ವರಮಹಾಲಕ್ಷ್ಮೀ ಹಬ್ಬದ ಪೂಜೆ ಮಾಡುವ ಹೆಂಡತಿಗೆ ಗಂಡು ಮಗು ಬೇಕೆಂದು ಕೊಂದೇಬಿಟ್ಟ ಗಂಡ!
ವರಮಹಾಲಕ್ಷ್ಮಿ ಹಬ್ಬದ ಸಡಗರದ ನಡುವೆ ಗೃಹಿಣಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗಂಡು ಮಗುವಿನ ದುರಾಸೆಗೆ ಪತಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ (ಆ.08): ವರಮಹಾಲಕ್ಷ್ಮಿ ಹಬ್ಬದ ಸಡಗರ ಮನೆಮಾಡಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಹಬ್ಬ ಮಾಡಬೇಕಿದ್ದ ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹ*ತ್ಯೆಯೋ ಎಂಬ ಸಂಶಯಕ್ಕೆ ಕಾರಣವಾಗಿದೆ. ಗಂಡು ಮಗುವಿನ ದುರಾಸೆಗೆ ಪತಿ ಕಿರುಕುಳ ನೀಡಿ ಕೊಲೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತೆ ರೇಣುಕಾ (32), ಭೀಮೇಶ್ವರ ಕಾಲೋನಿಯ ನಿವಾಸಿ. 17 ವರ್ಷಗಳ ಹಿಂದೆ ಶಿವನಂಜಪ್ಪ (40) ಎಂಬುವವರ ಜೊತೆ ಇವರ ವಿವಾಹವಾಗಿತ್ತು. ಈ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೆ, ಗಂಡು ಮಗುವಿನ ಆಸೆಯಿಂದ ಶಿವನಂಜಪ್ಪ ರೇಣುಕಾ ಅವರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ (ವರಮಹಾಲಕ್ಷ್ಮಿ ಹಬ್ಬದ ಹಿಂದಿನ ದಿನ) ಇದೇ ವಿಚಾರಕ್ಕೆ ದಂಪತಿ ನಡುವೆ ತೀವ್ರ ಗಲಾಟೆ ನಡೆದಿದೆ. ಈ ವೇಳೆ ಶಿವನಂಜಪ್ಪ ರೇಣುಕಾ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಹಲ್ಲೆ ನಂತರ ರೇಣುಕಾ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಆದರೆ ಗಂಡನೇ ಹೊಡೆದು ನೇಣು ಹಾಕಿ ಕೊಲೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ.
ಈ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೃತ ರೇಣುಕಾ ಅವರ ಪತಿ ಶಿವನಂಜಪ್ಪನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಗಂಡು ಮಗುವಿನ ಆಸೆಯಿಂದ ಸೃಷ್ಟಿಯಾದ ಈ ದುರಂತವು ಸಮಾಜದ ಕರಾಳ ಮುಖವನ್ನು ಮತ್ತೊಮ್ಮೆ ತೋರಿಸಿದೆ. ಹಬ್ಬದ ದಿನವೇ ಸಂಭವಿಸಿದ ಈ ಘಟನೆ ಇಡೀ ಪ್ರದೇಶದಲ್ಲಿ ದುಃಖ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.