ರಾಯಚೂರು ಜಿಲ್ಲೆಯ ಹಟ್ಟಿಯಲ್ಲಿ ಪೇಂಟಿಂಗ್ ಕೆಲಸದ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 4.67 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. 

ರಾಯಚೂರು, (.26): ರಾಯಚೂರು ಜಿಲ್ಲೆಯ ಹಟ್ಟಿ ಪೊಲೀಸರು ಕುಖ್ಯಾತ ಮನೆಗಳ್ಳನೊಬ್ಬನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ 21 ವರ್ಷದ ಮಸ್ತಾನ್ ಬಂಧಿತ ಮನೆಗಳ್ಳ. ಖದೀಮನಿಂದ 4.67 ಲಕ್ಷ ರೂಪಾಯಿ ಮೌಲ್ಯದ 51 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಮಸ್ತಾನ್, ಪೇಂಟಿಂಗ್ ಕೆಲಸದ ನೆಪದಲ್ಲಿ ಊರಿನ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ, ಯೋಜಿತವಾಗಿ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದ. ಏಪ್ರಿಲ್ 14, 2025 ರಂದು ಫಯಾಜ್ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ್ದ. ಈ ಪ್ರಕರಣ ಹಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆರೋಪಿಯು ಕಳ್ಳತನ ಹಣವನ್ನು ಮೋಜು-ಮಸ್ತಿಗೆ ಖರ್ಚು ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಮಸ್ತಾನ್‌ನ ವಿರುದ್ಧ ಈಗಾಗಲೇ ಹಲವು ಕಳ್ಳತನದ ಪ್ರಕರಣಗಳು ದಾಖಲಾಗಿದ್ದು, ತನಿಖೆಯಿಂದ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹಟ್ಟಿ ಪೊಲೀಸರು, ಆರೋಪಿಯ ಚಲನವಲನಗಳನ್ನು ಗಮನಿಸಿ, ಕಾರ್ಯಾಚರಣೆ ನಡೆಸಿ ಮಸ್ತಾನ್‌ನನ್ನು ಬಂಧಿಸಿದ್ದಾರೆ. ಖದೀಮನಿಂದ ಜಪ್ತಿಮಾಡಲಾದ ಚಿನ್ನಾಭರಣವು ಕಳ್ಳತನದ ಒಡವೆಗಳಾಗಿವೆ. ಈ ಯಶಸ್ವಿ ಕಾರ್ಯಾಚರಣೆಗೆ ಸ್ಥಳೀಯರು ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ.