ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣ, ಸುಜಾತಾ ಭಟ್ ಪುತ್ರಿ ಅನನ್ಯಾ ಭಟ್ ನಾಪತ್ತೆ ಪ್ರಕರಣದ ಷಡ್ಯಂತ್ರ ಬಯಲಾಗಿದೆ. ಹೀಗಾಗಿ ಈ ಪ್ರಕರಣದಿಂದ ದೂರ ಸರಿದಿರುವ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಇದೀಗ ಹೊಸ ಪ್ಲಾನ್ ಮೂಲಕ ಧರ್ಮಸ್ಥಳ ವಿರುದ್ದ ಹೋರಾಟಕ್ಕೆ ಮುಂದಾಗಿರುವ ಮಾತುಗಳು ಕೇಳಿಬರುತ್ತಿದೆ.

ಧರ್ಮಸ್ಥಳ (ಆ.24) ಕಳೆದ ಹಲವು ದಿನಗಳಿಂದ ಧರ್ಮಸ್ಥಳ ದೇಶಾದ್ಯಂತ ಸದ್ದು ಮಾಡಿದೆ. ಶವ ಹೂತಿಟ್ಟ ಪ್ರಕರಣ, ಅನನ್ಯಾ ಭಟ್ ನಾಪತ್ತೆ ಪ್ರಕರಣಗಳು ಧರ್ಮಸ್ಥಳ ಕ್ಷೇತ್ರವನ್ನು ಅನುಮಾನಗಳಿಂದ ನೋಡುವಂತಾಗಿತ್ತು. ಆದರೆ ಈ ಷಡ್ಯಂತ್ರಗಳು ಇದೀಗ ಒಂದೊಂದಾಗಿ ಹೊರಬರುತ್ತಿದೆ. ನೂರಾರು ಶವ ಹೂತಿಟ್ಟಿದ್ದೇನೆ ಎಂದು ಆರೋಪಿಸಿ ಬಂದ ದೂರುದಾರ ಚಿನ್ನಯ್ಯ ಅಲಿಯಾಸ್ ಮುಸುಕುದಾರಿ ಇದೀಗ ಅರೆಸ್ಟ್ ಆಗಿ ವಿಚಾರಣೆ ಎದುರಿಸುತ್ತಿದ್ದಾರೆ. ಇದರೊಂದಿಗೆ ಇಡೀ ಪ್ರಕರಣದ ದಿಕ್ಕು ಬದಲಾಗಿದೆ. ಇದರ ನಡುವೆ ಜೈಲು ಸೇರಿದ್ದ ಹೋರಾಟಾಗರ ಮಹೇಶ್ ಶೆಟ್ಟಿ ತಿಮರೋಡಿ ಜಾಮೀನು ಪಡೆದು ಹೊರಬಂದಿದ್ದಾರೆ. ಇಷ್ಟೇ ಅಲ್ಲ ಬುರುಡೆ ಪ್ರಕರಣದಿಂದ ದೂರ ಉಳಿಯಲು ಬಯಸಿರುವ ತಿಮರೋಡಿ ಗ್ಯಾಂಗ್ ಹೊಸ ಅಸ್ತ್ರದ ಮೂಲಕ ಧರ್ಮಸ್ಥಳ ವಿರುದ್ಧ ಹೋರಾಟ ಮುಂದುವರಿಸಲು ಮುಂದಾಗಿದ್ದಾರೆ.

ಸೌಜನ್ಯ ಪ್ರಕರಣದ ಮೂಲಕ ಮತ್ತೆ ಹೋರಾಟ

ಸೌಜನ್ಯ ಪ್ರಕರಣದ ಮೂಲಕ ಮಹೇಶ್ ಶೆಟ್ಟಿ ತಿಮರೋಡಿ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ದೊಡ್ಡ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದರು. ಸೌಜನ್ಯ ಹೋರಾಟಕ್ಕೆ ರಾಜ್ಯದೆಲ್ಲಡೆಗಳಿಂದ ಬೆಂಬಲ ವ್ಯಕ್ತವಾಗಿತ್ತು. ಇದೇ ರೀತಿ ಧರ್ಮಸ್ಥಳದಲ್ಲಿ ಶವಹೂತಿಟ್ಟ ಪ್ರಕರಣವನ್ನು ಮುನ್ನಡೆಸಲು ಪ್ಲಾನ್ ರೂಪಿಸಲಾಗಿತ್ತು ಅನ್ನೋ ಆರೋಪಗಳಿವೆ. ಆರಂಭಿಕ ಹಂತದಲ್ಲಿ ಬುರುಡೆ ಪ್ರಕರಣಕ್ಕೆ ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಯಶಸ್ಸು ಸಿಕ್ಕಿತ್ತು. ಕೆಲ ಸೆಲೆಬ್ರೆಟಿಗಳು ಈ ಹೋರಾಟ ತೀವ್ರಗೊಳಿಸಲು ಖುದ್ದು ಧರ್ಮಸ್ಥಳಕ್ಕೆ ತೆರಳಿ ಬೆಂಬಲ ಸೂಚಿಸಿದ್ದರು. ಆದರೆ ಬುರಡೆ ಪ್ರಕರಣ ಉಲ್ಟಾ ಆಗುತ್ತಿದ್ದಂತೆ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಇದೀಗ ತಮ್ಮ ಮೂಲ ಹೋರಾಟವಾಗಿರುವ ಸೌಜನ್ಯ ಹೋರಾಟವನ್ನೇ ಮುಂದುವರಿಸಲು ಪ್ಲಾನ್ ರೂಪಿಸಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಸೌಜನ್ಯ ಮೂಲಕ ಹೋರಾಟ ಜೀವಂತವಾಗಿರಿಸಲು ಪ್ಲಾನ್

ಜೈಲಿನಿಂದ ಜಾಮೀನು ಪಡೆದು ಹೊರಬಂದ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಇದೀಗ ತಾವು ಜನಪ್ರಿಯರಾಗಿರುವ ಹಾಗೂ ರಾಜ್ಯಾದ್ಯಂತ ಬೆಂಬಲ ಸಿಕ್ಕಿರುವ ಸೌಜನ್ಯ ಪ್ರಕರಣದ ಮೂಲಕ ಹೋರಾಟ ತೀವ್ರಗೊಳಿಸಲು ಮುಂದಾಗಿದ್ದಾರೆ. ಜಾಮೀನು ಪಡೆದು ಮನೆಗೆ ಮರಳಿದ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್, ಬುರುಡೆ ಪ್ರಕರಣ, ಸೌಜನ್ಯ ಹೋರಾಟದಿಂದ ದೂರವಿರಲು ನಿರ್ಧರಿಸಿದ್ದಾರೆ. ಈ ಪ್ರಕರಣ ಸಂಪೂರ್ಣ ಉಲ್ಟಾ ಹೊಡೆದಿರುವ ಕಾರಣ ತಮ್ಮ ಹೋರಾಟದ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ ಅನ್ನೋ ಸತ್ಯವನ್ನು ತಿಮರೋಡಿ ಗ್ಯಾಂಗ್ ಅರಿತುಕೊಂಡಿದೆ ಎನ್ನಲಾಗಿದೆ. ಇಷ್ಟೇ ಅಲ್ಲ ಹೊಸ ವಿಚಾರಗಳ ಮೂಲಕ ಸೌಜನ್ಯ ಹೋರಾಟವನ್ನು ತೀವ್ರಗೊಳಿಸಲು ಪ್ಲಾನ್ ರೆಡಿ ಮಾಡಲಾಗುತ್ತಿದೆ ಎಂದು ಚರ್ಚೆಯಾಗುತ್ತಿದೆ.

ಬುರುಡೆ ಗ್ಯಾಂಗ್‌ಗೆ ನಡುಕ

ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಹಲವು ಘಟನಗಳು ನಡಿದೆದೆ. ಇದೀಗ ದೂರುದಾರ ಚಿನ್ನಯ್ಯ ಅಲಿಯಾಸ್ ಮುಸುಕುಧಾರಿ ಅರೆಸ್ಟ್ ಆಗಿದ್ದಾನೆ. ಇದರ ಬೆನ್ನಲ್ಲೇ ಈ ಬುರುಡೆ ಗ್ಯಾಂಗ್‌ಗೆ ನಡುಕ ಶುರುವಾಗಿದೆ. ಚಿನ್ನಯ್ಯ ಹೆಸರು ಬಾಯಿಬಿಟ್ಟರೆ ಹಲವರು ಅರೆಸ್ಟ್ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ಪ್ರಕರಣದ ಹಿಂದಿನ ಪ್ರಮುಖರು ತಲೆಮರೆಸಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.