Jakeer Baig missing case: ಮದುವೆ ಸಿದ್ಧತೆಗಾಗಿ ವಿದೇಶದಿಂದ ಬಂದಿದ್ದ ಜಾಕೀರ್ ಬೇಗ್ ಎಂಬ ಯುವಕ, ಭಟ್ಕಳದಲ್ಲಿ ಚಿನ್ನಾಭರಣ ಖರೀದಿಗೆ ತೆರಳಿದ್ದಾಗ ನಿಗೂಢವಾಗಿ ನಾಪತ್ತೆ. ನಮಾಜ್ ಮುಗಿಸಿ ಹೊರಬಂದ ನಂತರ ಕಾಣೆಯಾಗಿದ್ದು, ಆತನ ಪತ್ತೆಗಾಗಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉತ್ತರಕನ್ನಡ (ಅ.19): ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮದುವೆ ಸಿದ್ಧತೆಗಾಗಿ ಚಿನ್ನಾಭರಣ ಖರೀದಿಸಲು ತೆರಳಿದ್ದ ಯುವಕನೊಬ್ಬ ರಹಸ್ಯವಾಗಿ ನಾಪತ್ತೆಯಾಗಿದ್ದಾನೆ. ಕುಮಟಾ ತಾಲೂಕಿನ ಮದ್ಗುಣಿ, ಹಳ್ಳಾರ, ಚಿತ್ರಗಿ ನಿವಾಸಿಯಾಗಿರುವ ಜಾಕೀರ್ ಬೇಗ್ (32) ನಾಪತ್ತೆಯಾಗಿರುವ ಯುವಕ.

ಜಾಕೀರ್ ಬೇಗ್ ನಾಪತ್ತೆ ನಿಗೂಢ:

ಮದುವೆ ನಿಮಿತ್ತ ಯುವಕ ವಿದೇಶದಿಂದ ಊರಿಗೆ ಬಂದಿದ್ದ ಜಾಕೀರ್. ಕಳೆದ ಶುಕ್ರವಾರ (ಅಕ್ಟೋಬರ್ 18)ದಂದು ಅಣ್ಣನ ಹೆಂಡತಿ ಮತ್ತು ಅಣ್ಣನ ಮಗಳ ಜತೆ ಚಿನ್ನಾಭರಣ ಖರೀದಿಗೆ ಭಟ್ಕಳಕ್ಕೆ ತೆರಳಿದ್ದರು. ಮಧ್ಯಾಹ್ನ ಸುಮಾರು 1:15ರ ವೇಳೆಗೆ ನೂರಪಳ್ಳಿ ಮಸೀದಿಯಲ್ಲಿ ನಮಾಜ್ ಮುಗಿಸಿ ಹೊರಬಂದ ನಂತರ ಜಾಕೀರ್ ಕಾಣೆಯಾಗಿದ್ದಾರೆ. ಕುಟುಂಬದವರಿಗೂ ಯಾವುದೇ ಮಾಹಿತಿ ನೀಡದೇ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು:

ಸುತ್ತಮುತ್ತ ಎಲ್ಲ ಕಡೆ ಕುಟುಂಬಸ್ಥರು ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆ ಜಾಕೀರ್‌ರ ಸಹೋದರ ಗಫೂರ್ ಬೇಗ್ ಅವರು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕುರಿತು ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ಆರಂಭಿಸಿದ್ದಾರೆ. ಭಟ್ಕಳ ನಗರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ತನಿಖೆಯನ್ನು ಮುಂದುವರಿಸಿದ್ದಾರೆ. ಈ ಘಟನೆಯಿಂದಾಗಿ ಮದುವೆ ಸಂಭ್ರಮದಲ್ಲಿದ್ದ ಕುಟುಂಬದವರಲ್ಲಿ ಆತಂಕ ಮೂಡಿಸಿದ್ದು, ಜಾಕೀರ್‌ರ ಸುರಕ್ಷಿತ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.