ಮಂಡ್ಯದಲ್ಲಿ ವೈಟ್ ಶರ್ಟ್‌ನಿಂದಾಗಿ ತಪ್ಪು ಗುರಿಯನ್ನು ಹೊಡೆದು ಕೊಲೆ ಮಾಡಲಾಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಊರಿಗೆ ಬಂದಿದ್ದ ಬೆಂಗಳೂರು ಕ್ಯಾಬ್ ಚಾಲಕ ಅರುಣ್ ಕೊಲೆಯಾಗಿದ್ದಾನೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.

ಮಂಡ್ಯ (ಆ.9):ಟಾರ್ಗೆಟ್‌ ಮಾಡಿದ್ದವನನ್ನು ಬಿಟ್ಟು ಮತ್ತೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಇದಕ್ಕೆ ಕಾರಣವಾಗಿದ್ದು ವೈಟ್‌ ಶರ್ಟ್‌. ಈ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ರಸ್ತೆಯಲ್ಲಿ ನಡೆದಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಬೆಂಗಳೂರು ಕ್ಯಾಬ್ ಚಾಲಕ ಅರುಣ್ (34) ಎಂಬಾತ ಕೊಲೆಯಾಗಿದ್ದಾನೆ.

ಘಟನೆ ನಡೆದಿದ್ದು ಹೀಗೆ

ಹತ್ಯೆಯಾದ ಅರುಣ್ ತನ್ನ ಸ್ನೇಹಿತ ಸೂರ್ಯ, ಸಹೋದರ ಉಮೇಶ್ ಮತ್ತು ಸಂಬಂಧಿ ದೇವರಾಜ್ ಜೊತೆ ಪಾರ್ಟಿ ಮಾಡುತ್ತಿದ್ದ. ಇದೇ ವೇಳೆ ಬಾರ್‌ ಮುಂಭಾಗದಲ್ಲಿ ಸಿಕ್ಕ ವಿಕ್ರಮ್ ಎಂಬಾತನ ಜೊತೆ ಸೂರ್ಯ ಹಳೇ ದ್ವೇಷದ ವಿಚಾರಕ್ಕೆ ಜಗಳ ತೆಗೆದಿದ್ದಾನೆ. ಎರಡು ವರ್ಷದ ಹಿಂದಿನ ಜಗಳದ ವಿಚಾರವನ್ನು ಮುಂದಿಟ್ಟುಕೊಂಡು ಸೂರ್ಯ, ವಿಕ್ರಮ್ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ, ಅರುಣ್ ಮಧ್ಯ ಪ್ರವೇಶಿಸಿ ಜಗಳ ಬಿಡಿಸಿ ಪಾರ್ಟಿ ಮುಂದುವರೆಸಿದ್ದಾನೆ.

ಸೂರ್ಯನ ಮೇಲೆ ಅಟ್ಯಾಕ್‌ ಮಾಡಲು ಕಾಯುತ್ತಿದ್ದ ದುಷ್ಕರ್ಮಿಗಳಿಗೆ ವಿಕ್ರಮ್ ಸುಳಿವು ನೀಡಿದ್ದಾನೆ. 'ಸೂರ್ಯ ಬಿಳಿ ಶರ್ಟ್ ಹಾಕಿದ್ದಾನೆ' ಎಂದು ಮಾಹಿತಿ ನೀಡಿದ್ದ. ಈ ಮಾತನ್ನು ಕೇಳಿದ ಹಂತಕರು ಸೂರ್ಯನ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಆದರೆ, ದುಷ್ಕರ್ಮಿಗಳು ಬರುತ್ತಿದ್ದಂತೆ ಪಾರ್ಟಿ ಮಾಡುತಿದ್ದ ಸೂರ್ಯ ಮತ್ತು ತಂಡದವರು ತಪ್ಪಿಸಿಕೊಂಡು ಓಡಿದ್ದಾರೆ.

ಹಂತಕರು, ಬಿಳಿ ಶರ್ಟ್ ಧರಿಸಿದ್ದ ಅರುಣ್‌ನನ್ನೇ ಸೂರ್ಯ ಎಂದು ತಪ್ಪಾಗಿ ತಿಳಿದು ಹಿಂಬಾಲಿಸಿದ್ದಾರೆ. ಹೆಮ್ಮನಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಅರುಣ್‌ನ ಮೇಲೆ ಮನಬಂದಂತೆ ಲಾಂಗು, ಮಚ್ಚು, ಮತ್ತು ಡ್ರ್ಯಾಗರ್‌ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ದಾಳಿಯಾಗುತ್ತಿದ್ದಂತೆ ಅರುಣ್‌ನೊಂದಿಗೆ ಇದ್ದ ಸಂಬಂಧಿ ದೇವರಾಜು ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಈ ಘಟನೆ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.