡ್ ಬೈಕ್ ಕಂಪನಿಯ ಉತ್ಪಾದನಾ ಘಟಕ ಇದೀಗ ವಿಸ್ತರಿಸಿದೆ. ಈಗಿನ ಚೆನ್ನೈ ಸುತ್ತಮುತ್ತ ಈಗಾಗಲೇ ಮೂರು ಘಟಕಗಳು ತಲೆಯೆತ್ತಿವೆ. ನಾಲ್ಕನೆಯ ಘಟಕ ಇನ್ನೇನು ಸಿದ್ಧವಾಗುವ ಹಂತದಲ್ಲಿದೆ. ಕಂಪನಿ ಇತ್ತೀಚೆಗಷ್ಟೇ ತನ್ನ ಅತ್ಯಂತ ಸುಧಾರಿತ ಬುಲೆಟ್ 350 ಮಾದರಿಯ ಬೈಕ್ ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಆಯ್ದ ಮಾಧ್ಯಮ ಪ್ರತಿನಿಧಿಗಳನ್ನು ಇದೇ ಮೊದಲ ಬಾರಿಗೆ ಚೆನ್ನೈ ಬಳಿಯ ವಲ್ಲಂ ವಡಗಲ್ ನಲ್ಲಿರುವ ತನ್ನ ಘಟಕಕ್ಕೆ ಆಹ್ವಾನಿಸಿ ಸುತ್ತಾಡಿಸಿದೆ. ಅದರ ಆಯ್ದ ಚಿತ್ರ-ದೃಶ್ಯ ಸಂಪುಟ ಇಲ್ಲಿದೆ.
ಬೈಕುಗಳ ಬಿಡಿಭಾಗಗಳಿಗೆ ಯಂತ್ರಗಳಿಂದಲೇ ಪೇಂಟ್ ಮಾಡಲಾಗುತ್ತದೆ. ಅದನ್ನು ಒಬ್ಬಿಬ್ಬರು ಸಿಬ್ಬಂದಿ ನಿರಂತರವಾಗಿ ಪರಿಶೀಲಿಸುತ್ತಾರೆ. ಸಣ್ಣ ಲೋಪ ಕಂಡುಬಂದರೂ ಮತ್ತೆ ಪೇಂಟಿಂಗ್ ಗೆ ಕಳುಹಿಸುತ್ತಾರೆ.
ಯಂತ್ರಗಳಿಂದ ಪೇಂಟಿಂಗ್, ಪರೀಕ್ಷಕರಿಂದ ಪರಿಶೀಲನೆಗೆ ಒಳಗಾದ ಬಳಿಕ ಪ್ರತಿಯೊಂದು ಬಿಡಿಭಾಗವನ್ನೂ ಸೂಕ್ತವಾಗಿ ಒಣಗಿಸಿ ಬೈಕ್ ಜೋಡಣೆಗೆ ಸ್ವಯಂಚಾಲಿತ ವ್ಯವಸ್ಥೆಯಲ್ಲೇ ಕಳುಹಿಸಿಕೊಡಲಾಗುತ್ತದೆ.
ಪೇಂಟಿಂಗ್ ಮಾಡಿ ಒಣಗಿಸಿದ ಮೇಲೆ ಸಿದ್ಧವಾದ ಬಿಡಿಭಾಗಗಳನ್ನು ಅಚ್ಚುಕಟ್ಟಾಗಿ ರಾಯಲ್ ಎನ್‌ಫೀಲ್ಡ್ ಘಟಕದ ಒಂದೆಡೆ ಸಜ್ಜು ಮಾಡಿ ಇಡಲಾಗುತ್ತದೆ. ಬಳಿಕ ಅವುಗಳನ್ನು ಜೋಡಣಾ ವಿಭಾಗಕ್ಕೆ ಒಯ್ಯಲಾಗುತ್ತದೆ.
ಸಂಪೂರ್ಣವಾಗಿ ಸ್ವಯಂಚಾಲಿತ ಯಂತ್ರಗಳಿಂದ ಅಂತಿಮ ಕುಸುರಿ, ಸ್ವಚ್ಛತೆ, ಜೋಡಣೆ, ಪರಿಶೀಲನೆಗೆ ಒಳಗಾಗಿ ಸಿಬ್ಬಂದಿಯಿಂದ ಸೈ ಎನಿಸಿಕೊಂಡ ಬಳಿಕವಷ್ಟೇ ಎಂಜಿನುಗಳನ್ನು ಬೈಕುಗಳಿಗೆ ಜೋಡಿಸಲಾಗುತ್ತದೆ.
ಸಿದ್ಧವಾದ ಎಂಜಿನುಗಳನ್ನು ಕಂಪ್ಯೂಟರ್ ಚಾಲಿತ ಯಂತ್ರಗಳಿಗೆ ಜೋಡಿಸಿ ಬೈಕಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೋ, ಹಾಗೆಯೇ ಕಾರ್ಯನಿರ್ವಹಿಸುವಂತೆ ಮಾಡಿ ಪರಿಶೀಲನೆ ನಡೆಸಲಾಗುತ್ತದೆ.
ರಾಯಲ್ ಎನ್‌ಫೀಲ್ಡ್ ಉತ್ಪಾದನಾ ಘಟಕದಲ್ಲಿ ಅದ್ಭುತವಾದ ಮ್ಯೂಸಿಯಂ ಸೃಷ್ಟಿಸಲಾಗಿದೆ. ಇದರಲ್ಲಿ 1930ರ ದಶಕದಿಂದ 2010ರವರೆಗಿನ ವಿವಿಧ ಮಾದರಿಗಳ ಬೈಕುಗಳನ್ನು ಪುನರುತ್ಥಾನಗೊಳಿಸಿ ಪ್ರದರ್ಶನಕ್ಕಿಡಲಾಗಿದೆ.
ಬುಲೆಟ್ 350 ಬೈಕಿನ ಟ್ಯಾಂಕಿಗೆ ಕೈಯಿಂದಲೇ ಸ್ವರ್ಣವರ್ಣದ ಗೆರೆ ಎಳೆಯಲಾಗುತ್ತದೆ ಎಂಬುದು ವಿಶೇಷ. ಅಲ್ಲಿಗೆ ಭೇಟಿ ನೀಡುವವರಿಗೂ ಅವಕಾಶ ನೀಡಿ ಅದೆಷ್ಟು ಕಷ್ಟದ ಕೆಲಸ ಎಂಬುದನ್ನು ಮನದಟ್ಟು ಮಾಡಲಾಗುತ್ತದೆ.
ರಾಯಲ್ ಎನ್‌ಫೀಲ್ಡ್ ಮ್ಯೂಸಿಯಂನಲ್ಲಿ ಭಾರತೀಯ ಸೇನೆಯವರು ಬಳಸುತ್ತಿದ್ದ ಬುಲೆಟ್ ಬೈಕುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಈ ಪೈಕಿ ವಿಶ್ವದಾಖಲೆ ಬರೆದ ಟಾರ್ನೆಡೋ ಮಾದರಿಯ ಬೈಕೂ ಇದೆ.
ಕೆಲ ರಾಯಲ್ ಎನ್‌ಫೀಲ್ಡ್ ಬೈಕ್ ಪ್ರೇಮಿಗಳು ತಮ್ಮ ವಾಹನಗಳನ್ನು ವಿಶಿಷ್ಟವಾಗಿ ಮರುವಿನ್ಯಾಸ ಮಾಡಿದ್ದಾರೆ. ಅಂತಹ ಕೆಲ ಬೈಕುಗಳನ್ನೂ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಕೇರಳದ ಎನ್‌ಫೀಲ್ಡ್ ಪ್ರೇಮಿಯೊಬ್ಬ ತೇಗದ ಮರದಿಂದ ತಯಾರಿಸಿದ ಬುಲೆಟ್ 350 ಬೈಕಿನ ಪ್ರತಿಕೃತಿಯನ್ನೂ ಪ್ರದರ್ಶಿಸಲಾಗಿದೆ. ಸ್ಕ್ರೂ ಸಮೇತ ಇದರ ಪ್ರತಿ ಭಾಗವೂ ತೇಗದ ಮರದ್ದು ಎಂಬುದು ವಿಶೇಷ.
ರಾಯಲ್ ಎನ್‌ಫೀಲ್ಡ್ ಕಂಪನಿಯ ಹಾಲಿ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ್ ಲಾಲ್ 2004ರಲ್ಲಿ ತಮ್ಮ ಮದುವೆ ದಿಬ್ಬಣಕ್ಕೊಯ್ದ ಬೈಕನ್ನೂ ಇಲ್ಲಿ ಅಲಂಕರಿಸಿ ಪ್ರದರ್ಶನಕ್ಕೆ ಇಡಲಾಗಿದೆ.
1994ರಲ್ಲಿ ರಾಯಲ್ ಎನ್‌ಫೀಲ್ಡ್ ಇತಿಹಾಸಕಾರ ಗಾರ್ಡನ್ ಮೇ ತೆಗೆದ ಚಿತ್ರವಿದು. ಇದರಲ್ಲಿ ನಡೆದು ಬರುತ್ತಿರುವ ಆ ಯುವ ಎಂಜಿನಿಯರೇ ಕಂಪನಿಯ ಈಗಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜನ್!
ಜಾತ್ರೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತಿದ್ದ, 'ಮರಣ ಬಾವಿ' ಎಂದೇ ಬಣ್ಣಿಸಲಾಗುತ್ತಿದ್ದ ಸಾಹಸ ಪ್ರದರ್ಶನಕ್ಕೆ ಬಳಸುತ್ತಿದ್ದ ಬುಲೆಟ್ ಅನ್ನು ಅದೇ ಸ್ವರೂಪದಲ್ಲಿ ರಾಯಲ್ ಎನ್‌ಫೀಲ್ಡ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.
ಮ್ಯೂಸಿಯಂನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕುಗಳ ಎಂಜಿನುಗಳ ಪ್ರದರ್ಶನದ್ದೇ ಪ್ರತ್ಯೇಕ ವಿಭಾಗವಿದೆ. ಅದರಲ್ಲಿ ಎಂಜಿನಿನ ಒಳಭಾಗದ ಪ್ರತಿ ಅಂಶವೂ ಕಾಣುವಂತೆ ಸಕ್ರಿಯ ಪ್ರದರ್ಶನ ಏರ್ಪಡಿಸಲಾಗಿದೆ.
1980-90ರ ದಶಕಗಳ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮಾದರಿಯ ಹಳೇ ಬೈಕುಗಳನ್ನು ಸಂಗ್ರಹಿಸಿ ಅವುಗಳು ಆಗಿನಂತೆಯೇ ಕಾಣುವಂತೆ ಮರುವಿನ್ಯಾಸಗೊಳಿಸಿ ಪ್ರದರ್ಶನಕ್ಕೆ ಇಡಲಾಗಿದೆ.
ರಾಯಲ್ ಎನ್‌ಫೀಲ್ಡ್ ಹೊರತಂದಿರುವ ಅತ್ಯಾಧುನಿಕ ಜೆ-ಶ್ರೇಣಿಯ ಎಂಜಿನುಗಳನ್ನು ಅಳವಡಿಸಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿರುವ ಬುಲೆಟ್ 350 ಸರಣಿಯ ಹೊಚ್ಚಹೊಸ ಬೈಕುಗಳು ಈ ಘಟಕದ ವಿಶೇಷ ಆಕರ್ಷಣೆ
2023ರ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕುಗಳು ಮಾರುಕಟ್ಟೆಗೆ ತೆರಳಲು ಸಿದ್ಧವಾಗಿ ನಿಂತಿರುವುದು. ಇವುಗಳನ್ನು ಫ್ಯಾಕ್ಟರಿ ಸುತ್ತಲೂ ಓಡಿಸಿ ಪರಿಶೀಲಿಸಿದ ಬಳಿಕವಷ್ಟೇ ದೇಶದ ವಿವಿಧೆಡೆಗೆ ಕಳುಹಿಸಲಾಗುತ್ತದೆ
ರಾಯಲ್ ಎನ್‌ಫೀಲ್ಡ್ ಕಂಪನಿಯ ಬೇರೆ ಘಟಕಗಳಿಂದ ಬರುವ ಬಿಡಿಭಾಗಗಳನ್ನು ಸ್ವಯಂಚಾಲಿತ ಯಂತ್ರಗಳೇ ಪರಿಶೀಲಿಸಿ, ಲೋಪಗಳನ್ನು ತಿದ್ದಿ, ಸ್ವಚ್ಛಗೊಳಿಸುವುದನ್ನು ನೋಡುವುದೇ ವಿಶಿಷ್ಟ ಅನುಭವ.
ಇತ್ತೀಚೆಗೆ ಬಿಡುಗಡೆಯಾದ ಜೆ-ಶ್ರೇಣಿಯ 350 ಸಿಸಿ ಎಂಜಿನ್ ಗಳಲ್ಲಿ 256 ಬಿಡಿಭಾಗಗಳಿವೆಯಂತೆ. ಇವುಗಳನ್ನು ಒಂದೊಂದಾಗಿ ಜೋಡಿಸಿ ಮಾನವಾಕೃತಿ ರಚಿಸಿದ್ದಾರೆ ಅಲ್ಲಿನ ಕಲಾಪ್ರೇಮಿ ಸಿಬ್ಬಂದಿಯೋರ್ವರು
1932ರಲ್ಲಿ ಬ್ರಿಟನ್ನಿನಲ್ಲಿ, 1955ರಲ್ಲಿ ಭಾರತದಲ್ಲಿ ಉತ್ಪಾದನೆಗೊಂಡು ಈಗಲೂ ಚಾಲ್ತಿಯಲ್ಲಿರುವ ವಿಶ್ವದ ಅತಿ ಸುದೀರ್ಘ ಬೈಕ್ ಎನಿಸಿಕೊಂಡಿರುವ ಬುಲೆಟ್ 350ಯ ಹೊಸ ಮಾದರಿ ಬಿಡುಗಡೆ ಸಂದರ್ಭ ಸಿಇಒ ಗೋವಿಂದರಾಜನ್