ಆತ ಕಳೆದ ನಾಲ್ಕೈದು ವರ್ಷಗಳಿಂದ ಸ್ವಂತ ಚಿಕ್ಕಮ್ಮನೊಂದಿಗೆ ಸಂಸಾರ ಮಾಡ್ತಾ ಇದ್ದ. ಆದರೆ ಇತ್ತೀಚೆಗೆ ಆಕೆಗೆ ಅಕ್ರಮ ಸಂಬಂಧ ಇದೆ ಎನ್ನೋ ಅನುಮಾನ ಶುರುವಾಗಿತ್ತು.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಆ.30): ಆತ ಕಳೆದ ನಾಲ್ಕೈದು ವರ್ಷಗಳಿಂದ ಸ್ವಂತ ಚಿಕ್ಕಮ್ಮನೊಂದಿಗೆ ಸಂಸಾರ ಮಾಡ್ತಾ ಇದ್ದ. ಆದರೆ ಇತ್ತೀಚೆಗೆ ಆಕೆಗೆ ಅಕ್ರಮ ಸಂಬಂಧ ಇದೆ ಎನ್ನೋ ಅನುಮಾನ ಶುರುವಾಗಿತ್ತು. ಈ ಅನುಮಾನ ವ್ಯಕ್ತಿಯೊಬ್ಬನ ಬರ್ಬರ ಹ*ತ್ಯೆಗೆ ಕಾರಣವಾಗಿದೆ. ಹಾಗಾದರೆ ಪತ್ನಿ ಮೇಲಿನ ಅನುಮಾನಕ್ಕೆ ವ್ಯಕ್ತಿಯ ಹ*ತ್ಯೆಯಾಗಿದ್ದೇಕೆ ಎನ್ನುವುದು ತೀವ್ರ ಕುತೂಹಲ. ಆಗಲೋ, ಈಗಲೋ ಬಿದ್ದು ಹೋಗುವಂತಹ ಮನೆ. ಮನೆಯಿಂದ ಮುಗ್ಗರಿಸಿ ಬಿದ್ದರೆ ಸಿಗುವ ಶುಂಠಿ ಹೊಲ. ಶುಂಠಿ ಹೊಲದಲ್ಲೊಂದು ಶೆಡ್. ಶೆಡ್ಡಿನೊಳಗೆ ಬಿದ್ದಿರುವ ಶವ. ಭಯ ಭೀತರಾಗಿ ನೋಡುತ್ತಿರುವ ಜನರು. ಇಂತಹ ಭೀಭತ್ಸ ದೃಶ್ಯಗಳು ಕಂಡು ಬಂದಿದ್ದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿಯ ಗಿರಿಜನ ಹಾಡಿಯಲ್ಲಿ.

ಹೌದು ಇವನು ತೀರ್ಥ ಅಂತ, ಇನ್ನೂ ಜಸ್ಟ್ 25 ವರ್ಷದ ಪ್ರಾಯದವನು. ವರಸೆಯಲ್ಲಿ ಚಿಕ್ಕಮ್ಮನೇ ಆಗಬೇಕಾದವಳೊಂದಿಗೆ ನಾಲ್ಕೈದು ವರ್ಷಗಳಿಂದ ಸಂಸಾರ ನಡೆಸುತ್ತಿದ್ದ. ಜಗಳವೋ, ದೊಂಬಿಯೋ ಮಾಡಿಕೊಂಡು ಬದುಕು ನಡೆಸುತ್ತಿದ್ದವರಿಗೆ ಮೂರು ಮಕ್ಕಳು. ಕೂಲಿ ನಾಲಿ ಮಾಡಿ ಸಂಸಾರ ದೂಡುತ್ತಿದ್ದ ಇವರ ಮನೆಯ ಹಿಂದೆ ಕಳೆದ ಒಂದು ವರ್ಷದ ಹಿಂದೆ ಮಣಿಕಂಠ ಎಂಬುವರು ಬೆಳೆದಿದ್ದ ಶುಂಠಿ ಬೆಳೆ ನೋಡಿಕೊಳ್ಳಲು ಕೇರಳ ಮೂಲದ 45 ವರ್ಷ ವಯಸ್ಸಿನ ಮುರಳಿ ಎಂಬಾತ ಬಂದಿದ್ದ. ವರ್ಷದಿಂದಲೂ ಇದೇ ಶುಂಠಿ ಹೊಲದಲ್ಲಿ ಗುಡಿಸಲೊಂದನ್ನು ಹಾಕಿಕೊಂಡು ಜೀವನ ಮಾಡುತ್ತಿದ್ದ. ಆದರೆ ಇದೇ ಮುರಳಿಗೂ ತನ್ನ ಪತ್ನಿಗೂ ಇತ್ತೀಚೆಗೆ ಅಕ್ರಮ ಸಂಬಂಧ ಶುರುವಾಗಿದೆ ಎಂಬ ಅನುಮಾನ ತೀರ್ಥನ ತಲೆಗೆ ಹೊಕ್ಕಿತ್ತು.

ಇದೇ ವಿಷಯಕ್ಕೆ ಜಗಳ ಶುರುವಾಗಿ ಗುರುವಾರ ರಾತ್ರಿ ತನ್ನ ಮನೆಯ ಹಿಂದೆಯೇ ಇರುವ ಶುಂಠಿ ಹೊಲದ ಬಳಿಗೆ ಹೋದ ತೀರ್ಥ ದೊಣ್ಣೆಯೊಂದನ್ನು ತೆಗೆದುಕೊಂಡು ಮುರಳಿಗೆ ಥಳಿಸಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ತೀರ್ಥ ತನ್ನ ಮನೆಗೆ ವಾಪಸ್ ಬಂದು ಪತ್ನಿಗೂ ಮನಸ್ಸೋ ಇಚ್ಛೆ ಥಳಿಸಿದ್ದಾನೆ. ಇದರಿಂದ ಆಕೆಯ ಒಂದು ಕೈ ಹಾಗೂ ಒಂದು ಕಾಲು ಮುರಿದಿದೆ. ಮಕ್ಕಳು ಎಂದು ನೋಡದೆ ಅವರಿಗೂ ಥಳಿಸಿ, ರಾತ್ರಿ ಮನೆಯಲ್ಲಿಯೇ ಕಾಲ ಕಳೆದಿದ್ದಾನೆ. ಬೆಳಿಗ್ಗೆ ಆರು ಗಂಟೆಯಾಗುತ್ತಲೇ ಅದೇ ಬೀದಿಯಲ್ಲಿ ಇರುವ ಆಟೋ ಚಾಲಕ ಯೇಸು ಎಂಬಾತನ ಮನೆಗೆ ಹೋಗಿದ್ದಾನೆ. ಹೋದವನೆ ತನ್ನ ಪತ್ನಿ ಹಾಗೂ ಆ ಮುರುಳಿಗೆ ಅಕ್ರಮ ಸಂಬಂಧವಿತ್ತು.

ಹೀಗಾಗಿ ನನ್ನ ಪತ್ನಿಗೆ ಕೈಕಾಲು ಮುರಿದಿದ್ದೇನೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಬೇಕು ಬಾ ಎಂದು ಕರೆದಿದ್ದಾನೆ. ಅನುಮಾನಗೊಂಡು ಯೇಸು ಎಂಬಾತ ತೀರ್ಥನ ಮನೆಗೆ ಬಂದು ನೋಡಿದಾಗಲೇ ಶುಂಠಿ ಹೊಲದ ಕಾವಲು ಕಾಯುವ ಮುರಳಿಯ ಹ*ತ್ಯೆಯಾಗಿರುವ ವಿಷಯ ಗೊತ್ತಾಗಿದೆ. ಮುರಳಿಯನ್ನು ತೀರ್ಥ ಹೊಡೆದು ಹ*ತ್ಯೆ ಮಾಡಿರುವ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಬಂದಿದ್ದರು. ಅಷ್ಟೊತ್ತಿಗಾಗಲೇ ಪೊಲೀಸರು ಇನ್ನೇನು ಬರುತ್ತಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಅಲ್ಲಿಂದ ಈ ಪಾಪಿ ತೀರ್ಥ ಎಸ್ಕೇಪ್ ಆಗಿದ್ದ. ಸಮೀಪದ ಗುಡ್ಡೆಹೊಸೂರಿನ ಮದ್ಯದಂಗಡಿಯಲ್ಲಿ ಎಣ್ಣೆ ಹೊಡೆಯುತ್ತಿದ್ದ ತೀರ್ಥನನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

ಮುರಳಿ ಯಾವಾಗಲೂ ತೀರ್ಥನ ಮನೆಗೆ ಹೋಗುತ್ತಿದ್ದನಂತೆ. ಆ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ಕೊಡಿಸುತ್ತಿದ್ದನಂತೆ. ಗ್ರಾಮದ ಎಲ್ಲರೊಂದಿಗೆ ಅನ್ಯೋನ್ಯತೆಯಿಂದ ಇದ್ದ ಮುರಳಿ ಯಾರೊಂದಿಗೂ ಯಾವುದೇ ವೈಷ್ಯಮ್ಯ ಇರಲಿಲ್ಲವಂತೆ. ಎಲ್ಲರನ್ನು ಅಣ್ಣ, ಅಕ್ಕ ಎಂದೇ ಮಾತನಾಡಿಸುತ್ತಾ ಚೆನ್ನಾಗಿ ಇದ್ನಂತೆ. ಆದರೆ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧವಿತ್ತು ಎನ್ನುವ ಅನುಮಾನದಿಂದ ತೀರ್ಥ ಮಾತ್ರ ಮುರಳಿಯನ್ನು ಬರ್ಭರವಾಗಿ ಹ*ತ್ಯೆ ಮಾಡಿದ್ದಾನೆ. ಏನೇ ಆಗಲಿ ಅಕ್ರಮ ಸಂಬಂಧವಿತ್ತೋ ಇಲ್ಲ, ತೀರ್ಥನ ತಲೆಗೆ ಕಾಡಿದ ಅನುಮಾನವೋ ಹೊಟ್ಟೆ ತುಂಬಿಸಿಕೊಳ್ಳಲು ಶುಂಠಿ ಹೊಲ ಕಾಯುತ್ತಿದ್ದ ವ್ಯಕ್ತಿಯ ಬರ್ಭರ ಹ*ತ್ಯೆ ಮಾಡಿ ತನ್ನ ಪತ್ನಿಯನ್ನು ಅರೆಜೀವ ಮಾಡಿರುವುದಂತು ವಿಪರ್ಯಾಸವೇ ಸರಿ.