ಕರಣ್ ಜೋಹರ್ ಅವರ ಧರ್ಮಾಟಿಕ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಶೌನಾ ಗೌತಮ್ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದ ಕೂಡಲೇ ನಕಾರಾತ್ಮಕ ವಿಮರ್ಶೆಗಳ ಅಲೆಯಲ್ಲಿ ಸಿಲುಕಿತ್ತು. ಇತ್ತೀಚೆಗೆ ಸುಚಿನ್ ಮೆಹ್ರೋತ್ರಾ ಅವರೊಂದಿಗಿನ ಪಾಡ್‌ಕಾಸ್ಟ್ ಸಂವಾದದಲ್ಲಿ ಆನ್‌ಲೈನ್ ಟೀಕೆಗಳ ಬಗ್ಗೆ ಮಾತನಾಡಿದರು.

ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ (Karan Johar) ಅವರು ತಮ್ಮ ಇತ್ತೀಚಿನ ನಿರ್ಮಾಣದ 'ನಾದಾನಿಯಾಂ' ಚಿತ್ರಕ್ಕೆ ಎದುರಾದ ತೀವ್ರ ಟ್ರೋಲ್‌ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ (Ibrahim Ali Khan) ಮತ್ತು ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಖುಷಿ ಕಪೂರ್ (Khushi Kapoor) ನಟಿಸಿದ್ದ ಈ ಚಿತ್ರವು, ಓಟಿಟಿಯಲ್ಲಿ ಬಿಡುಗಡೆಯಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಟೀಕೆ ಮತ್ತು ಮೀಮ್‌ಗಳಿಗೆ ಗುರಿಯಾಗಿತ್ತು. ಈ ಬಗ್ಗೆ ಮೌನ ಮುರಿದಿರುವ ಕರಣ್, ಚಿತ್ರವನ್ನು ಜನರು ದ್ವೇಷಿಸಿದ್ದರೂ, ಅದನ್ನು ಪದೇಪದೇ ಟೀಕಿಸುವ ಅಗತ್ಯವಿಲ್ಲ ಎಂದು ಬೇಸರದಿಂದ ನುಡಿದಿದ್ದಾರೆ.

ಕರಣ್ ಜೋಹರ್ ಅವರ ಧರ್ಮಾಟಿಕ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಶೌನಾ ಗೌತಮ್ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದ ಕೂಡಲೇ ನಕಾರಾತ್ಮಕ ವಿಮರ್ಶೆಗಳ ಅಲೆಯಲ್ಲಿ ಸಿಲುಕಿತ್ತು. ಇತ್ತೀಚೆಗೆ ಸುಚಿನ್ ಮೆಹ್ರೋತ್ರಾ ಅವರೊಂದಿಗಿನ ಪಾಡ್‌ಕಾಸ್ಟ್ ಸಂವಾದದಲ್ಲಿ ಮಾತನಾಡಿದ ಕರಣ್, ಚಿತ್ರದ ಸೋಲಿನ ಬಗ್ಗೆ ಮತ್ತು ಆನ್‌ಲೈನ್ ಟೀಕೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.

"ಒಂದು ವೇಳೆ ಕೋಟ್ಯಂತರ ಜನರು ಚಿತ್ರವನ್ನು ನೋಡಿದ್ದರೂ, ಅವರಿಗೆ ಅದು ಇಷ್ಟವಾಗಿಲ್ಲವೆಂದರೆ, ಅದನ್ನು ತಪ್ಪು ಕಾರಣಗಳಿಗಾಗಿಯೇ ನೋಡಿದ್ದಾರೆ ಎಂದರ್ಥ. ಒಬ್ಬ ಸೃಜನಶೀಲ ಕಲಾವಿದನಾಗಿ, ಟೀಕೆಗೆ ಒಳಗಾದ ಯಾವುದೇ ಸಿನಿಮಾ ನನಗೆ ಖುಷಿ ನೀಡುವುದಿಲ್ಲ, ಅದು ಹೇಗೆ ಸಾಧ್ಯ? ವೀಕ್ಷಕರ ಸಂಖ್ಯೆ ಮುಖ್ಯವಲ್ಲ, ಅವರ ಪ್ರೀತಿ ಮುಖ್ಯ," ಎಂದು ಕರಣ್ ಹೇಳಿದರು.

ಅರ್ಹತೆಗಿಂತ ಹೆಚ್ಚು ನಿಂದನೆ ಆಯ್ತಾ?

ಚಿತ್ರಕ್ಕೆ ವ್ಯಕ್ತವಾದ ನಕಾರಾತ್ಮಕ ಪ್ರತಿಕ್ರಿಯೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, "ನಮ್ಮ ಚಿತ್ರಕ್ಕೆ ಪ್ರೀತಿ ಸಿಗಲಿಲ್ಲ, ಜನರಿಗೆ ಇಷ್ಟವಾಗಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ನಾನು ಮೂರ್ಖನಲ್ಲ. ಚಿತ್ರವನ್ನು ಕೆಟ್ಟದಾಗಿ ನಿಂದಿಸಲಾಯಿತು, ಬೈಯಲಾಯಿತು, ಬಹುಶಃ ಅರ್ಹತೆಗಿಂತಲೂ ಹೆಚ್ಚು ಟೀಕಿಸಲಾಯಿತು. ಒಂದು ಹಂತದ ನಂತರ ನನಗೆ, ‘ಯಾರ್, ಬಿಟ್ಟುಬಿಡಿ’ ಅನ್ನಿಸಿತು. ನಿಮಗೆ ಇಷ್ಟವಾಗದ ಒಂದು ಸಿನಿಮಾ ಇದು, ದಯವಿಟ್ಟು ಮುಂದಕ್ಕೆ ಹೋಗಬಹುದೇ?" ಎಂದು ಟ್ರೋಲಿಗರಿಗೆ ನೇರವಾಗಿ ಪ್ರಶ್ನಿಸಿದರು.

ಇದೇ ವೇಳೆ, ಕೆಲ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳು ಚಿತ್ರವನ್ನು ಅಣಕಿಸುವುದನ್ನೇ ಒಂದು ಟ್ರೆಂಡ್ ಮಾಡಿಕೊಂಡು ಲಾಭ ಗಳಿಸಿದರು ಎಂದು ಕರಣ್ ಆರೋಪಿಸಿದರು. "ಕೆಲವು ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳು ಇದರ ಮೇಲೆ ನಾಲ್ಕು-ನಾಲ್ಕು ವಿಡಿಯೋಗಳನ್ನು ಮಾಡಿದ್ದಾರೆ. ಒಮ್ಮೆ ಮಾಡಿದರೆ ಸರಿ, ಆದರೆ ಮತ್ತೆ ಮತ್ತೆ ಹಿಟ್ಸ್ ಪಡೆಯಲು ಇದನ್ನೇ ಬಳಸಿಕೊಂಡರು. ಆ ಸಮಯದಲ್ಲಿ 'ನಾದಾನಿಯಾಂ' ಅನ್ನು ನಿಂದಿಸುವುದೇ ಒಂದು ಫ್ಯಾಷನ್ ಆಗಿಬಿಟ್ಟಿತ್ತು. ಇದರಿಂದ ತಮ್ಮ ಯೂಟ್ಯೂಬ್ ವಿಡಿಯೋಗಳಿಗೆ ಹೆಚ್ಚು ವೀಕ್ಷಣೆ ಸಿಗುತ್ತದೆ ಎಂದು ಅವರು ಸಂಭ್ರಮಿಸಿದರು. ಕೆಲವೊಮ್ಮೆ ಹೀಗೆ ನಕಾರಾತ್ಮಕವಾಗಿ ಸಂಭ್ರಮಿಸಲಾಗುತ್ತದೆ," ಎಂದು ಅವರು ಕಿಡಿಕಾರಿದರು.

ಕೊನೆಯಲ್ಲಿ, ವೀಕ್ಷಣೆ ಸಂಖ್ಯೆಗಳು ಎಷ್ಟೇ ದೊಡ್ಡದಿದ್ದರೂ, ಪ್ರೇಕ್ಷಕರ ಪ್ರೀತಿ ಸಿಗದಿದ್ದರೆ ಅದರಿಂದ ಯಾವುದೇ ಸಮಾಧಾನವಿಲ್ಲ ಎಂದು ಕರಣ್ ಸ್ಪಷ್ಟಪಡಿಸಿದರು. "ನಾವು ಇದನ್ನು ಒಪ್ಪಿಕೊಳ್ಳಬೇಕು, ಅಂಗೀಕರಿಸಬೇಕು, ಇದರಿಂದ ಹೊರಬಂದು ಮುಂದಿನ ಬಾರಿ ಇನ್ನೂ ಉತ್ತಮವಾಗಿ ಕೆಲಸ ಮಾಡಬೇಕು. ಅಷ್ಟೇ. ಲಕ್ಷಾಂತರ ಜನರು ನೋಡಿದ್ದಾರೆ ಎಂಬ ಕಾರಣಕ್ಕೆ ಒಂದು ಸಿನಿಮಾ ಅದ್ಭುತ ಎಂದು ನಾನು ಹೇಗೆ ಹೇಳಲಿ? ಪ್ರೀತಿ ಸಿಗದಿದ್ದರೆ, ಆ ನೋವು ಹೃದಯಕ್ಕೆ ತಟ್ಟುತ್ತದೆ," ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.