KBC Junior: ಕೌನ್ ಬನೇಗಾ ಕರೋಡ್‌ಪತಿ ಜೂನಿಯರ್ ಶೋನಲ್ಲಿ, ಬಾಲಕನೋರ್ವ ನಿರೂಪಕ ಅಮಿತಾಭ್ ಬಚ್ಚನ್ ಅವರೊಂದಿಗೆ ಉದ್ಧಟತನದಿಂದ ವರ್ತಿಸಿದ್ದು, ಆ ಬಾಲಕನ ವೀಡಿಯೋ ಭಾರಿ ವೈರಲ್ ಆಗಿರೋ ವಿಷ್ಯ ಗೊತ್ತು. ಆದರೆ, ಅದಕ್ಕೊಂದು ಕಾಮೆಂಟ್ ಬಂದಿದೆ, ಎಲ್ಲರೂ ತಪ್ಪದೇ ನೋಡಲೇಬೇಕು..
ಕೆಬಿಸಿ-ಉದ್ಧಟತನ ತೋರಿದ ಬಾಲಕ ವಿರುದ್ಧ ಕಾಮೆಂಟ್
ಬಾಲಿವುಡ್ ಬಿಗ್ ಬಿ ಖ್ಯಾತಿಯ ಅಮಿತಾಭ್ ಬಚ್ಚನ್ ಸೋನಿ ಟಿವಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಹೋಸ್ಟ್ ಎಂಬುದು ಹಲವರಿಗೆ ಗೊತ್ತಿದೆ. ಅಷ್ಟು ದೊಡ್ಡ ಸ್ಟಾರ್ ನಟ ಅಮಿತಾಭ್ ಬಚ್ಚನ್ ಅವರು ಪ್ರತಿಯೊಬ್ಬರನ್ನು ಗೌರವ ಕೊಟ್ಟು ಮಾತನಾಡಿಸುತ್ತಾ ಮಾದರಿ ಎನ್ನಿಸಿದ್ದಾರೆ. ಆದರೆ ಇತ್ತೀಚೆಗೆ ನಡೆದ 'ಕೆಬಿಸಿ ಜೂನಿಯರ್' ಶೋದಲ್ಲಿ ಬಾಲಕನೋರ್ವ ಅಮಿತಾಭ್ ಬಚ್ಚನ್ ಅವರೊಂದಿಗೆ ಉದ್ಧಟತನದಿಂದ ವರ್ತಿಸಿದ್ದು, ಅವಮಾನಿಸಿದ್ದು ಜಗತ್ತಿನಾದ್ಯಂತ ಸುದ್ದಿಯಾಗಿತ್ತು.
ಈ ಕಾರ್ಯಕ್ರಮದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದೂ, ಬಾಲಕನ ಸಹನೆ ಇಲ್ಲದ, ದೊಡ್ಡವರೆಂಬ ಗೌರವ ಇಲ್ಲದ ವರ್ತನೆಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದೂ ಎಲ್ಲವೂ ಈಗ ಮುಗಿದ ಅಧ್ಯಾಯ. ಆದರೆ, ಆ ವಿಡಿಯೋಗೆ ಬರುತ್ತಿರುವ ಕಾಮೆಂಟ್‌ಗಳು ಮಾತ್ರ ನಿಂತೇ ಇಲ್ಲ, ಸಾಗರೋಪಾದಿಯಲ್ಲಿ ಬರುತ್ತಿವೆ. ಆದರೆ, ಆ ಬಾಲಕನ ಉದ್ಧಟತನ ಹಾಗೂ ಆ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿದ್ದಕ್ಕೆ ಅಮಿತಾಭ್ ಬಚ್ಚನ್ ಅವರಿಗೆ ಬಹಳಷ್ಟು ಪ್ರಶಂಸೆ ಬರುತ್ತಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ ಈ ವಿಡಿಯೋಗೆ ಬಂದಿರುವ ಕಾಮೆಂಟ್ ಒಂದು ಇಡೀ ಸಮಾಜವೇ ಯೋಚಿಸುವಂತೆ ಮಾಡುತ್ತಿದೆ.
ಹಾಗಿದ್ದರೆ ಆ ಕಾಮೆಂಟ್‌ನಲ್ಲಿ ಅಂಥದ್ದೇನಿದೆ?
'ಹೆಣ್ಣನ್ನು ಹೆಣ್ಣಿನಂತೆ, ಗಂಡನ್ನು ಗಂಡಿನಂತೆ, ಮಕ್ಕಳನ್ನು ಮಕ್ಕಳಂತೆ ಬೆಳೆಸಲಾಗದ- ಕುಟುಂಬಪ್ರಜ್ಞೆಯೇ ಇಲ್ಲದ ಕುಟುಂಬಗಳಿಂದ ದೊಡ್ಡ ಬದಲಾವಣೆಯೇನನ್ನೂ ನಿರೀಕ್ಷಿಸಲಾಗದು.. ಅವೆಲ್ಲಾ ಕೊಡುವುದು ಇಂಥದ್ದೇ ಯಡವಟ್ಟಿನ ಪ್ರಾಡಕ್ಟ್ಸ್ (Products)..' ಈ ಕಾಮೆಂಟ್ ತಲೆಯಲ್ಲಿ ಬುದ್ಧಿ ಇರುವ ಯಾರೇ ಆದರೂ ಯೋಚಿಸುವಂತೆ ಮಾಡುತ್ತದೆ. ಹೌದು, ಇಂದು ಸಮಾಜ ಎತ್ತ ಸಾಗುತ್ತಿದೆ? ಹೆಣ್ಣುಮಕ್ಕಳು ಹೆಣ್ಣುಮಕ್ಕಳ ವರ್ತನೆಯಲ್ಲಿ ಇದ್ದಾರೆಯೇ? ಗಂಡುಮಕ್ಕಳು ಗಂಡುಮಕ್ಕಳಂತೆ ಬೆಳೆದಿದ್ದಾರೆಯೇ? ಅದಿರಲಿ, ಮಕ್ಕಳು ಮಕ್ಕಳಂತೆ ಇದ್ದಾರೆಯೇ? ಮಕ್ಕಜಳು ಮಕ್ಕಳಂತೆ ಇಲ್ಲ ಎಂಬುದಕ್ಕೆ ತಾಜಾ ಹಾಗೂ ಪರ್ಫೆಕ್ಟ್ ಉದಾಹರಣೆಯಾಗಿ ಈ ಕೆಬಿಸಿ ಜೂನಿಯರ್ ಬಾಲಕ ಇಶಿತ್ ಭಟ್ ನಿಲ್ಲುತ್ತಾನೆ.
ಇನ್ನು, '@X_fromIndia' ಎಂಬ ಟ್ವಿಟ್ಟರ್ ಖಾತೆಯಿಂದಲೂ ಈ ವಿಡಿಯೋ ಪೋಸ್ಟ್ ಆಗಿದ್ದು, ಕೆಬಿಸಿಯಲ್ಲಿ ಅಮಿತಾಬ್ ಬಚ್ಚನ್ ಅವರನ್ನು ಮಾತನಾಡುವುದಕ್ಕೂ ಬಿಡದೇ ಅಡ್ಡಿಪಡಿಸಿದ ಬಾಲಕ ಇಶಿತ್ ಭಟ್ ವರ್ತನೆಗೆ ಎಲ್ಲರೂ ಆತನ ಹೆತ್ತವರನ್ನು ದೂಷಿಸುತ್ತಿದ್ದಾರೆ. ಆದರೆ 'ತಲೆಮಾರುಗಳ ವರ್ತನೆಗಳು ಬರುಬರುತ್ತಾ ಕೆಟ್ಟದಾಗುತ್ತಿದೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡುವ ಮೂಲಕ ಸಮಾಜದ ಬಗ್ಗೆಯೇ ಬೆರಳು ತೋರಿಸಿದ್ದಾರೆ.

ಹಾಗಿದ್ದರೆ ಕೆಬಿಸಿ ಜ್ಯೂನಿಯರ್ ಶೋದಲ್ಲಿ ನಡೆದಿದ್ದಾರೂ ಏನು?
ವೀಡಿಯೋದಲ್ಲಿ ಕಾಣುವಂತೆ, ಬಾಲಕ ಈ ಕೆಬಿಸಿ ಶೋದ ಚೇರ್‌ನಲ್ಲಿ ಕುಳಿತ ಕೂಡಲೇ 'ನನಗೆ ಈ ಶೋದ ನಿಯಮಗಳನ್ನೆಲ್ಲಾ ಹೇಳುವುದಕ್ಕೆ ಹೋಗಬೇಡಿ ನನಗೆ ಎಲ್ಲವೂ ಗೊತ್ತಿದೆ' ಎಂದು ಶುರುವಿನಲ್ಲೇ ಉದ್ಧಟತನದಿಂದ ಆದೇಶ ಮಾಡುತ್ತಾನೆ. (ಈ ಶೋದಲ್ಲಿ ಅಮಿತಾಭ್ ಅವರು ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಗೂ ಅವರಿಗೆ ಶೋದ ನಿಯಮಗಳು ಮೊದಲೇ ಗೊತ್ತಿದ್ದರೂ ತಾವು ಒಂದು ಸಲ ಆ ನಿಯಮವನ್ನು ಸ್ಪರ್ಧಿಗಳಿಗೆ ಹೇಳುತ್ತಾರೆ.) ಆದರೆ ಈ ಬಾಲಕ ಆರಂಭದಲ್ಲೇ ಅಮಿತಾಭ್ ಮಾತಿಗೆ ಬ್ರೇಕ್ ಹಾಕಿದ್ದಾನೆ. ಬಾಲಕನ ಈ ಮಾತಿಗೆ ಅಮಿತಾಭ್ ಅವರು ತಾಳ್ಮೆ ಕಳೆದುಕೊಳ್ಳದೇ ಸರಿ ಎಂದು ಹೇಳಿದ್ದಾರೆ.
ನಂತರ ಮೊದಲನೇ ಪ್ರಶ್ನೆ ಕೇಳಿದ್ದಾರೆ. ಇವುಗಳಲ್ಲಿ ಯಾವುದನ್ನು ಬೆಳಗ್ಗೆ ತಿನ್ನಲಾಗುತ್ತದೆ ಎಂದು ಕೇಳುತ್ತಾರೆ. ಅದಕ್ಕೆ ಬಾಲಕ ಕೈ ಮುಂದೆ ಮಾಡಿ ಯಾವುದೇ ಆಯ್ಕೆಗಳನ್ನು ಹೇಳುವುದು ಬೇಡ, ಬ್ರೇಕ್‌ಫಾಸ್ಟ್ ಎಂದು ಹೇಳುತ್ತಾನೆ. ನಂತರ 4 ಆಪ್ಷನ್‌ಗಳನ್ನು ಅಲ್ಲಿ ನೀಡಲಾಗಿದ್ದು, ಬಾಲಕ ಬಿ ಬ್ರೇಕ್‌ಫಾಸ್ಟ್ ಲಾಕ್ ಮಾಡಿ ಎಂದು ಲಾಕ್ ಮಾಡಿಸುತ್ತಾನೆ. ಹಾಗೆಯೇ ಚೆಸ್‌ನಲ್ಲಿ ಎಷ್ಟು ರಾಜ ಇರುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಬಾಲಕ ಇದೊಂದು ಕೇಳುವಂತಹ ಪ್ರಶ್ನೆಯೇ ಕೇವಲ 2 ರಾಜರು ಇರುತ್ತಾರೆ ಎಂದು ಉತ್ತರಿಸುತ್ತಾನೆ. ಜೊತೆಗೆ ಅಮಿತಾಬ್ ಅವರಿಗೆ ಆಯ್ಕೆಯನ್ನು ಹೇಳುವುದಕ್ಕೂ ಆತ ಬಿಡುವುದಿಲ್ಲ, ಈ ವೇಳೆ ಅಮಿತಾಭ್ ಅವರು ವೀಕ್ಷಕರಿಗಾಗಿ ಆಯ್ಕೆ ಹೇಳಬೇಕು ಎಂದು ಹೇಳುತ್ತಾರೆ. ಈ ವೇಳೆ ಅಮಿತಾಭ್ ಅವರು ಈ ಹುಡುಗ ಪ್ರಶ್ನೆ ಕೇಳುವುದಕ್ಕೂ ಮೊದಲು ಉತ್ತರಿಸುತ್ತಾನೆ ಎಂದು ಹೇಳಿದರೆ ಆತ ಅವರ ಮಾತನ್ನು ಅರ್ಧದಲ್ಲಿ ತಡೆದು ಸಾರ್ ಮುಂದಿನ ಪ್ರಶ್ನೆ ಕೇಳಿ ಎಂದು ಕಿರಿಕ್ ಮಾಡ್ತಾನೆ.
ಉದ್ಧಟತನದಿಂದ 5ನೇ ರೌಂಡ್‌ನಲ್ಲೇ ಔಟ್ ಆದ ಬಾಲಕ!
ನಂತರ 5ನೇ ಪ್ರಶ್ನೆಯನ್ನು ಅಮಿತಾಭ್ ಅವರು ಕೇಳಿದ್ದು, ಈ ವೇಳೆ ಉತ್ತರಿಸಲಾಗದೇ ಹುಡುಗ ಲಾಕ್ ಆಗಿದ್ದಾನೆ. ಅಂದಹಾಗೆ ಅಮಿತಾಭ್ ಅವರು ಅಂತಹ ಕಠಿಣ ಪ್ರಶ್ನೆಯನ್ನೇನೂ ಕೇಳಿರಲಿಲ್ಲ, ಆದರೆ ಬಾಲಕನಿಗೆ ರಾಮಾಯಾಣ ಮಹಾಭಾರತಗಳ ಬಗ್ಗೆ ಯಾವುದೇ ಜ್ಞಾನವಿಲ್ಲ ಅಷ್ಟೇ. ಅಮಿತಾಭ್ ಅವರು ಕೇಳಿದ್ದ ಪ್ರಶ್ನೆ ಇದಾಗಿತ್ತು. ವಾಲ್ಮೀಕಿ ರಾಮಾಯಣದಲ್ಲಿನ ಮೊದಲ ಕಾಂಡ ಯಾವುದು ಎಂದು ಕೇಳುತ್ತಾರೆ. ಆದರೆ ಈ ವೇಳೆ ಆತನಿಗೆ ಆಯ್ಕೆ ನೀಡರಲಿಲ್ಲ, ಆತನೇ ಆಯ್ಕೆ ನೀಡುವಂತೆ ಕೇಳಿದಾಗ ಬಾಲಕ ಇಷ್ಟು ಸಮಯ ಮಾಡಿದ ಕಿರಿಕಿರಿ ನೋಡಿದ ಅಲ್ಲಿದ್ದ ವೀಕ್ಷಕರು ಜೋರಾಗಿ ಚಪ್ಪಾಳೆ ತಟ್ಟಲು ಶುರು ಮಾಡಿದ್ದಾರೆ.
ನಂತರ ಅಮಿತಾಬ್ ಅವರು ಆಯ್ಕೆಗಳನ್ನು ನೀಡಲು ಬಾಲಕನನ್ನು ಸ್ವಲ್ಪ ಹೊತ್ತು ಕಾಯಿಸಿದಾಗ ಆ ಬಾಲಕ ತಾಳ್ಮೆ ಕಳೆದುಕೊಂಡು ಮೊದಲು ಆಪ್ಷನ್ ನೀಡಿ ಎಂದು ಬೊಬ್ಬೆ ಹೊಡೆಯುತ್ತಾನೆ. ನಂತರ ಅಮಿತಾಭ್ ಆಯ್ಕೆಗಳನ್ನು ನೀಡಿದ್ದು, ಆಯ್ಕೆಗಳು ಹೀಗಿದ್ದವು. ಬಾಲ ಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಹಾಗೂ ಕಿಷ್ಕಿಂಧ ಕಾಂಡ. ಆಪ್ಷನ್ ಬರುತ್ತಿದ್ದಂತೆ ಈ ಬಾಲಕ ಆಯೋಧ್ಯಾ ಕಾಂಡ ಎಂದು ಹೇಳಿ ಅದನ್ನು ಲಾಕ್ ಮಾಡುವಂತೆ ಹೇಳಿದ್ದಾನೆ. ಮಧ್ಯೆ ಮಾತನಾಡಲು ಯತ್ನಿಸಿದ ಅಮಿತಾಭ್ ಅವರಿಗೆ ಆತ ಒಳ್ಳೆಯ ರೀತಿಯಲ್ಲಿ ಮೊದಲು ಅದನ್ನು ಲಾಕ್ ಮಾಡಿ ಎಂದು ಹೇಳುವ ಮೂಲಕ ದುರ್ವರ್ತನೆ ತೋರಿದ್ದಾನೆ. ಆದರೆ ಆತನ ಉತ್ತರ ತಪ್ಪಾಗಿದ್ದು, ನಂತರ ಅಮಿತಾಬ್ ಅವರು ಉತ್ತರ ತಪ್ಪು ಎಂದು ಹೇಳುತ್ತಾರೆ.
ಬಾಲಕನ ಪೋಷಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನೆಟ್ಟಿಗರು
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅನೇಕರು ವಿನಯವಂತಿಕೆ ಇಲ್ಲದೇ ಮಗುವನ್ನು ಬೆಳೆಸಿದ ರೀತಿಗೆ ಪೋಷಕರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಕ್ಕಳನ್ನು ತಿದ್ದದೇ ಅವರ ವರ್ತನೆಯನ್ನು ಕ್ಯೂಟ್ ಮುದ್ದು ಎಂದೆಲ್ಲಾ ಕರೆಯುವ ಪೋಷಕರಿಗೆ ಇದೊಂದು ಪಾಠ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ವೀಡಿಯೋವನ್ನು ಅನೇಕರರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪೋಷಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'Dr Poornima' ಎಂಬುವವರು ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಚಿಕ್ಕ ಮಕ್ಕಳಲ್ಲಿನ ನಾಚಿಕೆ ಇಲ್ಲದ ಮತ್ತು ದುರಹಂಕಾರವನ್ನು ಮುದ್ದಾಗಿ ಕಾಣುವ ಪೋಷಕರಿಗೆ ಇದೊಂದು ಪಾಠ. ಇದು ಮುದ್ದು ಅಲ್ಲ, ಇದು ಸ್ಪಷ್ಟವಾಗಿ ಅಸಭ್ಯ ಮತ್ತು ಅಗೌರವ. ಪ್ರಭು ರಾಮ್ ರಾಜನಾಗಿ ವಿನಮ್ರತೆ, ದಯೆ ಮತ್ತು ನಮ್ರತೆಯನ್ನು ನಿರೂಪಿಸುವ ರಾಮಚರಿತಮಾನಸದ ಪ್ರಶ್ನೆಯಲ್ಲಿ ಆ ಬಾಲಕ ಸೋತ ಎಂಬುದು ವಿಪರ್ಯಾಸ. ಇದೇ ಮೊದಲ ಬಾರಿ ಒಂದು ಮಗು ಸೋತಾಗ ನಾನು ಚಪ್ಪಾಳೆ ತಟ್ಟಿದೆ ಎಂದು ಅವರು ಬರೆದುಕೊಂಡಿದ್ದಾರೆ.
