ರಾಜ್ಯ ವಿಧಾನಸಭೆಯಲ್ಲಿ ಕ್ಲಸ್ಟರ್ ವಿಶ್ವವಿದ್ಯಾಲಯಗಳ ಉಪಕುಲಪತಿ ನೇಮಕಾತಿ ವಿಳಂಬ ಕುರಿತು ಚರ್ಚೆ ನಡೆಯಿತು. ಅಶ್ವಥನಾರಾಯಣ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದರು. ಸಚಿವ ಬೈರತಿ ಸುರೇಶ್ ಸ್ಪಷ್ಟನೆ ನೀಡಿ, ವಿವಿಗಳ ಹಿತಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಶನಿವಾರ ಕ್ಲಸ್ಟರ್ ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳ ನೇಮಕಾತಿ, ಬೋಧಕ ಹಾಗೂ ಬೋಧಕೇತರ ಹುದ್ದೆಗಳ ನೇಮಕಾತ ಆಗದೆ ಖಾಲಿ ಇರುವ ಕುರಿತು ಚರ್ಚೆ ನಡೆಯಿತು. ಈ ವಿಷಯವನ್ನು ವಿರೋಧ ಪಕ್ಷದ ಸದಸ್ಯ ಡಾ. ಸಿ.ಎನ್. ಅಶ್ವಥನಾರಾಯಣ್ ಸದನದ ಗಮನಕ್ಕೆ ತಂದರು. ಸದನದಲ್ಲಿ ಮಾತನಾಡುತ್ತಾ, “ಮೂರು ವಿಶ್ವ ವಿದ್ಯಾಲಯಗಳ ಉಪಕುಲಪತಿಗಳ ಅವಧಿ ಮುಗಿದು ಈಗಾಗಲೇ 10 ತಿಂಗಳು ಕಳೆದಿವೆ. ಆದರೆ ಸರ್ಕಾರ ಹೊಸ ನೇಮಕಾತಿ ಮಾಡಿಲ್ಲ. ಮಹಾರಾಣಿ ಕ್ಲಸ್ಟರ್ ವಿಶ್ವ ವಿದ್ಯಾಲಯ , ಮಂಡ್ಯ ವಿಶ್ವ ವಿದ್ಯಾಲಯ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ಮುಂತಾದವುಗಳ ಸ್ಥಿತಿ ಚಿಂತಾಜನಕವಾಗಿದೆ. ಈ ಸಂಸ್ಥೆಗಳು RUSA ಯೋಜನೆ ಅಡಿಯಲ್ಲಿ ಆಯ್ಕೆಯಾದ ಪ್ರಮುಖ ಕಾಲೇಜುಗಳಾಗಿದ್ದರೂ, ಸಮಾಲೋಚನೆ ಮಾಡದೆ, ಯಾವುದೇ ಪ್ರಕ್ರಿಯೆ ಕೈಗೊಳ್ಳದೆ ಸರ್ಕಾರ ತಪ್ಪು ಉತ್ತರ ನೀಡುತ್ತಿದೆ. ರಾಜ್ಯದ ಉತ್ತಮ ವಿವಿಗಳನ್ನು ಹಾಳು ಮಾಡುವ ಕೆಲಸ ಮಾಡಬಾರದು. ಕೂಡಲೇ ಕುಲಪತಿಗಳನ್ನು ನೇಮಕ ಮಾಡಬೇಕು,” ಎಂದು ಒತ್ತಾಯಿಸಿದರು.
ಉನ್ನತ ಶಿಕ್ಷಣ ಸಚಿವರ ಪರವಾಗಿ ಪ್ರತಿಕ್ರಿಯಿಸಿದ ಮಹಾನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, “ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮವನ್ನು 2019ರಲ್ಲಿ ತಿದ್ದುಪಡಿ ಮಾಡಿ, ಮಹಾರಾಣಿ ಮಹಿಳಾ ವಿಜ್ಞಾನ, ಕಲಾ-ವಾಣಿಜ್ಯ ಮತ್ತು ವ್ಯವಸ್ಥಾಪನ ಕಾಲೇಜು, ಹಾಗೂ ವಿ.ಎಚ್.ಡಿ. ಕೇಂದ್ರೀಯ ಗೃಹ ವಿಜ್ಞಾನ ಕಾಲೇಜುಗಳನ್ನು ಒಟ್ಟುಗೂಡಿಸಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಅದೇ ರೀತಿ, ಮೈಸೂರು ವಿವಿಯ ಅಧೀನದಲ್ಲಿದ್ದ ಮಂಡ್ಯದ ಸರ್ಕಾರಿ ಕಾಲೇಜನ್ನು ಪ್ರತ್ಯೇಕಿಸಿ ಮಂಡ್ಯ ವಿಶ್ವ ವಿದ್ಯಾಲಯ ಮಾಡಲಾಗಿದೆ.
ಈ ವಿಶ್ವ ವಿದ್ಯಾಲಯಗಳಿಗೆ ತಾತ್ಕಾಲಿಕವಾಗಿ ಪ್ರಭಾರ ಕುಲಪತಿಗಳನ್ನು ನೇಮಿಸಲಾಗಿದೆ – ಮಹಾರಾಣಿ ಕ್ಲಸ್ಟರ್ ವಿಶ್ವ ವಿದ್ಯಾಲಯಗೆ ಪ್ರೊಫೆಸರ್ ಮಂಜುನಾಥ್ ಹಾಗೂ ಮಂಡ್ಯ ವಿಶ್ವ ವಿದ್ಯಾಲಯಗೆ ಪ್ರೊಫೆಸರ್ ಶಿವಚಿತ್ತಪ್ಪ ನೇಮಕಗೊಂಡಿದ್ದಾರೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ವರ್ಗಾವಣೆ ನಡೆದಿದೆ. ತಾತ್ಕಾಲಿಕ ಹುದ್ದೆಗಳನ್ನು ತುಂಬಲಾಗಿದೆ. ಆದ್ದರಿಂದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಯಾವುದೇ ಅಡಚಣೆ ಇಲ್ಲ,” ಎಂದು ಸ್ಪಷ್ಟನೆ ನೀಡಿದರು.
ಅಶ್ವಥನಾರಾಯಣ್ ವಿರುದ್ಧ ಬೈರತಿ ಸುರೇಶ್ ಟೀಕೆ
ಅಶ್ವಥನಾರಾಯಣ್ ಸರ್ಕಾರ ನೀಡಿದ ಉತ್ತರವನ್ನು ಸಂಪೂರ್ಣವಾಗಿ ಓದಿ ಉತ್ಸಾಹದಲ್ಲಿ ಮಾತನಾಡುತ್ತಿದ್ದಂತೆ, ಬೈರತಿ ಸುರೇಶ್ ಪ್ರತಿಕ್ರಿಯಿಸಿದರು:
“ನೀವು ಶಿಕ್ಷಣ ಸಚಿವರಾಗಿದ್ದಾಗಲೇ ತಾತ್ಕಾಲಿಕ ನೇಮಕಾತಿ ಮಾಡುತ್ತಿದ್ದರು. ಇಂದು ನಾವು ಮಾಡುತ್ತಿದ್ದೇವೆ ಎಂದು ವಿರೋಧಿಸುವುದು ಸರಿಯಲ್ಲ. ನಮಗೂ ಶಿಕ್ಷಣದ ಬಗ್ಗೆ ತಿಳಿದಿದೆ. ನಾವು ಶಾಲೆಗಳನ್ನು ನಡೆಸುತ್ತೇವೆ. ನೀವು ಪಂಡಿತರಾಗಿರಬಹುದು, ಅತೀ ಬುದ್ಧಿವಂತರಾಗಿರಬಹುದು. ಆದರೆ ನಮಗೂ ಸ್ವಲ್ಪ ಗೊತ್ತಿದೆ,” ಎಂದು ಪ್ರತಿಕ್ರಿಯಿಸಿದರು.
ವಿವಿಗಳ ಆರ್ಥಿಕ ಪರಿಸ್ಥಿತಿ ಕುರಿತು ಸಮಿತಿ
ಮತ್ತಷ್ಟು ಸ್ಪಷ್ಟನೆ ನೀಡಿದ ಸಚಿವರು, “ವಿವಿಗಳ ಆರ್ಥಿಕ ಪರಿಸ್ಥಿತಿ ಪರಿಶೀಲನೆಗಾಗಿ ಸದನ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಉಪಮುಖ್ಯಮಂತ್ರಿ ಅಧ್ಯಕ್ಷರಾಗಿದ್ದಾರೆ. ಸಮಿತಿ ಶಿಫಾರಸು ನೀಡಿದ ನಂತರ, ಆಡಳಿತಾತ್ಮಕ ಹಾಗೂ ಶೈಕ್ಷಣಿಕವಾಗಿ ಸದೃಢಗೊಳಿಸುವ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಯಾವಾಗಲೂ ವಿವಿಗಳ ಹಿತದೃಷ್ಟಿಯಿಂದಲೇ ಕೆಲಸ ಮಾಡುತ್ತದೆ. ಯಾವುದೇ ವಿವಿಯನ್ನು ಮುಚ್ಚುವ ಉದ್ದೇಶ ಇಲ್ಲ. ಬದಲಾಗಿ ಅವುಗಳನ್ನು ಉತ್ತಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ,” ಎಂದರು.
ತೀವ್ರ ವಾಗ್ವಾದ
ಸದನದಲ್ಲಿ ನಡೆದ ಈ ಚರ್ಚೆಯ ವೇಳೆ ಇಬ್ಬರು ನಾಯಕರ ನಡುವೆ ತೀವ್ರ ವಾಗ್ವಾದವೂ ನಡೆದಿದೆ. ಅಶ್ವಥನಾರಾಯಣ್ ಸರ್ಕಾರವನ್ನು “ಪ್ರಕ್ರಿಯೆ ನಡೆಸದೆ ತಪ್ಪು ಉತ್ತರ ನೀಡುತ್ತಿದೆ” ಎಂದು ಆರೋಪಿಸಿದರೆ, ಬೈರತಿ ಸುರೇಶ್ “ವಿವಿಗಳಿಗೆ ಒಳ್ಳೆಯದಾಗುವ ಕ್ರಮವನ್ನೇ ಕೈಗೊಳ್ಳಲಾಗುತ್ತಿದೆ” ಎಂದು ಸ್ಪಷ್ಟನೆ ನೀಡಿದರು.
