ಮಂಗಳೂರಿನಲ್ಲಿ ಇಬ್ಬರು ಯುವತಿಯರ ಬಟ್ಟೆ ಬದಲಾಯಿಸುವ ದೃಶ್ಯವನ್ನು ರಹಸ್ಯವಾಗಿ ಚಿತ್ರೀಕರಿಸಿದ ಆರೋಪದ ಮೇಲೆ ಅವರ ರೂಂಮೇಟ್ ನಿರೀಕ್ಷಾ ಎಂಬ ಯುವತಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಈ ವಿಡಿಯೋವನ್ನು ಪಡೆದಿದ್ದ ಅಭಿಷೇಕ್ ಎಂಬ ಯುವಕ ಆತ್ಮ೧ಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್‌ನಲ್ಲಿಬರೆದಿದ್ದ.
ಮಂಗಳೂರು (ಅ.19): ಇಬ್ಬರು ಯುವತಿಯರ ಬಟ್ಟೆ ಬದಲಾಯಿಸುವ ವಿಡಿಯೋ ರಹಸ್ಯವಾಗಿ ಚಿತ್ರೀಕರಿಸಿ ವೈರಲ್ ಮಾಡಿದ ಆರೋಪದ ಮೇಲೆ ಯುವತಿಯರ ರೂಂಮೇಟ್ ಆಗಿದ್ದ ಮತ್ತೊಬ್ಬ ಯುವತಿಯನ್ನ ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಲಶದ ನಿರೀಕ್ಷಾ, ಬಂಧಿತಳಾಗಿರುವ ಯುವತಿ.
ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯರು ಕುದ್ಕೋರಿಗುಡ್ಡೆಯ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಯುವತಿಯರ ಬಟ್ಟೆ ಬದಲಾಯಿಸುವ ದೃಶ್ಯವನ್ನು ನಿರೀಕ್ಷಾ ರಹಸ್ಯವಾಗಿ ವಿಡಿಯೋ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ವಿಡಿಯೋವನ್ನು ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿ ಅಭಿಷೇಕ್‌ಗೆ ಕಳುಹಿಸಿದ್ದಾಳೆ ಎಂದು ತಿಳಿದುಬಂದಿದೆ. ಅಭಿಷೇಕ್, ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದವನು, ಕಳೆದ ಅಕ್ಟೋಬರ್ 09 ರಂದು ಕಾರ್ಕಳದಲ್ಲಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾನೆ. ಅಭಿಷೇಕ್ ಆತ್ಮ೧ಹತ್ಯೆಗೂ ಮುನ್ನ ಸುಧೀರ್ಘ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ನಿರೀಕ್ಷಾ ಸೇರಿದಂತೆ ಕೆಲವರ ವಿರುದ್ಧ ಹನಿಟ್ರ್ಯಾಪ್ ಆರೋಪ ಮಾಡಿದ್ದಾನೆ. ಜೊತೆಗೆ, ನಿರೀಕ್ಷಾ ತನ್ನ ರೂಂಮೇಟ್‌ಗಳಾದ ಇಬ್ಬರು ಯುವತಿಯರ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿದ್ದಾಳೆ ಎಂದು ಉಲ್ಲೇಖಿಸಿದ್ದಾನೆ.
ಸಾಯುವ ಮುನ್ನ ವಾಟ್ಸಪ್ ಗ್ರೂಪ್‌ಗೆ ವಿಡಿಯೋ ಹಾಕಿದ್ದ ಅಭಿಷೇಕ್
ಸಾಯುವ ಮುನ್ನ ಅಭಿಷೇಕ್ 'truth group' ಎಂಬ ವಾಟ್ಸಾಪ್ ಗುಂಪು ರಚಿಸಿ, ಅದರಲ್ಲಿ ಈ ಯುವತಿಯರ ವಿಡಿಯೋ ಸೇರಿದಂತೆ ಕೆಲವು ವಿಡಿಯೋಗಳನ್ನು ಹರಿಬಿಟ್ಟಿದ್ದಾನೆ.ಈ ಘಟನೆಯಿಂದ ಆಘಾತಗೊಂಡ ಸಂತ್ರಸ್ತ ಯುವತಿಯರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವತಿಯರ ದೂರು ದಾಖಲಿಸಿಕೊಂಡ ಕದ್ರಿ ಪೊಲೀಸರು ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿದ್ದ ನಿರೀಕ್ಷಾಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಬಿಎನ್‌ಎಸ್ 77, 78(2), 294(2)(a) ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಕಳೆದ ಒಂದು ವರ್ಷದ ಹಿಂದೆ ಚಿತ್ರೀಕರಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ಸಂಬಂಧ ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸರು ಅಭಿಷೇಕ್‌ನ ಆತ್ಮಹತ್ಯೆಗೆ ಸಂಬಂಧಿಸಿದ ತನಿಖೆಯನ್ನು ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
