ಬೆಂಗಳೂರಿನ ಕೊಡಿಗೇಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಬರಹ ಪತ್ತೆಯಾಗಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಮೂವರು ಅಪ್ರಾಪ್ತ ಬಾಲಕಿಯರು ಈ ಬರಹ ಬರೆದಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು (ಜು.30): ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಮತ್ತೊಂದು ಬಾಂಬ್ ಬ್ಲಾಸ್ಟ್ ಬೆದರಿಕೆ ಪ್ರಕರಣ ಬೆಳಕಿಗೆ ಬಂದಿದೆ. ಕೊಡಿಗೇಹಳ್ಳಿಯ ಅಲ್ಫೈನ್ ಪಿರಮಿಡ್ ಅಪಾರ್ಟ್ಮೆಂಟ್‌ನಲ್ಲಿ ಗೋಡೆಯ ಮೇಲೆ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿರುವ ದುಷ್ಕರ್ಮಿಯ ಬರಹ ಪತ್ತೆಯಾಗಿದ್ದು, ನಿವಾಸಿಗಳು ಆತಂಕಗೊಂಡಿದ್ದಾರೆ.

ಸುಮಾರು 200 ರಿಂದ 300 ಮನೆಗಳನ್ನೊಳಗೊಂಡಿರುವ ಈ ಅಪಾರ್ಟ್ಮೆಂಟ್‌ನಲ್ಲಿ, ಗೋಡೆಯ ಮೇಲಿನ ಬರಹದಲ್ಲಿ 'I am going to blast India from Pakistan' ನಾನು ಪಾಕಿಸ್ತಾನದಿಂದಲೇ ಇಡೀ ಭಾರತವನ್ನು ಬ್ಲಾಸ್ಟ್ ಮಾಡುತ್ತೇನೆ' ಎಂದು ಬರೆದು ಬೆದರಿಕೆ ಹಾಕಿರುವುದು ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ. ಇನ್ನು ಅಪಾರ್ಟ್‌ಮೆಂಟ್ ಗೋಡೆಯ ಮೇಲಿನ ಬೆದರಿಕೆ ಬರಹ ಕಂಡ ನಿವಾಸಿಗಳು ತಕ್ಷಣವೇ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ತಂಡಗಳ ಸಹಾಯದಿಂದ ಪರಿಶೀಲನೆ ಕಾರ್ಯ ಆರಂಭಿಸಿದ್ದಾರೆ.

ನಿವಾಸಿಗಳಲ್ಲಿ ಆತಂಕ, ಪೊಲೀಸರ ಪರಿಶೀಲನೆ ಮುಂದುವರಿಕೆ: ಅಪಾರ್ಟ್ಮೆಂಟ್‌ನ ಗೋಡೆಯ ಮೇಲಿನ ಈ ಬರಹ ಕಂಡ ಕೆಲ ಕ್ಷಣಗಳಲ್ಲೇ ನಿವಾಸಿಗಳು ಭೀತಿಗೊಳಗಾದರು. ತಕ್ಷಣವೇ ಮಕ್ಕಳನ್ನು ಹಾಗೂ ವೃದ್ಧರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಕಾರ್ಯ ನಡೆಯಿತು. ಪೊಲೀಸರು ಅಪಾರ್ಟ್ಮೆಂಟ್‌ನ ಎಲ್ಲಾ ಬ್ಲಾಕ್‌ಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಪೂರ್ಣ ಪರಿಶೀಲನೆ ನಡೆಸುತ್ತಿದ್ದಾರೆ. ಬಾಂಬ್ ಸ್ಕ್ವಾಡ್ ಯಾವುದೇ ಸಂಶಯಾಸ್ಪದ ವಸ್ತು ಪತ್ತೆಯಾಗಿದೆಯೇ ಎಂದು ಪರಿಶೀಲಿಸುತ್ತಿದ್ದು, ನಿವಾಸಿಗಳಿಗೆ ಶಾಂತವಾಗಿರಲು ಸೂಚಿಸಲಾಗಿದೆ.

ಕೊಡಿಗೇಹಳ್ಳಿ ಪೊಲೀಸರು:

ಪ್ರಸ್ತುತ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಈ ಬರಹ ಯಾರಿಂದ ಬರೆದಿದ್ದಾರೆ ಎನ್ನುವುದನ್ನು ಸಿಸಿಟಿವಿ ಫುಟೇಜ್ ಆಧರಿಸಿ ಪತ್ತೆಹಚ್ಚುವ ಕಾರ್ಯ ನಡೆಸಿದ್ದಾರೆ. ಇದಾದ ನಂತರ ಮೂವರು ಅಪ್ರಾಪ್ತ ಬಾಲಕಿಯರು ಗೋಡೆಯ ಮೇಲೆ ತಮಾಷೆಗಾಗಿ ಈ ರೀತಿಯ ಭರಹವನ್ನು ಬರೆದಿದ್ದಾರೆ ಎಂಬುದು ತಿಳಿದುಬಂದಿದೆ. ಇದಾದ ನಂತರ ಅಪಾರ್ಟ್‌ಮೆಂಟ್ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ಈ ಘಟನೆ ಸಂಬಂಧ ಕೋಡಿಗೇಹಳ್ಳಿ ಠಾಣೆ ಪೊಲೀಸರು ಎನ್ ಸಿ ಆರ್ ದಾಖಲಿಸಿಕೊಂಡು ಮಕ್ಕಳನ್ನು ವಶಕ್ಕೆ ಪಡದು ತನಿಖೆ ಮಾಡುತ್ತಿದ್ದಾರೆ. ಸಿಸಿಟಿವಿ ಪರಿಶೀಲನೆ ಮಾಡಿದ ವೇಳೆ 12ರಿಂದ 13 ವರ್ಷದ ಮೂವರು ಬಾಲಕಿಯರು ಸೇರಿಕೊಂಡು ಈ ರೀತಿಯ ಬರಹವನ್ನು ಬರೆದಿರುವುದು ಪತ್ತೆಯಾಗಿದೆ. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮಾಡುತ್ತಿದ್ದು, ಸ್ವ ಇಚ್ಛೆಯಿಂದ ಬರೆದಿದ್ದಾರಾ? ಅಥವಾ ಬೇರೆ ಯಾರಾದರೂ ಆಮಿಷ ಅಥವಾ ಬೆದರಿಕೆ ಹಾಕಿ ಇದನ್ನು ಬರೆಸಿದ್ದಾರಾ? ಎಂಬುದು ತಿಳಿಯಬೇಕಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದು, ಇನ್ನಷ್ಟೇ ಸತ್ಯಾಂಶ ಹೊರಬರಬೇಕಿದೆ.