Chamarajanagar youth suicide news ಚಾಮರಾಜನಗರ ತಾಲೂಕಿನ ಯುವಕನೊಬ್ಬ ತನ್ನ ಸ್ನೇಹಿತನ ಪ್ರೇಮಕ್ಕೆ ಬೆಂಬಲ ನೀಡಿದ್ದನು. ಈ ವಿಚಾರ ಸ್ನೇಹಿತನ ತಂದೆಯಿಂದ ಬೆದರಿಕೆಗೆ, ಮನನೊಂದು ಕೆರೆಗೆ ಹಾರಿ ಆತ್ಮ೧ಹತ್ಯೆಗೆ ಶರಣಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.

ಚಾಮರಾಜನಗರ (ಅ.16): ಸ್ನೇಹಿತನ ಲವ್ ಗೆ ಯುವಕ ಸಾಥ್ ಕೊಟ್ಟಿದ್ದಾನೆ. ಈ ವಿಚಾರ ತಿಳಿದು ಲವ್ ಮಾಡ್ತಿದ್ದ ಯುವಕನ ತಂದೆ ಬಂದು ನನ್ನ ಮಗ ನಿನ್ನಿಂದ ಹಾಳಾಗುತ್ತಿದ್ದಾನೆ. ಆ ಹುಡುಗಿಯನ್ನು ನನ್ನ ಮಗ ಮದುವೆಯಾದ್ರೆ ನಿನ್ನನ್ನು ಸುಮ್ಮನೆ ಬಿಡಲ್ಲ ಅಂತಾ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದ ಯುವಕ ಕೆರೆಗೆ ಹಾರಿ ಆತ್ಮ೧ಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಆತ ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದ ಯುವಕ.ತಾನಾಯ್ತು ತನ್ನ ಕಥೆಯಾಯ್ತು ಅಂತಾ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸ್ತಿದ್ದನು. ಶಿವ ಶಂಕರಮೂರ್ತಿ ಹಾಗೂ ಆತನ ಸ್ನೇಹಿತ ಮಹೇಶ್ ಇಬ್ಬರು ಕೂಡ ಜೊತೆಯಲ್ಲಿ ಗಾರೆ ಕೆಲಸಕ್ಕೆ ಹೋಗ್ತಿದ್ದರು. ಆದ್ರೆ ಮಹೇಶ್ ಯುವತಿಯನ್ನು ಲವ್ ಮಾಡುತ್ತಿದ್ದನು. ಈತನ ಲವ್ ವಿಚಾರ ಮಹೇಶ್ ತಂದೆ ಮರಿಸ್ವಾಮಿಗೆ ಗೊತ್ತಾಗಿದೆ. ಮರಿಸ್ವಾಮಿ ಏಕಾಏಕಿ ಶಿವಶಂಕರ ಮೂರ್ತಿ ಬಳಿ ಬಂದು ನನ್ನ ಮಗನ ತಲೆಕೆಡಿಸುತ್ತಿದ್ದಿಯಾ, ನನ್ನ ಮಗ ಆ ಯುವತಿಯನ್ನು ಕದ್ದು ಮದುವೆಯಾದರೆ ನೀನೆ ಹೊಣೆ, ಆತ ಯುವತಿಯನ್ನು ಮದುವೆಯಾಗುವುದು ನಮಗೆ ಸುಥಾರಾಂ ಇಷ್ಟವಿಲ್ಲ. ಒಂದು ವೇಳೆ ಅವನು ನಮ್ಮ ಮಾತು ಮೀರಿ ಆ ಯುವತಿಯನ್ನು ಮದುವೆಯಾದರೆ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಹಿಗ್ಗಾಮುಗ್ಗಾ ಬೈದಿದ್ದಾನೆ. ಇದರಿಂದ ಶಿವಶಂಕರ ಮೂರ್ತಿ ತುಂಬಾ ಮನನೊಂದಿದ್ದನು ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಇನ್ನೂ ಶಿವಶಂಕರ ಮೂರ್ತಿ ಮಾನಕ್ಕೆ ಅಂಜುವ ವ್ಯಕ್ತಿ. ಯಾರೊಬ್ಬರ ಬಳಿಯೂ ಒಂದು ಮಾತು ಕೂಡ ಕೇಳ್ತಿರಲಿಲ್ಲ. ಮರಿಸ್ವಾಮಿ ಎಂಬುವವರು ಮನೆಗೆ ಬಂದು ಬೈದ ನಂತರ ತುಂಬಾ ಸೈಲೆಂಟ್ ಆಗಿದ್ದನು. ಅವರು ಬೈದಿದ್ದಕ್ಕೆ ಈ ರೀತಿ ಮಾಡಿಕೊಂಡಿದ್ದಾನೆ. ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದ ಕೆರೆಗೆ ಬಿದ್ದಿದ್ದಾನೆ. ಸ್ನೇಹಿತ ಮಹೇಶ್ ಹಾಗೂ ಆತನ ಅಪ್ಪ ಮರಿಸ್ವಾಮಿ ಇಬ್ಬರ ವಿರುದ್ಧ ಕೂಡ ಕ್ರಮ ಜರುಗಿಸಬೇಕು. ಅವರು ನನ್ನ ತಮ್ಮನನ್ನು ಕೊಲ್ಲುವ ಕೆಲಸ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಲವ್ ಮಾಡಿದ್ದ ಸ್ನೇಹಿತನ ಪ್ರೇಮಕ್ಕೆ ಸಾಥ್ ಕೊಟ್ಟಿದ್ದೆ ಈ ಪ್ರಕರಣದಲ್ಲಿ ತಪ್ಪಾಗಿದೆ. ಸ್ನೇಹಿತನ ತಂದೆ ಹಿಗ್ಗಾಮುಗ್ಗಾ ಬೈದು ಬೆದರಿಕೆ ಹಾಕಿದ್ದಕ್ಕೆ ಆತ್ಮ೧ಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಯಾವ ಕ್ರಮ ವಹಿಸ್ತಾರೆ ಅನ್ನೋದ್ನ ಕಾದುನೋಡಬೇಕಾಗಿದೆ..