ಬೆಂಗಳೂರಿನ ಶ್ರೀನಿವಾಸನಗರದಲ್ಲಿ ಕಸ ಹಾಕದಂತೆ ಹೇಳಿದ ಪೌರಕಾರ್ಮಿಕ ನಾಗೇಂದ್ರ ಅವರ ಮೇಲೆ ದಂಪತಿಯೊಬ್ಬರು ಹಲ್ಲೆ ನಡೆಸಿದ್ದಾರೆ. ತಾನು ವಿಧಾನಸೌಧದ ಅಧ್ಯಕ್ಷನೆಂದು ಹೇಳಿ ವ್ಯಕ್ತಿಯು ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದು, ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .
ಬೆಂಗಳೂರು (ಅ.10): ಕಸ ಸ್ವಚ್ಛಗೊಳಿಸುವ ಕೆಲಸದಲ್ಲಿದ್ದ ಪೌರಕಾರ್ಮಿಕನ ಮೇಲೆ ದಂಪತಿಯೊಬ್ಬರು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಶ್ರೀನಿವಾಸನಗರದಲ್ಲಿ ನಡೆದಿದೆ.
ನಾಗೇಂದ್ರ, ಹಲ್ಲೆಗೊಳಗಾದ ಪೌರಕಾರ್ಮಿಕ. ಹಲ್ಲೆ ನಡೆದ ಬಗ್ಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
'ನಾನು ಯಾರು ಗೊತ್ತಾ?' ಎಂದು ಹಲ್ಲೆ:
ನಾಗೇಂದ್ರ ಶ್ರೀನಿವಾಸನಗರದಲ್ಲಿ ಪೌರಕಾರ್ಮಿಕನಾಗಿದ್ದಾನೆ. ಎಂದಿನಂತೆ ಕಸ ಸ್ವಚ್ಛಗೊಳಿಸುತ್ತಿದ್ದ ವೇಳೆ, ಆಕ್ಟಿವಾ ಹೋಂಡಾದಲ್ಲಿ ಬಂದ ದಂಪತಿಯೊಬ್ಬರು ಸ್ವಚ್ಛಗೊಳಿಸಿದ ಜಾಗದಲ್ಲಿ ಕಸ ಬಿಸಾಡಿದ್ದಾರೆ. ಇದನ್ನು ಗಮನಿಸಿದ ನಾಗೇಂದ್ರ, 'ನಿಮ್ಮ ಮನೆ ಮುಂದೆಯೇ ಕಸದ ಆಟೋ ಬರುತ್ತದೆ, ಅದರಲ್ಲಿ ಕಸ ಬಿಸಾಡಿ' ಎಂದು ಸಲಹೆ ನೀಡಿದ್ದಾರೆ. ಆದರೆ, ಇದಕ್ಕೆ ಕೋಪಗೊಂಡ ವ್ಯಕ್ತಿ, 'ನೀನು ಕೇವಲ ಕಸ ಗುಡಿಸುವವನು, ನನಗೆ ಆರ್ಡರ್ ಮಾಡಬೇಡ. ನಾನು ವಿಧಾನಸೌಧದಲ್ಲಿ ಅಧ್ಯಕ್ಷನಾಗಿದ್ದೇನೆ, ನನ್ನ ಬಗ್ಗೆ ಗೊತ್ತಿಲ್ಲವೇ?' ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅದಕ್ಕೆ ನಾಗೇಂದ್ರ, 'ನೀವು ಯಾರೇ ಆಗಿರಲಿ, ಇಲ್ಲಿ ಕಸ ಬಿಸಾಡಬೇಡಿ' ಎಂದು ತಾಕೀತು ಮಾಡಿದ್ದಾನೆ. ಅಷ್ಟಕ್ಕೇ ಕೋಪಗೊಂಡ ವ್ಯಕ್ತಿ ಹೆಲ್ಮೆಟ್‌ನಿಂದ ನಾಗೇಂದ್ರನ ಮೇಲೆ ಮೂರು ಬಾರಿ ಹಲ್ಲೆ ನಡೆಸಿದ್ದಾರೆ. ಜೊತೆಗೆ ಆತನ ಪತ್ನಿಯೂ ಹಲ್ಲೆಯಲ್ಲಿ ಭಾಗಿಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಿನ್ನ ಕೆಲಸದಿಂದ ತೆಗೆದುಹಾಕುತ್ತೇನೆ ಎಂದ ಆಸಾಮಿ:
ಇನ್ಮೇಲೆ ಇಲ್ಲಿ ಕಸ ಬಿಸಾಡಬೇಡ ಎಂದರೆ, ನಾನು ನಿನ್ನನ್ನೇ ಕೆಲಸದಿಂದ ತೆಗೆದುಹಾಕುತ್ತೇನೆ ಎಂದು ಆರೋಪಿ ಬೆದರಿಕೆಯೂ ಹಾಕಿದ್ದಾನೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ, ಆರೋಪಿಗಳಾದ ದಂಪತಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆಯಿಂದ ಪೌರಕಾರ್ಮಿಕರ ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿದೆ, ಕಸ ವಿಲೇವಾರಿ ಕುರಿತಾದ ಜನಜಾಗೃತಿಯ ಅಗತ್ಯವನ್ನೂ ತೋರಿಸಿದೆ. ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ 'ಕಸ ಎಸೆದರೆ ಫೈನ್ ಹಾಕಿ ಅಂತಾರೆ. ಈತ ಕಸ ಎಸೆದು ತಾನು ಅಧ್ಯಕ್ಷನಿದ್ದೇನೆ, ನನಗೆ ಕಸ ಎಸೆಯಬೇಡ ಎಂದರೆ ನಿನ್ನನ್ನೇ ತೆಗೆಸಿಹಾಕುತ್ತೇನೆ ಅಂತಾನೆ!
