"ಯಾವುದೇ ದೈಹಿಕ ಚಲನೆ ಮಾಡುವ ಮೊದಲು ದೇಹವನ್ನು ಹಿಡಿದು ಸ್ಥಿರಗೊಳಿಸಲು ಇವುಗಳ ಅವಶ್ಯಕತೆ ಇದೆ. ಗಾಳಿಗೆ ಮೇಜಿನ ಮೇಲಿಂದ ಹಾರಿ ಕೆಳಗೆ ಬಿದ್ದ ಒಂದು ಕಾಗದದ ತುಂಡನ್ನು ಎತ್ತಿಕೊಳ್ಳಲು ಬಗ್ಗುವುದೂ ಈಗ ಒಂದು ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಹಿಂದೆ ವೇಗವಾಗಿ ಮಾಡುತ್ತಿದ್ದ ಕೆಲಸಗಳೆಲ್ಲವೂ ಈಗ ನಿಧಾನವಾಗಿವೆ.

ಭಾರತೀಯ ಚಿತ್ರರಂಗದ 'ಶತಮಾನದ ನಾಯಕ' ಅಮಿತಾಭ್ ಬಚ್ಚನ್ (Amitabh Bachchan) ಅವರಿಗೆ 85 ವರ್ಷ ಸಮೀಪಿಸುತ್ತಿದ್ದರೂ, ಅವರ ಉತ್ಸಾಹ ಮತ್ತು ಚೈತನ್ಯ ಇಂದಿಗೂ ಯುವಕರನ್ನು ನಾಚಿಸುವಂತಿದೆ. ಇತ್ತೀಚೆಗೆ ತಮ್ಮ ಜನಪ್ರಿಯ ಗೇಮ್ ಶೋ 'ಕೌನ್ ಬನೇಗಾ ಕರೋಡ್ಪತಿ' (KBC)ಯ 17ನೇ ಆವೃತ್ತಿಯ ಮೂಲಕ ಕಿರುತೆರೆಗೆ ಭರ್ಜರಿಯಾಗಿ ಮರಳಿದ್ದಾರೆ. ತಲೆಮಾರುಗಳನ್ನು ಮೀರಿ ಅಭಿಮಾನಿಗಳನ್ನು ಹೊಂದಿರುವ ಬಿಗ್ ಬಿ, ತೆರೆಯ ಮೇಲೆ ತಮ್ಮ ಚುಂಬಕೀಯ ವ್ಯಕ್ತಿತ್ವದಿಂದ ಎಲ್ಲರನ್ನೂ ಸೆಳೆಯುತ್ತಾರೆ. ಆದರೆ, ತೆರೆಯ ಮರೆಯಲ್ಲಿ ಅವರು ವಯೋಸಹಜ ದೈಹಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂಬ ಸತ್ಯವನ್ನು ಅವರೇ ಬಹಿರಂಗಪಡಿಸಿದ್ದಾರೆ.

ತಮ್ಮ ಬ್ಲಾಗ್‌ನಲ್ಲಿ ಇತ್ತೀಚೆಗೆ ಬರೆದ ಸುದೀರ್ಘ ಲೇಖನದಲ್ಲಿ, ಅಮಿತಾಭ್ ಅವರು ತಮ್ಮ ದೈಹಿಕ ಸ್ಥಿತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಪ್ರತಿ ಭಾನುವಾರ ತಮ್ಮ ನಿವಾಸ 'ಜಲ್ಸಾ'ದ ಹೊರಗೆ ಸೇರುವ ಅಭಿಮಾನಿಗಳಿಗೆ ದರ್ಶನ ನೀಡುವುದು ಅವರ ದಶಕಗಳ ಸಂಪ್ರದಾಯ. ಈ ಸಂಪ್ರದಾಯದ ನಂತರ ಬರೆದ ಲೇಖನದಲ್ಲಿ, ತಮ್ಮನ್ನು ನೋಡಲು ಇಷ್ಟೊಂದು ಜನ ಸೇರುತ್ತಾರೆಯೇ ಎಂದು ಕೆಲವೊಮ್ಮೆ ಅವಿಶ್ವಾಸ ಮೂಡುತ್ತದೆ, ಆದರೆ ಅವರನ್ನು ನೋಡಿದಾಗ ಸಿಗುವ ಪ್ರೀತಿ ಮತ್ತು ಮೆಚ್ಚುಗೆಯು ತನ್ನನ್ನು ಧೈರ್ಯದಿಂದ ನಿಲ್ಲುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

ಆದರೆ, ಇದೇ ಲೇಖನದಲ್ಲಿ ಅವರು ವಯಸ್ಸಾಗುತ್ತಿದ್ದಂತೆ ದೈನಂದಿನ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದಕ್ಕೂ ಎಷ್ಟು ಕಷ್ಟಪಡುತ್ತಿದ್ದೇನೆ ಎಂಬುದನ್ನು ವಿವರಿಸಿದ್ದಾರೆ. "ಹಿಂದೆ ಸುಲಭವಾಗಿ ಮಾಡುತ್ತಿದ್ದ ಸಾಮಾನ್ಯ ಕೆಲಸಗಳನ್ನು ಮಾಡಲು ಈಗ ಮನಸ್ಸಿಗೆ ಯೋಚಿಸುವಂತೆ ಹೇಳಬೇಕಾಗಿದೆ. ಉದಾಹರಣೆಗೆ, ಪ್ಯಾಂಟ್ ಧರಿಸುವುದು. ವೈದ್ಯರು ನನಗೆ 'ದಯವಿಟ್ಟು ಮಿಸ್ಟರ್ ಬಚ್ಚನ್, ಕುಳಿತುಕೊಂಡು ಪ್ಯಾಂಟ್ ಧರಿಸಿ. ನಿಂತು ಹಾಕಿಕೊಳ್ಳಲು ಪ್ರಯತ್ನಿಸಬೇಡಿ, ನೀವು ಸಮತೋಲನ ಕಳೆದುಕೊಂಡು ಬೀಳಬಹುದು' ಎಂದು ಸಲಹೆ ನೀಡಿದ್ದಾರೆ. ಇದನ್ನು ಕೇಳಿದಾಗ ಮೊದಲು ನಾನು ಅವಿಶ್ವಾಸದಿಂದ ಮನಸ್ಸಿನಲ್ಲೇ ನಕ್ಕಿದ್ದೆ. ಆದರೆ, ಅವರು ಹೇಳಿದ್ದು ಎಷ್ಟು ಸರಿ ಎಂದು ನನಗೆ ಈಗ ಅರಿವಾಗುತ್ತಿದೆ," ಎಂದು ಬರೆದುಕೊಂಡಿದ್ದಾರೆ.

ಈ ಸವಾಲನ್ನು ಎದುರಿಸಲು, ತಮ್ಮ ಮನೆಯಾದ್ಯಂತ ಗೋಡೆಗಳಿಗೆ ಹ್ಯಾಂಡಲ್‌ಬಾರ್‌ಗಳನ್ನು (ಹಿಡಿಕೆಗಳನ್ನು) ಅಳವಡಿಸಲಾಗಿದೆ ಎಂದು ಬಿಗ್ ಬಿ ಬಹಿರಂಗಪಡಿಸಿದ್ದಾರೆ. "ಯಾವುದೇ ದೈಹಿಕ ಚಲನೆ ಮಾಡುವ ಮೊದಲು ದೇಹವನ್ನು ಹಿಡಿದು ಸ್ಥಿರಗೊಳಿಸಲು ಇವುಗಳ ಅವಶ್ಯಕತೆ ಇದೆ. ಗಾಳಿಗೆ ಮೇಜಿನ ಮೇಲಿಂದ ಹಾರಿ ಕೆಳಗೆ ಬಿದ್ದ ಒಂದು ಕಾಗದದ ತುಂಡನ್ನು ಎತ್ತಿಕೊಳ್ಳಲು ಬಗ್ಗುವುದೂ ಈಗ ಒಂದು ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಹಿಂದೆ ವೇಗವಾಗಿ ಮಾಡುತ್ತಿದ್ದ ಕೆಲಸಗಳೆಲ್ಲವೂ ಈಗ ನಿಧಾನವಾಗಿವೆ," ಎಂದು ಅವರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ತಮ್ಮ ಅಭಿಮಾನಿಗಳು ಜೀವನದಲ್ಲಿ ಇಂತಹ ಹಂತವನ್ನು ಎದುರಿಸಬಾರದು ಎಂದು ಹಾರೈಸಿದ ಅವರು, ಇದು ಪ್ರತಿಯೊಬ್ಬರ ಜೀವನದಲ್ಲೂ ಬರುವ ಅನಿವಾರ್ಯ ಘಟ್ಟ ಎಂದು ಒಪ್ಪಿಕೊಂಡಿದ್ದಾರೆ. "ಜೀವನದ ಇಳಿಮುಖದ ಪಯಣ ಹುಟ್ಟಿನಿಂದಲೇ ಪ್ರಾರಂಭವಾಗುತ್ತದೆ. ಇದು ದುಃಖದ ಸಂಗತಿಯಾದರೂ, ಜೀವನದ ಕಟು ಸತ್ಯ. ಯೌವನವು ಜೀವನದ ಸವಾಲುಗಳನ್ನು ವೇಗವಾಗಿ ಎದುರಿಸುತ್ತದೆ. ಆದರೆ, ವಯಸ್ಸು ಎಂಬುದು ಜೀವನದ ವಾಹನಕ್ಕೆ ಇದ್ದಕ್ಕಿದ್ದಂತೆ ಸ್ಪೀಡ್ ಬ್ರೇಕ್ ಹಾಕುತ್ತದೆ ಮತ್ತು ಅಪಘಾತವನ್ನು ತಪ್ಪಿಸಲು ನಿಧಾನವಾಗಿ ಸಾಗು ಎಂದು ಎಚ್ಚರಿಸುತ್ತದೆ," ಎಂದು ತಮ್ಮ ಬದುಕಿನ ಅನುಭವವನ್ನು ತಾತ್ವಿಕವಾಗಿ ವಿವರಿಸಿದ್ದಾರೆ. ಈ ಮಾತುಗಳು ಸೂಪರ್‌ಸ್ಟಾರ್ ಆದರೂ ವಯಸ್ಸಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ನೆನಪಿಸುತ್ತದೆ.