Low interest loan scam :ಬೆಂಗಳೂರಿನಲ್ಲಿ 'ಸುಬ್ಬಲಕ್ಷ್ಮಿ ಚಿಟ್ಸ್' ಕಂಪನಿ ಮೂಲಕ ಕಡಿಮೆ ಬಡ್ಡಿಗೆ ಸಾಲ ನೀಡುವುದಾಗಿ ನಂಬಿಸಿ, ಮುಂಗಡ ಇಎಂಐ ಪಡೆದು ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ನಯನಾ ಎಂಬ ಮಹಿಳೆಯನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಸಹಚರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬೆಂಗಳೂರು(ಅ.16): ಕಡಿಮೆ ಬಡ್ಡಿಗೆ ಲೋನ್‌ ಕೊಡಿಸ್ತೇನೆ ಎಂದು ನಂಬಿಸಿ ಅಮಾಯಕ ಜನರಿಗೆ ಲಕ್ಷ ಲಕ್ಷ ವಂಚಿಸಿದ ಖತರ್ನಾಕ್ ವಂಚಕಿ ನಯನಾಳನ್ನ ಬಸವೇಶ್ವರನಗರ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ದಬ್ಬಿದ್ದಾರೆ.

Add Asianetnews Kannada as a Preferred SourcegooglePreferred

'ಸುಬ್ಬಲಕ್ಷ್ಮಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್' ಎಂಬ ಕಂಪನಿಯ ಮೂಲಕ ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ಜನರನ್ನು ಮೋಸ ಮಾಡಿದ್ದ ವಂಚಕಿ ನಯನಾ. ಈ ವಂಚನೆಯಲ್ಲಿ ಸುಮಾರು 12 ಲಕ್ಷ 22 ಸಾವಿರ ರೂಪಾಯಿಗಳಷ್ಟು ಹಣ ಪಡೆದು ಜನರಿಗೆ ನಾಮ ಹಾಕಿದ್ದಳು.

ನಯನಾ ವಂಚಿಸುತ್ತಿದ್ದಿದ್ದು ಹೇಗೆ?

1% ಬಡ್ಡಿಗೆ ಸಾಲ ಕೊಡಿಸುವುದಾಗಿ ಆಸೆ ತೋರಿಸುತ್ತಿದ್ದ ವಂಚಕಿ ನಯನಾ ಮತ್ತು ಆಕೆಯ ಸಹಚರರು. ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ ಎಂದು ಅಮಾಯಕರನ್ನ ನಂಬಿಸುತ್ತಿದ್ದ ಗ್ಯಾಂಗ್ ಬಳಿಕ 10 ಲಕ್ಷ ರೂಪಾಯಿ ಸಾಲ ಬೇಕೆಂದರೆ ಮುಂಗಡವಾಗಿ 3 ತಿಂಗಳ ಇ.ಎಂ.ಐ (Equated Monthly Installment) ಕಟ್ಟಬೇಕೆಂದು ಹೇಳುತ್ತಿದ್ದರು. ಹಣದ ಅಗತ್ಯವಿರುವವರು ಹಿಂದೆಮುಂದೆ ಯೋಚಿಸದೇ ಇಎಂಐ ಕಟ್ಟುತ್ತಿದ್ದರು. ಇದೇ ರೀತಿ ಸುಮಾರು 15 ಜನರಿಂದ ಒಟ್ಟು 30 ಸಾವಿರ ರೂಪಾಯಿಗಳನ್ನು ಪಡೆದು ನಾಮಕ ಹಾಕಿದ್ದ ಗ್ಯಾಂಗ್. ಈ ಹಣ ಪಡೆದ ನಂತರ ಸಾಲ ನೀಡದೆ ವಂಚಿಸುತ್ತಿದ್ದರು.

ವಂಚನೆ ಪ್ರಕರಣ ಬಯಲಾಗಿದ್ದು ಹೇಗೆ?

ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈ ವಂಚನೆಯ ಬಗ್ಗೆ ದೂರು ದಾಖಲಾಗಿತ್ತು. ಬಸವೇಶ್ವರನಗರ ಪೊಲೀಸ್ ತಂಡ ತನಿಖೆಗಿಳಿದಾಗ, ನಯನಾ ವಿರುದ್ಧ ಈ ಹಿಂದೆ ಬಸವೇಶ್ವರನಗರ ಮತ್ತು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ವಂಚನೆ ಕೇಸ್‌ಗಳಿದ್ದವು ಎಂದು ಬಯಲಾಯಿತು. ವಿವಿಧ ಸ್ಥಳಗಳಲ್ಲಿ ಇಂತಹ ಮೋಸಗಳನ್ನು ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ನಯನಾಳನ್ನ ಬಂಧಿಸಲಾಗಿದ್ದು ಪೊಲೀಸರು ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.