Marital cheating : ಇಬ್ಬರು ಮಹಿಳೆಯರಿಗೆ ಮೋಸ ಮಾಡಲು ಮುಂದಾಗಿದ್ದ ವ್ಯಕ್ತಿ ಕಂಬಿ ಹಿಂದೆ ಸೇರಿದ್ದಾನೆ. ಮೊದಲ ಪತ್ನಿಗೆ ಡಿವೋರ್ಸ್ ನೀಡ್ದೆ ಎರಡನೇ ಮದುವೆಯಾಗಿದ್ದ.
ಪ್ರಾಮಾಣಿಕತೆಯ ಮುಖವಾಡ ಹಾಕಿಕೊಂಡು ಹೆಂಡ್ತಿಗೆ ದಾಂಪತ್ಯ ದ್ರೋಹ (Infidelity) ಮಾಡಿದ್ದ ವ್ಯಕ್ತಿಯೊಬ್ಬ ಜೈಲು ಸೇರಿದ್ದಾನೆ. ಸಿಂಗಾಪುರ (Singapore )ದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಕೋರ್ಟ್ ಜೈಲು ಶಿಕ್ಷೆ ನೀಡಿದೆ. ಮದುವೆಯಾಗಿ 15 ವರ್ಷಗಳ ಕಾಲ ಪತ್ನಿ ಜೊತೆ ಸಂಸಾರ ಮಾಡಿದ್ದ ವ್ಯಕ್ತಿ, ಆಕೆಗೆ ತಿಳಿಯದೆ ಇನ್ನೊಂದು ಮದುವೆ ಆಗಿದ್ದ. ಎರಡನೇ ಪತ್ನಿ ಹೆರಿಗೆ ಟೈಂನಲ್ಲಿ ಗಂಡನ ಮಹಾಮೋಸ ಮೊದಲ ಪತ್ನಿಗೆ ಗೊತ್ತಾಗಿದೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಆಗ್ನೇಯ ಏಷ್ಯಾದ ದೇಶದಲ್ಲಿ ದ್ವಿಪತ್ನಿತ್ವ ಅಪರಾಧ. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಆರೋಪಿಗೆ ಮೂರು ತಿಂಗಳು, ಮೂರು ವಾರಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಪತ್ನಿ ಇದ್ರೂ ಸಹೋದ್ಯೋಗಿ ಜೊತೆ ಮದುವೆ : 49 ವರ್ಷದ ವೈತಿಯಲಿಂಗಂ ಮುತ್ತುಕುಮಾರ್ ಆರೋಪಿ. ಮುತ್ತುಕುಮಾರ್ ಸಿಂಗಾಪುರದ ಮಹಿಳೆಯನ್ನು 2007 ರಲ್ಲಿ ಮದುವೆಯಾಗಿದ್ದ. ಭಾರತದಲ್ಲಿ ಇಬ್ಬರ ಮದುವೆ ನಡೆದಿತ್ತು. ಮುತ್ತುಕುಮಾರ್ ಮೊದಲ ಹೆಂಡ್ತಿ ವಯಸ್ಸು 55 ವರ್ಷ. 2011 ರಲ್ಲಿ ಮುತ್ತುಕುಮಾರ್ ತನ್ನ ಮೊದಲ ಪತ್ನಿ ಜೊತೆ ಸಿಂಗಾಪುರದಲ್ಲಿ ವಾಸ ಶುರು ಮಾಡಿದ್ದ. ಅಲ್ಲಿ ಸಹೋದ್ಯೋಗಿ ಜೊತೆ ಪ್ರೀತಿ ಶುರುವಾಗಿದೆ. ಸಿಂಗಾಪುರದ ಸಲ್ಮಾ ಬಿ ಅಬ್ದುಲ್ ರಜಾಕ್ ಗೆ ಮುತ್ತುಕುಮಾರ್ ಈಗಾಗಲೇ ಮದುವೆಯಾಗಿದ್ದಾನೆ ಎಂಬುದು ತಿಳಿದಿತ್ತು. ಆದ್ರೂ ಎರಡನೇ ಮದುವೆಗೆ ಆಕೆ ಒಪ್ಪಿಗೆ ನೀಡಿದ್ದಳು. ಆಕೆಗೆ 43 ವರ್ಷ ವಯಸ್ಸು. ಸಲ್ಮಾ ಮಗು ಬಯಸಿದ್ದರಿಂದ ವೈತಿಯಲಿಂಗಂ ಮತ್ತು ಸಲ್ಮಾ ಮದುವೆಯಾಗಲು ಯೋಜಿಸಿದ್ದರು. ಮದುವೆಯ ನಂತ್ರ ಮೊದಲ ಪತ್ನಿಗೆ ಡಿವೋರ್ಸ್ ನೀಡೋದಾಗಿ ವೈತಿಯಲಿಂಗಂ ಭರವಸೆ ನೀಡಿದ್ದ.
ಆಗಸ್ಟ್ 2022 ರಲ್ಲಿ, ಸಲ್ಮಾ ಹಾಗೂ ವೈತಿಯಲಿಂಗಂ, ಮುಸ್ಲಿಂ ಸಂಪ್ರದಾಯದಂತೆ ಮದುವೆ ಆಗಿದ್ದರು. ಭಾರತದ ನಾಗೋರ್ನಲ್ಲಿ ಧಾರ್ಮಿಕ ಮುಖಂಡರು ಈ ಮದುವೆಯನ್ನು ನೋಂದಾಯಿಸಿದ್ದರು. ಸಲ್ಮಾ ಜೊತೆ ಸಿಂಗಾಪುರಕ್ಕೆ ವಾಪಸ್ ಬಂದ ಮುತ್ತುಕುಮಾರ್, ಮೊದಲ ಪತ್ನಿ ಜೊತೆಯೇ ವಾಸ ಮಾಡ್ತಿದ್ದ. ಆಗಾಗ ಸಲ್ಮಾ ಭೇಟಿಗೆ ಹೋಗ್ತಿದ್ದ. ಸೆಪ್ಟೆಂಬರ್ 14, 2023 ರಂದು, ಸಲ್ಮಾ ಮಗುವಿಗೆ ಜನ್ಮ ನೀಡಿದ್ದಳು. ಮುತ್ತುಕುಮಾರ್ ಮಗುವಿನ ತಂದೆ ಎಂದು ದಾಖಲೆಯಲ್ಲಿ ಹೆಸರಿದೆ.
ಮುತ್ತುಕುಮಾರ್ ಎರಡನೇ ಪತ್ನಿ ಸಲ್ಮಾ ದಾಖಲಾಗಿದ್ದ ಆಸ್ಪತ್ರೆಯಲ್ಲೇ ಮೊದಲ ಪತ್ನಿ ಕೆಲ್ಸ ಮಾಡ್ತಿದ್ದಳು. ಹೆರಿಗೆ ಕೋಣೆಯಿಂದ ಮುತ್ತುಕುಮಾರ್ ಬರೋದನ್ನು ಮೊದಲ ಪತ್ನಿ ನೋಡಿದ್ದಾಳೆ. ಈ ಬಗ್ಗೆ ಪ್ರಶ್ನೆ ಕೇಳಿದಾಗ ಮುತ್ತುಕುಮಾರ್, ಸಲ್ಮಾ ಮದುವೆ ಆಗಿದ್ದಲ್ಲದೆ ಒಂದು ಮಗು ಇದೆ ಎನ್ನುವ ವಿಷ್ಯವನ್ನು ಹೇಳಿದ್ದಾನೆ.
ಇಬ್ಬರು ಪತ್ನಿಯರಿಗೆ ವಂಚನೆ : ಮುತ್ತುಕುಮಾರ್ ಜೂನ್ 12, 2024ರಲ್ಲಿ ಸಿಂಗಾಪುರದ ಪ್ರಜೆಯ ಸಂಗಾತಿಯಾಗಿ ಶಾಶ್ವತ ನಿವಾಸಿ ಸ್ಥಾನ ನೀಡುವಂತೆ ಅರ್ಜಿ ಸಲ್ಲಿಸಿದ್ದ. ತನಗೆ ಬೇರೆ ಯಾವುದೇ ಮದುವೆ ಆಗಿಲ್ಲ ಎಂದಿದ್ದ. ಆದ್ರೆ ಸಲ್ಮಾ, ಅವನ ಮೊದಲ ಮದುವೆ ಬಗ್ಗೆ ಸಚಿವಾಲಯಕ್ಕೆ ಹೇಳಿದ್ದಳು. ಆ ನಂತ್ರ ಅರ್ಜಿ ತಿರಸ್ಕರಿಸಲ್ಪಟ್ಟಿತ್ತು. ನಂತ್ರ ಅಧಿಕಾರಿಗಳು ಇದ್ರ ತನಿಖೆ ಶುರು ಮಾಡಿದ್ದರು. ಈ ವೇಳೆ ಮುತ್ತುಕುಮಾರ್ ಎರಡೂ ಪತ್ನಿಯರಿಗೆ ಮೋಸ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ಮೊದಲ ಹೆಂಡ್ತಿಗೆ ಹೇಳದೆ ಎರಡನೇ ಮದುವೆ ಆಗಿದ್ದಾನೆ. ಸಲ್ಮಾಗೆ ಡಿವೋರ್ಸ್ ಆಸೆ ತೋರಿಸಿ ಮದುವೆ ಆಗಿದ್ದಾನೆ ಎಂದು ಕೋರ್ಟ್ ಹೇಳಿದೆ. ಮುತ್ತುಕುಮಾರ್ ಗೆ ಜೈಲು ಶಿಕ್ಷೆ ವಿಧಿಸಿದೆ.
