ಜೈಪುರದಲ್ಲಿ ವೈಫೈ ಸಂಪರ್ಕ ಕಡಿತಗೊಂಡಿದ್ದಕ್ಕೆ ನಡೆದ ಜಗಳದಲ್ಲಿ, 31 ವರ್ಷದ ಮಗನೊಬ್ಬ ತನ್ನ ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಾದಕ ವ್ಯಸನಿಯಾಗಿದ್ದ ಈತ, ಕೋಪದಲ್ಲಿ ಕತ್ತು ಹಿಸುಕಿ, ಮರದ ಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
jaipur Shocker Son Kills Mother Over WiFi Dispute: ವೈಫೈ ಸಂಪರ್ಕ ಕಡಿತಗೊಂಡಿದ್ದಕ್ಕಾಗಿ ತಾಯಿ-ಮಗನ ನಡುವೆ ನಡೆದ ಜಗಳದಲ್ಲಿ ತಾಯಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜೈಪುರದಲ್ಲಿ ನಡೆದಿದೆ. ಈ ಸಂಬಂಧ 31 ವರ್ಷದ ನವೀನ್ ಸಿಂಗ್ ಎಂಬ ವ್ಯಕ್ತಿಯನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ.
ವಿಚಾರಣಾ ನ್ಯಾಯಾಲಯದ ಮಾಹಿತಿಯಂತೆ, ವೈಫೈ ವಿಚಾರವಾಗಿ ತಾಯಿಯೊಂದಿಗಿನ ವಾಗ್ವಾದ ನಡೆಸಿರುವ ನವೀನ್, ಕೋಪದಲ್ಲಿ ತನ್ನ ತಾಯಿಯ ಕತ್ತು ಹಿಸುಕಿ, ನಂತರ ಮರದ ಕೋಲಿನಿಂದ ತಲೆಗೆ ಪದೇ ಪದೇ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ತಾಯಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ವಿಫಲವಾಗಿ ಅವರು ಮೃತಪಟ್ಟಿದ್ದಾರೆ.
ಫೆಬ್ರವರಿ 2026ರಲ್ಲಿ ಮಗಳ ಮದುವೆ ಸಿದ್ಧತೆ ನಡೆಸಿದ್ದ ಕುಟುಂಬ:
ಫೆಬ್ರವರಿ 2026 ರಲ್ಲಿ ಕುಟುಂಬವು ಮಗಳ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಇದರಿಂದ ಕುಟುಂಬದ ಸಂತೋಷ ದುಃಖಕ್ಕೆ ತಿರುಗಿದೆ. ಮೃತಳ ಪತಿ ಹಾಗೂ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿರುವ ಲಕ್ಷ್ಮಣ್ ಸಿಂಗ್, 'ತಾಯಿಯನ್ನು ಕೊಂದು ಕುಟುಂಬವನ್ನು ಹಾಳುಮಾಡಿದ ಏಕೈಕ ಮಗ ಇವನು. ಇವನನ್ನು ಗಲ್ಲಿಗೇರಿಸಿ, ಅವನೊಂದಿಗೆ ಇನ್ನು ಮುಂದೆ ಯಾವ ಸಂಬಂಧವಿಲ್ಲ ಎಂದು ಆಕ್ರೋಶದಿಂದ ಹೇಳಿದ್ದಾರೆ ಎಂದು ನವಭಾರತ್ ವರದಿ ಮಾಡಿದೆ.
ಮಾದಕ ವ್ಯಸನಿಯಾಗಿದ್ದ ಪುತ್ರ:
ನವೀನ್ ಹಲವು ವರ್ಷಗಳಿಂದ ಮಾದಕ ವ್ಯಸನಿಯಾಗಿದ್ದು, ಆಗಾಗ್ಗೆ ತನ್ನ ಕೋಣೆಯಲ್ಲಿ ಒಂಟಿಯಾಗಿರುತ್ತಿದ್ದ. ಕುಟುಂಬದ ಸಂಬಂಧಗಳು ಹದಗೆಟ್ಟಿದ್ದವು. ಘಟನೆಗೂ ಮುನ್ನ ತಂದೆ-ಮಗ ತಿಂಗಳುಗಟ್ಟಲೆ ಮಾತನಾಡಿರಲಿಲ್ಲ. ಕಲಾ ಪದವೀಧರನಾದ ನವೀನ್, ಈ ಹಿಂದೆ ಜೆನ್‌ಪ್ಯಾಕ್ಟ್‌ನಲ್ಲಿ ಕೆಲಸ ಮಾಡಿದ್ದರೂ, ಸದ್ಯ ನಿರುದ್ಯೋಗಿಯಾಗಿದ್ದ. ಅವನ ನಿರುದ್ಯೋಗ ಮತ್ತು ಮಾದಕ ದ್ರವ್ಯ ಸೇವನೆಯು ಹಿಂಸಾತ್ಮಕ ನಡವಳಿಕೆಗೆ ಕಾರಣವಾಯಿತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಪೊಲೀಸ್ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (FSL) ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕೊಲೆಗೆ ಬಳಸಿದ ಮರದ ಕೋಲನ್ನು ವಶಪಡಿಸಿಕೊಂಡಿದೆ. ನವೀನ್ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಮುಂದುವರಿದಿದೆ. ವ್ಯಸನ, ನಿರುದ್ಯೋಗ, ಮತ್ತು ಕುಟುಂಬ ಕಲಹಗಳಿಂದ ಮಾರಕ ಘಟನೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
