ಬೆಂಗಳೂರಿನಲ್ಲಿ ಸರಿಯಾಗಿ ಮನೆ ಕೆಲಸ ಮಾಡುತ್ತಿಲ್ಲವೆಂದು ಬೈದು ಬುದ್ಧಿ ಹೇಳಿದ ಮನೆ ಮಾಲೀಕರ ಸಂಬಂಧಿಕ ಯುವತಿಗೆ ಮನೆ ಕೆಲಸ ಮಾಡುವ ಮಹಿಳೆಯೇ ಮಾರಣಾಂತಿಕ ಹಲ್ಲೆ ಮಾಡಿದ್ದಾಳೆ. ಸಣ್ಣ ಹುಡುಗಿಯಾಗಿ ನನಗೇ ಬೈಯುತ್ತೀಯಾ ಎಂದು ಮಚ್ಚಿನಿಂದ ಹಲ್ಲೆ ಮಾಡಿ ಪರಾರಿ ಆಗಿದ್ದಿ, ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಆ.11): ರಾಜಧಾನಿಯ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಮನೆಯಲ್ಲಿ ಮಲಗಿದ್ದ ಯುವತಿಯ ಮೇಲೆ ಮನೆಕೆಲಸದಾಕೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ.
ಹಲ್ಲೆಗೆ ಒಳಗಾದ ಯುವತಿಯನ್ನು 21 ವರ್ಷದ ಸುಶ್ಮಿತಾ ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಮನೆಕೆಲಸದಾಕೆಯನ್ನು ಲಿಲಿತಾ ಎಂದು ಹೆಸರಿಸಲಾಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ:
ಸರೋಜಮ್ಮ ಎಂಬುವರ ಮನೆಯಲ್ಲಿ ಲಿಲಿತಾ ಎಂಬ ಮಹಿಳೆ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಮನೆಗೆ ಬಂದಿದ್ದ ಸುಶ್ಮಿತಾ ಜೊತೆ ಮನೆಕೆಲಸ ಮಾಡುವ ಮಹಿಳೆ ಲಲಿತಾ ಸಣ್ಣ ವಿಷಯಕ್ಕೆ ಜಗಳ ಮಾಡಿಕೊಂಡಿದ್ದಳು. ಈ ವೇಳೆ ಇಬ್ಬರ ನಡುವೆ ಮಾತು ತಾರಕಕ್ಕೇರಿತ್ತು. ಜಗಳ ತೀವ್ರಗೊಂಡಾಗ, ಸುಶ್ಮಿತಾ ಚೆನ್ನಾಗಿ ಬೈದು ಬುದ್ಧಿ ಹೇಳಿದ್ದಳು. ಸಣ್ಣ ಹುಡುಗಿಯಾಗಿ 'ನೀನು ನನಗೆ ಬುದ್ಧಿ ಹೇಳುತ್ತೀಯಾ?' ಎಂದು ಲಿಲಿತಾ ಹೀಯಾಳಿಸಿದ್ದಳು. ಅಂದಿನ ಜಗಳ ಅಲ್ಲೇ ಮುಗಿದರೂ, ಲಿಲಿತಾ ಮನಸ್ಸಿನಲ್ಲಿ ದ್ವೇಷ ಉಳಿದಿತ್ತು.
ರಾತ್ರಿ ಮಲಗಿದ್ದಾಗ ದಾಳಿ:
ಜಗಳದ ನಂತರ ರಾತ್ರಿ ಮೂರನೇ ಮಹಡಿಯಲ್ಲಿ ಸುಶ್ಮಿತಾ ಮಲಗಿದ್ದರು. ಈ ವೇಳೆ ಬೆಳಗಿನ ಜಾವ ಸುಮಾರು 2 ಗಂಟೆ ಸಮಯದಲ್ಲಿ ಕೋಣೆಗೆ ನುಗ್ಗಿದ ಲಿಲಿತಾ, ಮಚ್ಚಿನಿಂದ ಸುಶ್ಮಿತಾ ಮುಖಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾಳೆ. 'ನಿನ್ನನ್ನು ಕೊಂದು ಮುಗಿಸುತ್ತೇನೆ' ಎಂದು ಬೆದರಿಕೆಯನ್ನೂ ಹಾಕಿದ್ದಾಳೆ. ಹಲ್ಲೆ ಬಳಿಕ ಗಂಭೀರವಾಗಿ ಗಾಯಗೊಂಡ ಸುಶ್ಮಿತಾ ಅಲ್ಲಿಯೇ ಬಿದ್ದಿದ್ದಳು. ಈ ಘಟನೆ ನಡೆದ ನಂತರ, ಲಿಲಿತಾ ತಕ್ಷಣವೇ ಮನೆಯಿಂದ ತಪ್ಪಿಸಿಕೊಂಡು 'ಅರ್ಜೆಂಟ್ ಆಗಿ ಊರಿಗೆ ಹೋಗಬೇಕು' ಎಂದು ಮನೆಯವರಿಗೆ ಹೇಳಿ ಪರಾರಿಯಾಗಿದ್ದಳು. ಬೆಳಗಿನ ಜಾವ ಘಟನೆ ಬೆಳಕಿಗೆ ಬಂದಾಗ, ಮನೆಯವರು ಸುಶ್ಮಿತಾರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರ ಕಾರ್ಯಚರಣೆ:
ಘಟನೆಯ ಮಾಹಿತಿ ತಿಳಿದ ವೈಯಾಲಿಕಾವಲ್ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಪರಾರಿಯಾಗಿದ್ದ ಮನೆಕೆಲಸದಾಕೆ ಲಿಲಿತಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಿಲಿತಾ ವಿರುದ್ಧ 'ಕೊಲೆಯತ್ನ' ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ನಡೆಸುತ್ತಿದ್ದಾರೆ. ಸಣ್ಣ ಜಗಳಕ್ಕೆ ಇಷ್ಟೊಂದು ದೊಡ್ಡ ಘಟನೆ ನಡೆದಿದ್ದು, ಪೊಲೀಸರ ತನಿಖೆಯಿಂದ ಘಟನೆಯ ಇನ್ನಷ್ಟು ವಿವರಗಳು ಹೊರಬೀಳುವ ಸಾಧ್ಯತೆ ಇದೆ.
ಕಾಂಡಿಮೆಂಟ್ ಅಂಗಡಿಗೆ ಕನ್ನ: ಲಕ್ಷಾಂತರ ಮೌಲ್ಯದ ವಸ್ತುಗಳ ಕಳ್ಳತನ
ಮತ್ತೊಂದೆಡೆ ಲಗ್ಗೆರೆ ಪ್ರದೇಶದಲ್ಲಿರುವ 'ಚಂದು ಸಾಗರ್' ಎಂಬ ಕಾಂಡಿಮೆಂಟ್ಸ್ ಅಂಗಡಿಯ ಶೆಟರ್ ಮುರಿದು ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಆಗಸ್ಟ್ 2ರಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಆಟೋದಲ್ಲಿ ಬಂದ ಇಬ್ಬರು ಖದೀಮರು ಈ ಕೃತ್ಯ ಎಸಗಿದ್ದಾರೆ. ಸುಮಾರು 10 ನಿಮಿಷಗಳ ಕಾಲ ಕಳ್ಳತನಕ್ಕೆ ಪೂರ್ವಯೋಜನೆ ಮಾಡಿ, ಅಂಗಡಿಯ ಶೆಟರ್ ಮುರಿದು ಒಳನುಗ್ಗಿ ಕಳ್ಳತನ ಮಾಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.
ಕಳ್ಳತನದ ವಿವರ:
ಕಳ್ಳರು ಅಂಗಡಿಯಿಂದ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು, ನಗದು ಮತ್ತು ಸಿಗರೇಟ್ ಪ್ಯಾಕೆಟ್‌ಗಳನ್ನು ಕದ್ದೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಲಕ್ಷ್ಮೀ ಎಂಬುವವರು ಕಳೆದ 8 ವರ್ಷಗಳಿಂದ ಲಗ್ಗೆರೆಯಲ್ಲಿ ಈ ಕಾಂಡಿಮೆಂಟ್ಸ್ ಅಂಗಡಿಯನ್ನು ನಡೆಸುತ್ತಿದ್ದಾರೆ. ಅಂಗಡಿಗೆ ಕನ್ನ ಹಾಕಿದ ವಿಷಯ ತಿಳಿದ ಕೂಡಲೇ ಲಕ್ಷ್ಮೀ ಅವರು ರಾಜಗೋಪಾಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು, ಇಬ್ಬರು ಕಳ್ಳರನ್ನು ಪತ್ತೆಹಚ್ಚಲು ತೀವ್ರ ಶೋಧ ನಡೆಸುತ್ತಿದ್ದಾರೆ. ಆಟೋದಲ್ಲಿ ಬಂದಿರುವ ಕಳ್ಳರ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ.

