ರಾಣೇಬೆನ್ನೂರಿನಲ್ಲಿ ಪತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಹಾವೇರಿ (ಆ.20): ಪತ್ನಿಯ ಶೀಲ ಶಂಕಿಸಿ ಪತಿರಾಯನೊಬ್ಬ ಕುತ್ತಿಗೆಗೆ ಚಾಕು ಇರಿದು ಕೊಲ್ಲಲು ಯತ್ನಿಸಿದ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಸುವರ್ಣ ಪಾರ್ಕ್‌ನಲ್ಲಿ ಘಟನೆ ನಡೆದಿದೆ.
ದಾವಣಗೆರೆಯ ಶ್ರೀರಾಮನಗರದ ಯೋಗೇಶ್ (28) ಎಂಬಾತ ತನ್ನ 22 ವರ್ಷದ ಪತ್ನಿ ಪದ್ಮಾಳನ್ನು ಮಾರಣಾಂತಿಕವಾಗಿ ಚಾಕುವಿನಿಂದ ಇರಿದಿರುವ ಆರೋಪಿ.
ಘಟನೆಯ ವಿವರಗಳ ಪ್ರಕಾರ, ಯೋಗೇಶ್ ಮತ್ತು ಪದ್ಮಾ ಸುವರ್ಣ ಪಾರ್ಕ್‌ನಲ್ಲಿ ಮಾತನಾಡುತ್ತಿದ್ದಾಗ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದಂತೆ ಜಗಳ ತಾರಕಕ್ಕೇರಿದಾಗ, ಕೋಪಗೊಂಡ ಯೋಗೇಶ್ ತನ್ನ ಬಳಿಯಿದ್ದ ಚಾಕುವಿನಿಂದ ಪದ್ಮಾಳ ಕುತ್ತಿಗೆಗೆ ಇರಿದಿದ್ದಾನೆ. ಏಕಾಏಕಿ ನಡೆದ ಭೀಕರ ಕೃತ್ಯದಿಂದ ರಕ್ತಸ್ರಾವವಾದ ಪದ್ಮಾ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ಘಟನೆಯನ್ನು ಗಮನಿಸಿ ತಕ್ಷಣ ರಾಣೇಬೆನ್ನೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಗಾಯಾಳುವನ್ನು ದಾಖಲಿಸಿದ್ದಾರೆ.
ಸದ್ಯ ಪದ್ಮಾ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕುರಿತು ಮಾಹಿತಿ ಪಡೆದ ಹಲಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯೋಗೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಕುಟುಂಬದವರಿಗೆ ಆಘಾತವನ್ನುಂಟು ಮಾಡಿದೆ.
