ಮಾಜಿ ಸಚಿವೆ ಸ್ಮೃತಿ ಇರಾನಿ ಅವರು ಇದೀಗ ಮತ್ತೆ ಕಿರುತೆರೆಗೆ ಕಮ್​ಬ್ಯಾಕ್​ ಮಾಡಿದ್ದು, ಮೊದಲ ವಾರದಲ್ಲಿಯೇ ಇತಿಹಾಸ ಸೃಷ್ಟಿಸಿದ್ದಾರೆ. ಇವರ ಸೀರಿಯಲ್​ ದಾಖಲೆ ಬರೆದಿದೆ. ಏನದು ವಿಷ್ಯ? 

ಮಾಜಿ ಸಚಿವೆ ಸ್ಮೃತಿ ಇರಾನಿ ಅವರು ಇದೀಗ ಮತ್ತೆ ಕಿರುತೆರೆಗೆ ಕಮ್​ಬ್ಯಾಕ್​ ಮಾಡಿದ್ದು, ಹಿಂದೊಮ್ಮೆ ದಾಖಲೆ ಬರೆದಿದ್ದ ಕ್ಯೂಂಕಿ ಸಾಸ್​ ಭೀ ಕಭೀ ಬಹೂ ಥೀ (ಏಕೆಂದರೆ ಹಿಂದೊಮ್ಮೆ ಅತ್ತೆಯೂ ಸೊಸೆಯಾಗಿದ್ದಳು ಎನ್ನುವುದು ಇದರ ಅರ್ಥ) ಸೀರಿಯಲ್​ನ ಪಾರ್ಟ್​-2 ಮಾಡುತ್ತಿದ್ದಾರೆ. ಸ್ಮೃತಿ ಇರಾನಿ ಅವರು ಈ ಸೀರಿಯಲ್​ನಲ್ಲಿ ತುಳಸಿ ವಿರಾನಿ ಆಗಿ ದಾಖಲೆ ಸೃಷ್ಟಿಸಿದ್ದರು. ಅದರ ರೀಬೂಟ್ ಆವೃತ್ತಿಯಲ್ಲಿ ಈಗ ಕಾಣಿಸಿಕೊಳ್ಳುತ್ತಿದ್ದಾರೆ. ಏಕ್ತಾ ಕಪೂರ್ ಅವರ ಐಕಾನಿಕ್ ಟಿವಿ ಕಾರ್ಯಕ್ರಮವು ಬಿಡುಗಡೆಯಾದ ವಾರದಲ್ಲೇ ತನ್ನ ಸಂಖ್ಯೆಗಳೊಂದಿಗೆ ಈಗಾಗಲೇ ಇತಿಹಾಸವನ್ನು ಸೃಷ್ಟಿಸಿದೆ. ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ ಪಾರ್ಟ್​- 2 ಒಂದೇ ವಾರದಲ್ಲಿ 1.659 ಬಿಲಿಯನ್ ನಿಮಿಷಗಳ ವೀಕ್ಷಣೆ ಸಮಯವನ್ನು ದಾಖಲಿಸಿದೆ. ಈ ಕಾರ್ಯಕ್ರಮವು ನಾಲ್ಕು ದಿನಗಳಲ್ಲಿ 31.1 ಮಿಲಿಯನ್ ಟಿವಿ ವೀಕ್ಷಕರನ್ನು ಸೆಳೆಯಿತು. ಈ ಮೂಲಕ ಹೊಸದೊಂದು ದಾಖಲೆ ಬರೆದಿದೆ. ಮೊದಲ ಸೀಸನ್​ 2000 ರಲ್ಲಿ ಪ್ರಸಾರವಾಯಿತು ಮತ್ತು 2008 ರವರೆಗೆ ನಡೆದು ದಾಖಲೆ ಬರೆದಿತ್ತು!

ಸ್ಟಾರ್ ಪ್ಲಸ್ ಪ್ರಕಾರ, ಇದು ಭಾರತದಲ್ಲಿ ದೂರದರ್ಶನ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇದುವರೆಗಿನ ಅತಿದೊಡ್ಡ ಸೀರಿಯಲ್​ನ ಚೊಚ್ಚಲ ಪ್ರವೇಶವಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಸೀರಿಯಲ್​ ಆಗಿದೆ. ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ 2.5 TRP ಹೊಂದಿದ್ದು, ಸಾಪ್ತಾಹಿಕ ದೂರದರ್ಶನ ರೇಟಿಂಗ್ ಪಾಯಿಂಟ್‌ಗಳ (TRP) ಪಟ್ಟಿಯಲ್ಲಿ ಅಗ್ರ ಕಾರ್ಯಕ್ರಮಗಳಾದ ಅನುಪಮಾ ಮತ್ತು ತಾರಕ್ ಮೆಹ್ತಾ ಕಾ ಊಲ್ತಾ ಚಾಶ್ಮಾವನ್ನು ಹಿಂದಿಕ್ಕಿದೆ ಎಂದು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಆಫ್ ಇಂಡಿಯಾ (BARC) ದತ್ತಾಂಶ ಹೇಳಿದೆ. ಈ ಬಗ್ಗೆ ಖುದ್ದು ಮಾತನಾಡಿರುವ ಸ್ಮೃತಿ ಇರಾನಿ ಅವರು, ನಮ್ಮ ಕಾರ್ಯಕ್ರಮವು ಇತಿಹಾಸವನ್ನು ಸೃಷ್ಟಿಸಿದೆ. ಜನರು ಸಾಮಾನ್ಯವಾಗಿ ಇತಿಹಾಸವು ಪುನರಾವರ್ತನೆಯಾಗುವುದಿಲ್ಲ ಎಂದು ಹೇಳುತ್ತಾರೆ, ಆದರೆ ನಾವು ಅದನ್ನು ತಪ್ಪಾಗಿ ಸಾಬೀತುಪಡಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಕ್ಯುಂಕಿ ಸಾಸ್ ಭೀ ಕಭಿ ಬಹು ಥಿಯ ರೀಬೂಟ್ ಆವೃತ್ತಿಯು ಕಳೆದ ಜುಲೈ 29 ರಂದು ರಾತ್ರಿ 10:30 ಕ್ಕೆ ಸ್ಟಾರ್ ಪ್ಲಸ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಿಸಿದ, ಸ್ಮೃತಿ ಇರಾನಿ, ಶಕ್ತಿ ಆನಂದ್, ಕೇತ್ಕಿ ಡೇವ್, ಹಿತನ್ ತೇಜ್ವಾನಿ, ಗೌರಿ ಪ್ರಧಾನ್ ಮತ್ತು ಅಮರ್ ಉಪಾಧ್ಯಾಯ ಸೇರಿದಂತೆ ಹಲವರು ಪುನರಾಗಮನ ಮಾಡಿದ್ದಾರೆ. ಶಗುನ್ ಶರ್ಮಾ, ಅಮನ್ ಗಾಂಧಿ ಮತ್ತು ರೋಹಿತ್ ಸುಚಾಂತಿ ಸೇರಿದಂತೆ ಅನೇಕ ಹೊಸ ಸದಸ್ಯರು ಆಗಮಿಸಿದ್ದಾರೆ. ಮೊದಲ ಸೀಸನ್ ಸುಮಾರು 1,833 ಸಂಚಿಕೆಗಳನ್ನು ಹೊಂದಿತ್ತು, ಇದು ಆ ಸಮಯದಲ್ಲಿ ಅತಿ ಹೆಚ್ಚು ಕಾಲ ನಡೆದ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು, ಆದರೆ ಹೊಸ ಸೀಸನ್ ಸೀಮಿತ ಸಂಖ್ಯೆಯ ಸಂಚಿಕೆಗಳನ್ನು ಹೊಂದಿರುತ್ತದೆ.

ಅಷ್ಟಕ್ಕೂ, ರೂಪದರ್ಶಿಯಾಗಿ, ನಟಿಯಾಗಿ ಹಾಗೂ ನಿರೂಪಕಿಯಾಗಿ ನಂತರ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಸ್ಮೃತಿ ಇರಾನಿ ಅವರ ಸಾಧನೆಯ ಹಾದಿ ಬಹಳ ದೀರ್ಘವಾಗಿದೆ. ಯಾವ ಗಾಡ್ ಫಾದರ್ ಇಲ್ಲದೇ ರಾಜಕೀಯ ಹಿನ್ನಲೆಯೂ ಇಲ್ಲದೇ ಸ್ವಂತ ಪರಿಶ್ರಮದಿಂದ ರಾಜಕೀಯ ಜೀವನದಲ್ಲಿ ತಮ್ಮದೇ ಛಾಪು ಮೂಡಿಸಿದವರು ಅವರು. ಅಂದಹಾಗೆ ಸ್ಮೃತಿ ಅವರಿಗೆ ಈಗ 49 ವರ್ಷ ವಯಸ್ಸು. ಮಾರ್ಚ್​ 23ರ 1976ರಂದು ಹುಟ್ಟಿರೋ ಸ್ಮೃತಿ ಇರಾನಿ, ರಾಜಕೀಯಕ್ಕೂ ಬರುವ ಮುನ್ನ ಕಿರುತೆರೆಯಲ್ಲಿ ಫೇಮಸ್​ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಕ್ಯೂಂ ಕಿ ಸಾಸ್​ ಭೀ ಕಭೀ ಬಹೂ ಥಿ ಧಾರಾವಾಹಿಯಲ್ಲಿ ತುಳಸಿಯಾಗಿ ಅಭಿನಯಿಸಿ ಹಲವು ವರ್ಷ ಮನೆಮನೆಗಳಲ್ಲಿನ ಮನಗಳನ್ನು ಗೆದ್ದವರು. ಇರಾನಿ ಸೌಂದರ್ಯ ಸ್ಪರ್ಧೆಯ ಮಿಸ್ ಇಂಡಿಯಾ 1998 ರಲ್ಲಿ ಭಾಗವಹಿಸಿದವರಲ್ಲಿ ಒಬ್ಬರು. ಆಲ್ಬಂ, ಟಿವಿ ಸರಣಿ ನಟನೆಯನ್ನು ಪ್ರಾರಂಭಿಸಿದರು. ಜಿ ಟಿವಿಯಲ್ಲಿ ರಾಮಾಯಣದಲ್ಲಿ ಸೀತಾ ಎಂಬ ಮಹಾಕಾವ್ಯ ಪಾತ್ರವನ್ನು ನಿರ್ವಹಿಸಿದರು. ಆದರೆ ಕುತೂಹಲದ ವಿಷಯ ಎಂದರೆ, ಅವರು, 21ನೇ ವಯಸ್ಸಿನಲ್ಲಿಯೇ ಮಿಸ್​ ಇಂಡಿಯಾ ಆಗುವ ಕನಸು ಹೊತ್ತು ಭಾರತದಿಂದ ಪ್ರತಿನಿಧಿಸಿದ್ದರು ಎನ್ನುವ ವಿಷಯ ಬಹುತೇಕ ಮಂದಿಗೆ ತಿಳಿದಿರಲಿಕ್ಕಿಲ್ಲ! ಹೌದು. ಅದರ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡುತ್ತಿದೆ.