ಕೊಲೆ ಪ್ರಕರಣದಲ್ಲಿ ತಮ್ಮ ನೆಚ್ಚಿನ ನಟನಿಗೆ ಮತ್ತೆ ಸಂಕಷ್ಟ ಎದುರಾದ ಬೆನ್ನಲ್ಲೇ ದರ್ಶನ್ ನಿವಾಸ, ಪೊಲೀಸ್ ಠಾಣೆ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಬಳಿ ಅವರ ಅಭಿಮಾನಿಗಳು ಜಮಾಯಿಸಿ ನೈತಿಕ ಬೆಂಬಲಕ್ಕೆ ನಿಂತರು.

ಬೆಂಗಳೂರು : ಕೊಲೆ ಪ್ರಕರಣದಲ್ಲಿ ತಮ್ಮ ನೆಚ್ಚಿನ ನಟನಿಗೆ ಮತ್ತೆ ಸಂಕಷ್ಟ ಎದುರಾದ ಬೆನ್ನಲ್ಲೇ ದರ್ಶನ್ ನಿವಾಸ, ಪೊಲೀಸ್ ಠಾಣೆ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಬಳಿ ಅವರ ಅಭಿಮಾನಿಗಳು ಜಮಾಯಿಸಿ ನೈತಿಕ ಬೆಂಬಲಕ್ಕೆ ನಿಂತರು.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಸಂಗತಿ ತಿಳಿದ ಕೂಡಲೇ ದರ್ಶನ್‌ ಅವರ ನೂರಾರು ಅಭಿಮಾನಿಗಳು, ರಾಜರಾಜೇಶ್ವರಿನಗರದಲ್ಲಿರುವ ಮನೆ, ಹೊಸಕೆರೆಹಳ್ಳಿಯಲ್ಲಿರುವ ಅವರ ಪತ್ನಿ ಮನೆ, ದರ್ಶನ್ ಅವರನ್ನು ಬಂಧಿಸಿ ಕರೆತಂದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ, ಎಸಿಎಂಎಂ ನ್ಯಾಯಾಲಯ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಬಳಿ ಸೇರಿದರು.

ಈ ವೇಳೆ ಕೆಲವರು ‘ಡಿ ಬಾಸ್, ಡಿ ಬಾಸ್’ ಎಂದು ಕೂಗಿದರು. ಇನ್ನು ಕೆಲವರು ನೆಚ್ಚಿನ ನಟನ ಸಂಕಷ್ಟಕ್ಕೆ ಕಣ್ಣೀರು ಸುರಿಸಿದರು. ಅಲ್ಲದೆ, ನಟಿ ರಮ್ಯಾ ವಿರುದ್ಧವೂ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಮುಂಜಾಗ್ರತಾ ಕ್ರಮವಾಗಿ ದರ್ಶನ್ ಮನೆ ಸೇರಿ ಇತೆರೆಡೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಠಾಣೆಗೆ ಬಂದ ದಿನಕರ್:

ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ರನ್ನು ಭೇಟಿಯಾಗಲು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಅವರ ಸೋದರ ದಿನಕರ್ ತೂಗುದೀಪ್ ತೆರಳಿದ್ದರು. ಆದರೆ ಬಂಧನ ಪ್ರಕ್ರಿಯೆ ನಡೆದ ಕಾರಣ ದರ್ಶನ್ ಭೇಟಿಗೆ ದಿನಕರ್ ಅವರಿಗೆ ಪೊಲೀಸರು ಅನುಮತಿ ಕೊಡಲಿಲ್ಲ ಎಂದು ತಿಳಿದು ಬಂದಿದೆ. ಈ ವೇಳೆ ದಿನಕರ್ ಜತೆ ವಕೀಲರು ಸಹ ಇದ್ದರು. ಕೆಲ ಹೊತ್ತು ಠಾಣೆಯಲ್ಲಿದ್ದು, ಬಳಿಕ ತೀವ್ರ ದುಃಖದ ಮುಖಭಾವ ಹೊತ್ತು ದಿನಕರ್ ಠಾಣೆಯಿಂದ ಮರಳಿದರು. ಕಳೆದ ಬಾರಿ ಜೈಲಿನಲ್ಲಿದ್ದಾಗ ಸೋದರನ ಬೆನ್ನಿಗೆ ನಿಂತಿದ್ದ ದಿನಕರ್‌, ಕಾನೂನು ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

ಫಾರಂಹೌಸ್ ಬಳಿ ನೀರವ ಮೌನ

ಮೈಸೂರು: ನಟ ದರ್ಶನ್ ಹಾಗೂ ಸಹಚರರ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು ಮತ್ತೆ ಜೈಲು ಪಾಲಾಗಿದ್ದಾರೆ. ಹೀಗಾಗಿ, ನಗರದಲ್ಲಿರುವ ದರ್ಶನ್‌ ಮನೆ, ಫಾರಂಹೌಸ್ ಬಳಿ ನೀರವ ಮೌನ ನೆಲೆಸಿದೆ. ಮೈಸೂರಿನ‌ ಸಿದ್ಧಾರ್ಥ ಬಡಾವಣೆಯಲ್ಲಿರುವ ದರ್ಶನ್ ನಿವಾಸದ ಬಳಿ ಗುರುವಾರ ಮಧ್ಯಾಹ್ನ ಪೊಲೀಸರು ಗಸ್ತು ಹಾಕುತ್ತಿದ್ದರು. ಈ ಮನೆಯಲ್ಲಿ ದರ್ಶನ್ ತಾಯಿ ಮೀನಾ ತೂಗದೀಪ್ ಉಳಿದುಕೊಂಡಿದ್ದಾರೆ. ಮನೆಯ ಒಳಭಾಗದಿಂದ ಗೇಟ್‌ ಗೆ ಬೀಗ ಹಾಕಲಾಗಿತ್ತು.

ಹಾಗೆಯೇ, ಮೈಸೂರು- ಟಿ.ನರಸೀಪುರ ರಸ್ತೆಯಲ್ಲಿ ಕೆಂಪಯ್ಯನಹುಂಡಿಯಲ್ಲಿರುವ ನಟ ದರ್ಶನ್ ನೆಚ್ಚಿನ ತೋಟದಲ್ಲಿ ನೀರವ ಮೌನ ನೆಲೆಸಿತ್ತು. ಮೈಸೂರಿಗೆ ಬಂದಾಗಲೆಲ್ಲಾ ವಿನೀಶ್ ದರ್ಶನ್ ಫಾರಂಹೌಸ್ ನಲ್ಲಿ ದರ್ಶನ್ ಉಳಿದುಕೊಳ್ಳುತ್ತಿದ್ದರು. ಈ ಫಾರಂಹೌಸ್ ನಲ್ಲಿ ಕುದುರೆ, ಹಸು, ಆಡು, ಕುರಿ, ಕೋಳಿ ಸೇರಿದಂತೆ ಅನೇಕ ಸಾಕುಪ್ರಾಣಿಗಳನ್ನು ಸಾಕಿದ್ದಾರೆ. ಫಾರಂಹೌಸ್‌ ಮುಂಭಾಗದಲ್ಲಿ ಕುದುರೆ ಮಾರಾಟಕ್ಕಿದೆ ಎಂದು ಬೋರ್ಡ್ ಸಹ ಹಾಕಿದ್ದಾರೆ.

ಈ ಮಧ್ಯೆ, ದರ್ಶನ್ ಬುಧವಾರ ರಾತ್ರಿ ಮೈಸೂರಿನ ತಮ್ಮ ಫಾರಂಹೌಸ್‌ ಗೆ ಬಂದಿದ್ದರು. ಗುರುವಾರ ಬೆಳಗ್ಗೆ ತಮಿಳುನಾಡಿಗೆ ದೇವಸ್ಥಾನ ದರ್ಶನಕ್ಕೆ ತೆರಳಿದ್ದರು. ಚಾಮರಾಜನಗರ ಜಿಲ್ಲೆ ಮೂಲಕ ತಮಿಳುನಾಡಿನ ಬನ್ನಾರಿಯಮ್ಮ ದೇವಸ್ಥಾನಕ್ಕೆ ತೆರಳಿದ್ದ ದರ್ಶನ್, ದೇವರ ದರ್ಶನ ಬಳಿಕ ಸತ್ಯಮಂಗಲ ಮೂಲಕ ಅಂದಿಯೂರಿಗೆ ತೆರಳಿದ್ದರು.

ತಮಿಳುನಾಡಿನ ಈರೋಡ್ ಜಿಲ್ಲೆಯ ಅಂದಿಯೂರಿನಲ್ಲಿ ಆ.13 ರಿಂದ 17 ರವರೆಗೆ ಗುರುನಾಥಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಕುದುರೆ ಮೇಳ ಸಹ ನಡೆಯುತ್ತದೆ. ದೇವರ ದರ್ಶನದೊಂದಿಗೆ ಕುದುರೆ ಮೇಳದಲ್ಲಿ ಕುದುರೆಗಳನ್ನು ನೋಡಲು ಅಥವಾ ಖರೀದಿಸಲು ಹೋಗಿದ್ದರು ಎನ್ನಲಾಗಿದೆ. ಸುಪ್ರಿಂಕೋರ್ಟ್‌ ನಲ್ಲಿ ಜಾಮೀನು ರದ್ದು ವಿಚಾರ ತಿಳಿದು, ಅಂದಿಯೂರಿನಿಂದ ಬೆಂಗಳೂರಿಗೆ ತೆರಳಿದ್ದರು.