ಟಗರಿಗೆ ಠಕ್ಕರ್ ಕೊಡೋರು ಯಾರು ಇಲ್ಲ, ಸಿದ್ದರಾಮಯ್ಯನವರೇ ಸಿಎಂ ಎಂದು ಸಂದೇಶ ರವಾನಿಸಿದ ಜಮೀರ್, ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ 2028ರ ವರೆಗೆ ಸಿಎಂ ಬದಲಾವಣೆಯೂ ಇಲ್ಲ ಎಂದಿದ್ದಾರೆ.
ಹುಬ್ಬಳ್ಳಿ (ನ.02) ಸಿದ್ದರಾಮಯ್ಯ ಇರುವವರೆಗೆ ಯಾರೂ ಕೂಡ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲು ಸಾಧ್ಯವಿಲ್ಲ ಎಂದು ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ವಸತಿ ಸಚಿವ ಜಮೀರ್ ಅಹಮ್ಮದ್ ಸಿದ್ದರಾಮಯ್ಯನವರ ಪರ ಬ್ಯಾಟ್ ಬೀಸಿದ್ದಾರೆ. 2028 ರವರೆಗೂ ಸಿದ್ಧರಾಮಯ್ಯ ಅವರೇ ಸಿಎಂ ಆಗಿ ಮುಂದುವರೀತಾರೆ. ಟಗರಿಗೆ ಠಕ್ಕರ್ ಕೋಡೋರು ಯಾರು ಇಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಅಭಿಮಾನಿ ಬಳಗಕ್ಕೆ ಜಮೀರ್ ಸ್ಪಷ್ಟ ಸಂದೇಶ ರವಾನಿಸಿದ್ರಾ ಅನ್ನೋ ಚರ್ಚೆಗಳು ಶುರುವಾಗಿದೆ.
ಸಿದ್ದರಾಮಯ್ಯ ಟಗರು, ಠಕ್ಕರ್ ನಡೆಯಲ್ಲ ಎಂದ ಜಮೀರ್
ಸಿದ್ದರಾಮಯ್ಯ ಟಗರು, ಅದಕ್ಕೆ ಟಕ್ಕರ ಕೊಡಲು ಯಾರಿಗೂ ಆಗಲ್ಲಾ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ, ಅಧಿಕಾರ ಬದಲಾವಣೆ ಈ ರೀತಿಯ ಗೊಂದಲ ಇಲ್ಲ ಎಂದು ಜಮೀರ್ ಅಹಮ್ಮದ್ ಸ್ಪಷ್ಟಪಡಿಸಿದ್ದಾರೆ. ನಮ್ಮದು ಹೈಕಮಾಂಡ್ ಪಕ್ಷ, ಪಕ್ಷದ ನಿರ್ಧಾರವೇ ಅಂತಿಮ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಖಾಲಿ ಇಲ್ಲ
ಡಿಕೆ ಶಿವಕುಮಾರ್ ಅಬಿಮಾನಿಗಳು, ಖುದ್ದು ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇದೆ. ಇದರಲ್ಲಿ ತಪ್ಪೇನು ಇಲ್ಲ. ಡಿಕೆ ಶಿವಕುಮಾರ್ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ನಾಯಕತ್ವದಲ್ಲಿ ಈ ಭಾರಿ ಅಭೂತಪೂರ್ವ ಗೆಲುವಿನೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ನಮಗೂ ಇದೆ. ಸದ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. 2028ರಲ್ಲಿ ಅಂದರೆ ಸಿದ್ದರಾಮ್ಯಯ ನಂತರ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ.
ಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧ
ಪಕ್ಷ ಕೇಳಿದ್ರೆ ಮಂತ್ರಿ ಸ್ಥಾನ ಬಿಟ್ಟು ಪಕ್ಷದ ಕೆಲಸ ಮಾಡಲು ಸಿದ್ದ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ. ನಾನು ಪಕ್ಷದ ಜವಾಬ್ದಾರಿ ನಿಭಾಯಿಸ್ತೇನೆ. ಸಚಿವ ಸಂಪುಟ ಪುನರ್ ರಚನೆಯಲ್ಲಿ ಮಂತ್ರಿ ಸ್ಥಾನ ಬಿಡಬೇಕು ಎಂದರೆ ಸಿದ್ಧನಿದ್ದೇನೆ. ಹೈಕಮಾಂಡ್ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಜಮೀರ್ ಹೇಳಿದ್ದಾರೆ.ಪ್ರಸಾದ್ ಅಬ್ಬಯ್ಯ ನಮ್ಮ ಸ್ನೇಹಿತ ಅವರು ಸತತವಾಗಿ ಮೂರು ಬಾರಿ ಗೆದ್ದಿದ್ದಾರೆ. ದಲಿತರಿಗೆ ಬಲ ನೀಡುವ ನಿಟ್ಟಿನಲ್ಲಿ ಈ ಬಾರಿ ಅವರಿಗೆ ಮಂತ್ರಿ ಸ್ಥಾನ ಸಿಗಬೇಕು. ನಾನು ಕೂಡ ಒತ್ತಾಯ ಹಾಕುತ್ತೇನೆ ಎಂದು ಜಮೀರ್ ಹೇಳಿದ್ದಾರೆ. ಅವರು ಒಪ್ಪಿದ್ರೆ ನನ್ನ ಸ್ಥಾನ ಬಿಟ್ಟು ಕೊಡುವೆ ಎಂದಿದ್ದಾರೆ.
ಅಲ್ಪಸಂಖ್ಯಾತ ಸಿಎಂ ವಿಚಾರ ಕುರಿತು ಮಾತನಾಡಿದ ಜಮೀರ್, ದಲಿತ ಸಮಾವೇಶ ಮಾಡೋದ್ರಲ್ಲಿ ತಪ್ಪೇನಿಲ್ಲ. ಆ ಸಮಾವೇಶದಲ್ಲಿ ನಾನೂ ಭಾಗಿಯಾಗುತ್ತೇನೆ. ಬಿಜೆಪಿಯವರು ವಿನಾಕಾರಣ ಸಿಎಂ ಗೊಂದಲ ಸೃಷ್ಟಿಸ್ತಿದ್ದಾರೆ. ಬಿಜೆಪಿಯಲ್ಲಿ ಮೊದಲು ಮೂರು ಗುಂಪುಗಳಿದ್ದವು. ಈಗ ಐದು ಗುಂಪುಗಳಾಗಿವೆ. ಬಿಜೆಪಿಯವರು ಮೊದಲು ತಮ್ಮ ಪಕ್ಷ ಸರಿ ಮಾಡಿಕೊಳ್ಳಲಿ ಎಂದಿದ್ದಾರೆ.
ರಾಜ್ಯದಲ್ಲಿ 42345 ಮನೆಗಳ ಹಂಚಿಕೆ
ನವೆಂಬರ್ 29 ಕ್ಕೆ ರಾಜ್ಯದಲ್ಲಿ 42345 ಮನೆಗಳ ಹಂಚಿಕೆ ಮಾಡಲಾಗುತ್ತದೆ. ಹುಬ್ಬಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಂಚಿಕೆ ಮಾಡಲಾಗುತ್ತದೆ. ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ,ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಆಗಮಿಸುತ್ತಿದ್ದಾರೆ.ವಸತಿ ಇಲಾಖೆಯಿಂದ ರಾಜ್ಯದ ವಿವಿದಡೆ ನಿರ್ಮಾಣವಾಗಿರುವ 42,345 ಮನೆಗಳನ್ನು ಫಲಾನುಭವಿಗಳಿಗೆ ಹಂಚಲಾಗತ್ತದೆ. ಸಿಎಂ ಸಿದ್ದರಾಮಯ್ಯ ನವೆಂಬರ್ 15 ಕ್ಕೆ ದೆಹಲಿಗೆ ಹೋಗುತ್ತಿದ್ದಾರೆ. ಈ ಸಮಯದಲ್ಲಿ ರಾಹುಲ್ ಗಾಂದಿ ಮತ್ತು ಮಲ್ಲಿಕಾರ್ಜುನ ಖರ್ಗೆ ರನ್ನು ಬೇಟಿಯಾಗುತ್ತಾರೆ. ಈ ವೇಳೆ ನಾಯಕರಿಗೆ ಆಹ್ವಾನ ನೀಡುತ್ತಾರೆ ಎಂದು ಜಮೀರ್ ಹೇಳಿದ್ದಾರೆ.
