ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಸಿಲಿಂಡರ್ ಸ್ಪೋಟದಲ್ಲಿ 10 ವರ್ಷದ ಮಗು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಸ್ಪೋಟದ ಕಾರಣ ಇನ್ನೂ ನಿಗೂಢವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಆ.15): ಮನೆಯೊಂದರಲ್ಲಿ ಎಲ್'ಪಿಜಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಭಾರೀ ಸ್ಫೋಟ ಸಂಭವಿಸಿದ್ದು, ಪರಿಣಾಮ ಬಾಲಕನೊರ್ವ ಸಾವನ್ನಪ್ಪಿ, 12 ಮಂದಿಗೆ ಗಾಯವಾಗಿರುವ ಘಟನೆ ವಿಲ್ಸನ್ ಗಾರ್ಡನ್​ನ ಚಿನ್ನಯ್ಯನಪಾಳ್ಯದಲ್ಲಿ ಶುಕ್ರವಾರ ನಡೆದಿದೆ.

ಮೃತ ಬಾಲಕನ್ನು ಮುಬಾರಕ್ (8) ಎಂದು ಗುರ್ತಿಸಲಾಗಿದೆ. ಘಟನೆಯಲ್ಲಿ ಒಟ್ಟು 12 ಮಂದಿಗೆ ಗಾಯಗಳಾಗಿದ್ದು, 7 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಸ್ಫೋಟದ ತೀವ್ರತೆಗೆ ಮೊದಲನೇ ಮಹಡಿಯ ಮನೆ ಗೋಡೆ ಛಾವಣಿ ಕುಸಿದು ಬಿದ್ದಿದೆ. 10 ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ

ಸ್ಪೋಟದಲ್ಲಿ ಒಂದು ಮಗುವಿಗೆ ತೀವ್ರವಾದ ಸುಟ್ಟ ಗಾಯಗಳಾಗಿದ್ದು, ಇನ್ನೊಂದು ಮಗುವಿನ ಮೇಲೆ ಗೋಡೆ ಬಿದ್ದ ಪರಿಣಾಮ ಕೈ-ಕಾಲಿನ ಮೂಳೆಗಳು ಮುರಿದಿವೆ. ಗಾಯಾಳು ಮಕ್ಕಳಿಗೆ ಐಸಿಯುನಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಇಂದಿರಾಗಾಂಧಿ ಆಸ್ಪತ್ರೆಯಿಂದ ಸುವರ್ಣ ನ್ಯೂಸ್‌ಗೆ ಮಾಹಿತಿ ಲಭಿಸಿದೆ.

ಸ್ಪೋಟದ ಬಗ್ಗೆ ಭಾರೀ ಅನುಮಾನ ವ್ಯಕ್ತವಾಗಿದೆ. ಸ್ಥಳೀಯರ ಪ್ರಕಾರ, ಮನೆಯಲ್ಲಿ ವಾಸವಾಗಿರುವ ಕಸ್ತೂರಿ ಎಂಬ ಮಹಿಳೆ ನಿನ್ನೆ (ಆಗಸ್ಟ್ 14, 2025) ಮನೆಯಲ್ಲಿ ಸಿಲಿಂಡರ್ ಖಾಲಿಯಾಗಿದೆ ಎಂದು ಹೇಳಿ, ಹೋಟೆಲ್‌ನಿಂದ ತಿಂಡಿ ತಂದಿದ್ದರು. ಸ್ಥಳೀಯರು ಈ ಬಗ್ಗೆ ಪ್ರಶ್ನಿಸಿದಾಗ, ಕಸ್ತೂರಿ ಕೆಂಪು ಸಿಲಿಂಡರ್ ಖಾಲಿಯಾಗಿದೆ, ಬ್ಲಾಕ್‌ನಿಂದ ಹೊಸ ಸಿಲಿಂಡರ್ ತರಿಸುತ್ತೇವೆ, ಅವರೇ ಬಂದು ಇನ್‌ಸ್ಟಾಲ್ ಮಾಡಿ ಹೋಗುತ್ತಾರೆ ಎಂದಿದ್ದರು. ಆದರೆ, ಇಂದು ಬೆಳಗ್ಗೆ ಸಿಲಿಂಡರ್ ಸ್ಪೋಟಗೊಂಡಿರುವುದು ಶಂಕೆಗೆ ಕಾರಣವಾಗಿದೆ.

ಘಟನಾ ಸ್ಥಳಕ್ಕೆ ಆಡುಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ರಮೇಶ ಬಾನೋತ್ ಮತ್ತು ಶಾಸಕ ಉದಯ್ ಗರುಡಾಚಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಪೋಟದ ಕಾರಣ ಮತ್ತು ಸಂದರ್ಭಗಳ ಬಗ್ಗೆ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

ಸಿಲಿಂಡರ್ ಸ್ಪೋಟದ ಹಿಂದಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ. ಗಾಯಾಳು ಮಕ್ಕಳ ಚಿಕಿತ್ಸೆಯ ಜೊತೆಗೆ, ಪೊಲೀಸರು ಕಸ್ತೂರಿ ಅವರ ಹೇಳಿಕೆಯನ್ನು ಆಧರಿಸಿ ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಈ ದುರ್ಘಟನೆಯ ಬಗ್ಗೆ ಇಡೀ ಏರಿಯಾದಲ್ಲಿ ಆತಂಕ ಮನೆಮಾಡಿದೆ.