ಕೆಲವರು ತಮ್ಮದೇ ಆದ ಗ್ರೂಪ್‌ ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ಕುಟುಂಬದ ಸದಸ್ಯರ ಜೊತೆ ವಾಕ್‌ ಹೋಗುತ್ತಾರೆ. ಒಬ್ಬರೇ ಹೋಗುವುದು ಬೋರ್‌ ಎಂದು ಬಹುತೇಕರು ಮನೆಯಲ್ಲಿಯೇ ಇರುತ್ತಾರೆ.

ವಾಕಿಂಗ್‌ ಹೋಗುವುದು ಈಗ ಹವ್ಯಾಸವಷ್ಟೇ ಅಲ್ಲ, ಅನಿವಾರ್ಯವೂ ಆಗಿದೆ. ಬಹಳಷ್ಟು ಮಂದಿಗೆ ದೈಹಿಕ ಚಟುವಟಿಕೆ ಇರುವುದಿಲ್ಲ. ಆಫೀಸ್‌ ಇದ್ದರೆ ಆಫೀಸಲ್ಲಿ, ವರ್ಕ್‌ ಫ್ರಂ ಹೋಮ್‌ ಇದ್ದರೆ ಮನೆಯಲ್ಲಿ ಕುಳಿತೇ ಕೆಲಸ ಮಾಡುವುದು ರೂಢಿ ಆಗಿದೆ. ಹಾಗೆ ಕುಳಿತೇ ಇರುವುದು ಒಳ್ಳೆಯದಲ್ಲ ಅಂತ ಪಕ್ಕದ್ಮನೆ ಅಂಕಲ್‌ರಿಂದ ಹಿಡಿದು ಫ್ಯಾಮಿಲಿ ಡಾಕ್ಟರ್‌ವರೆಗೆ ಎಲ್ಲರೂ ಹೇಳುತ್ತಾರೆ. ಅದಕ್ಕೆ ತಕ್ಕಂತೆ ಮರುದಿನ ವೀರಾವೇಷದಿಂದ ಎದ್ದು ವಾಕಿಂಗ್‌ ಹೋದರೂ ನಾಲ್ಕನೇ ದಿನ ಬೋರ್‌ ಆಗಿರುತ್ತದೆ. ಯಾರಾದರೂ ಜೊತೆ ಇದ್ರೆ ಹೋಗಬಹುದು ಗುರು ಅನ್ನಿಸತೊಡಗುತ್ತದೆ.

ಕೆಲವರು ತಮ್ಮದೇ ಆದ ಗ್ರೂಪ್‌ ಕಟ್ಟಿಕೊಂಡಿರುತ್ತಾರೆ. ಇನ್ನು ಕೆಲವರು ಕುಟುಂಬದ ಸದಸ್ಯರ ಜೊತೆ ವಾಕ್‌ ಹೋಗುತ್ತಾರೆ. ಒಬ್ಬರೇ ಹೋಗುವುದು ಬೋರ್‌ ಎಂದು ಬಹುತೇಕರು ಮನೆಯಲ್ಲಿಯೇ ಇರುತ್ತಾರೆ. ಈಗ ಅಂಥವರಿಗೆಂದೇ ಅಥವಾ ಹೊಸ ಹೊಸ ಮನುಷ್ಯರನ್ನು ಭೇಟಿ ಮಾಡುವ ಕುತೂಹಲರಿಗೆಂದೇ ಹೊಸ ಆ್ಯಪ್‌ ಬಂದಿದೆ. ಅದರ ಹೆಸರು ವಾಕಿಂಗ್‌ ಪಾಲ್‌.

ಅದರರ್ಥ ವಾಕಿಂಗ್‌ ಸ್ನೇಹಿತ ಎಂದರ್ಥ. ಯಾರಾದರೂ ಒಬ್ಬರೇ ಇದ್ದು, ವಾಕಿಂಗ್‌ ಹೋಗುವಾಗ ಒಬ್ಬರು ಬೇಕು ಅನ್ನಿಸಿದರೆ ಈ ಆ್ಯಪ್‌ನಲ್ಲಿ ಬುಕ್‌ ಮಾಡಬಹುದು. ನೀವು ಎಲ್ಲಿಂದ ಎಲ್ಲಿಗೆ ವಾಕ್‌ ಹೋಗುತ್ತೀರಿ ಎಂದು ನಮೂದಿಸಿದರೆ ಆಸಕ್ತಿ ಇರುವವರು ಈ ವಾಕ್‌ನಲ್ಲಿ ನಿಮ್ಮ ಜೊತೆಯಾಗುತ್ತಾರೆ. ಸದ್ಯಕ್ಕೆ ಈ ಆ್ಯಪ್‌ ಬಹಳ ಜನಪ್ರಿಯವಾಗಿಲ್ಲ. ಆದರೆ ನಿಧಾನಕ್ಕೆ ಟ್ರೆಂಡ್‌ ಆಗುತ್ತಿದೆ.ಈ ಆ್ಯಪ್‌ ನೀವು ಎಲ್ಲಿಂದ ಎಲ್ಲಿ ಹೋಗುತ್ತೀರಿ ಅನ್ನುವ ಮಾಹಿತಿ ಬಹಿರಂಗ ಮಾಡುವುದಿಲ್ಲ. ಹಾಗಾಗಿ ಖಾಸಗಿತನಕ್ಕೆ ಧಕ್ಕೆ ಆಗುವುದಿಲ್ಲ.

ನೀವು ಬೇರೆ ಊರಿಗೆ ಹೋದಾಗ ಅಲ್ಲಿ ವಾಕಿಂಗ್‌ ಮಾಡಲು ಯಾರಾದರೂ ಇದ್ದರೆ ಚೆಂದ ಅನ್ನಿಸಿದರೆ ಅಲ್ಲಿಯೂ ವಾಕಿಂಗ್‌ ಪಾಲ್‌ ಹುಡುಕಬಹುದು. ಸದ್ಯಕ್ಕೆ ಎಲ್ಲಾ ಊರಿನಲ್ಲಿಯೂ ಜನ ಸಿಗದೇ ಇರಬಹುದು. ಆದರೆ ಬರುಬರುತ್ತಾ ಜಾಸ್ತಿ ಜಾಸ್ತಿ ಜನ ಆ್ಯಪ್‌ ಸೇರಿಕೊಂಡಂತೆ ದೊಡ್ಡ ಸಮುದಾಯವೇ ಇದರಲ್ಲಿ ದೊರಕುವುದರಲ್ಲಿ ಸಂಶಯವಿಲ್ಲ.