Bengaluru Husband Booked for Recording and Sharing Wifes Private Videos ಬೆಂಗಳೂರಿನಲ್ಲಿ ಪತಿಯೊಬ್ಬ ತನ್ನ ಖಾಸಗಿ ಕ್ಷಣಗಳನ್ನು ಬೆಡ್‌ರೂಂನಲ್ಲಿ ರಹಸ್ಯವಾಗಿ ಕ್ಯಾಮೆರಾ ಮೂಲಕ ರೆಕಾರ್ಡ್ ಮಾಡಿ, ಸ್ನೇಹಿತರಿಗೆ ಹಂಚಿಕೊಂಡಿದ್ದಾನೆ ಎಂದು ಪತ್ನಿ ದೂರು ನೀಡಿದ್ದಾರೆ. 

ಬೆಂಗಳೂರು (ಅ.3): ಪತಿ ತನ್ನ ಖಾಸಗಿ ಕ್ಷಣಗಳನ್ನು ಬೆಡ್‌ರೂಂನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ ರೆಕಾರ್ಡ್ ಮಾಡಿ, ಆ ವಿಡಿಯೋಗಳನ್ನು ಸ್ನೇಹಿತರಿಗೆ ಹಂಚಿಕೊಂಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮಹಿಳೆಯ ಪತಿ ಸೈಯದ್ ಇನಾಮುಲ್ ಹಕ್ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಖಾಸಗಿ ವಿಡಿಯೋ ರೆಕಾರ್ಡ್ ಮತ್ತು ಬೆದರಿಕೆ ಆರೋಪ

ಪತ್ನಿ ನೀಡಿರುವ ದೂರಿನ ಪ್ರಕಾರ, ಪತಿ ಸೈಯದ್ ಇನಾಮುಲ್ ಹಕ್ ಅವರು ತಮ್ಮ ಖಾಸಗಿ ಕ್ಷಣಗಳನ್ನು ಯಾರಿಗೂ ತಿಳಿಯದಂತೆ ಬೆಡ್‌ರೂಂನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ ವಿಡಿಯೋ ಮಾಡಿದ್ದಾರೆ. ಈ ಖಾಸಗಿ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ತನ್ನ ಸ್ನೇಹಿತರಿಗೆ ಹಂಚಿಕೊಂಡಿದ್ದಾರೆ ಎಂದು ಮಹಿಳೆ ಗಂಭೀರವಾಗಿ ಆರೋಪಿಸಿದ್ದಾರೆ. ಅಲ್ಲದೆ, ಈ ವಿಡಿಯೋಗಳನ್ನು ಸಾರ್ವಜನಿಕವಾಗಿ ಜಾಲತಾಣಗಳಲ್ಲಿ ಶೇರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿಡಿಯೋ ರೆಕಾರ್ಡಿಂಗ್ ಮತ್ತು ಹಂಚಿಕೆಯ ಆರೋಪಗಳ ಜೊತೆಗೆ, ಈತ ಈ ಮೊದಲೇ ಮದುವೆಯಾಗಿದ್ದರೂ ಆ ವಿಷಯವನ್ನು ತನಗೆ ತಿಳಿಸದೇ ಎರಡನೇ ಮದುವೆಯಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ, ದೈಹಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾನೆ ಎಂದೂ ಆರೋಪಿಸಿದ್ದಾರೆ. ನೊಂದ ಮಹಿಳೆಯ ದೂರಿನ ಮೇರೆಗೆ ಪುಟ್ಟೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸಂತ್ರಸ್ಥೆ ನೀಡಿರುವ ದೂರಿನ ವಿವರ

ಸಂತ್ರಸ್ತ ಮಹಿಳೆ ಮತ್ತು ಆರೋಪಿ ಸೈಯದ್ ಇನಾಮುಲ್ ಹಕ್ ಅವರಿಗೆ 2024 ಸೆಪ್ಟೆಂಬರ್ 1 ರಂದು ನಿಶ್ಚಿತಾರ್ಥವಾಗಿ 2024 ಡಿಸೆಂಬರ್ 15 ರಂದು ವಿವಾಹ ನೇರವೇರಿತ್ತು. ವರದಕ್ಷಿಣೆಯಾಗಿ ಬೈಕ್ ಮತ್ತು 340 ಗ್ರಾಂ ಚಿನ್ನಾಭರಣ ನೀಡಲಾಗಿತ್ತು. ಮದುವೆಯಾದ ಎರಡೇ ದಿನಗಳಲ್ಲಿ (2024 ಡಿಸೆಂಬರ್ 17) ಆರೋಪಿ ಸೈಯದ್ ತನ್ನ ಪತ್ನಿಗೆ ತಾನು ಈಗಾಗಲೇ ಮದುವೆಯಾಗಿದ್ದೇನೆ ಮತ್ತು ಅವಳು ತನ್ನ ಎರಡನೇ ಹೆಂಡತಿ ಎಂದು ತಿಳಿಸಿದ್ದಾನೆ. ಮದುವೆ ಸಮಯದಲ್ಲಿ ಆರೋಪಿ ಗಂಡನ ದೊಡ್ಡ ತಂಗಿಯ ಗಂಡ ಅಮೀನ್ ಬೇಗ್ ಜೊತೆ ಜಗಳವಾಗಿತ್ತು. ಕ್ಯಾಟರಿಂಗ್ ವಿಳಂಬ ಆಗಿರುವ ವಿಚಾರದಲ್ಲಿ ಜಗಳ ಮಾಡಿದ್ದರು. ಅಷ್ಟೇ ಅಲ್ಲದೆ, ತನಗೆ 19 ಮಂದಿ ಮಹಿಳೆಯರೊಂದಿಗೆ ಅನೈತಿಕ ಸಂಬಂಧವಿದೆ ಎಂದು ಹೇಳಿ ಪತ್ನಿಗೆ ಆಘಾತ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬೆಡ್‌ರೂಂನಲ್ಲಿ ಕ್ಯಾಮೆರಾ ಫಿಕ್ಸ್, ಬ್ಲಾಕ್‌ಮೇಲ್ ತಂತ್ರ

ಮಹಿಳೆಯ ದೂರಿನ ಅತ್ಯಂತ ಗಂಭೀರ ಅಂಶವೆಂದರೆ, ಪತಿ ಸೈಯದ್ ಆಕೆಯ ಸಮ್ಮತಿಯಿಲ್ಲದೇ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಮೊಬೈಲ್‌ನಲ್ಲಿ ಮತ್ತು ಬೆಡ್‌ರೂಂನಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ ಸೆರೆ ಹಿಡಿದಿದ್ದಾನೆ. ಈ ವಿಡಿಯೋ ಮತ್ತು ಫೋಟೋಗಳನ್ನು ವಿದೇಶದಲ್ಲಿರುವ ತನ್ನ ಆಪ್ತರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಪತ್ನಿಗೆ ವಿದೇಶದಲ್ಲಿರುವ ತನ್ನ ಕೆಲವು ಕ್ಲೈಂಟ್‌ಗಳೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಪತ್ನಿ ಒಪ್ಪದಿದ್ದಾಗ, ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ದೈಹಿಕ ಮತ್ತು ಮಾನಸಿಕ ಕಿರುಕುಳ

ವರದಕ್ಷಿಣೆಗಾಗಿ ಬೇಡಿಕೆ ಇಟ್ಟು, ಪ್ಲಾಟ್ ಖರೀದಿ ಮಾಡಲು ಚಿನ್ನಾಭರಣ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಸೈಯದ್ ಅನೇಕ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ, ಹೋಟೆಲ್‌ನಲ್ಲಿ, ಮತ್ತು ತಂದೆ-ತಾಯಿಯ ಮನೆಯಲ್ಲಿ ಕೂಡ ದೈಹಿಕ ಹಲ್ಲೆ ಹಾಗೂ ಮಾನಸಿಕ ಹಿಂಸೆ ನೀಡಿದ್ದಾನೆ. ಸಂತ್ರಸ್ತೆಯ ತಂದೆ-ತಾಯಿ ಭೇಟಿ ಮಾಡದಂತೆ ಆಕೆಯನ್ನು ನಿರ್ಬಂಧಿಸುತ್ತಿದ್ದ ಆರೋಪಿ, ಡೈವರ್ಸ್‌ ನೀಡುವುದಾಗಿ ಬೆದರಿಕೆ ಹಾಕತ್ತಿಲ್ಲ.

2025 ಫೆಬ್ರವರಿ 16 ರಂದು ಕೌಟುಂಬಿಕ ಸಮಾರಂಭದಲ್ಲಿ ಆರೋಪಿಯ ತಂಗಿ ಹಿನಾ ಕೌಸರ್‌ನಿಂದ ಅವಮಾನ ಆಗಿದ್ದು, ಇನ್ನೊಬ್ಬ ಆರೋಪಿ ಸೈಯದ್ ವಸೀಮ್ ಬೊಕಾರಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ.

2025ರ ಜೂನ್‌ 1 ರಂದು ವಿನಾಯಕ ನಗರದ ಎಂಎಂಆರ್ ರೆಸಿಡೆನ್ಸಿಯಲ್ಲಿ ಬಾಡಿಗೆ ಪಡೆದು ವಾಸ ಆರಂಭಿಸಿದ್ದೆವು.ಈ ವೇಳೆ ಸೈಯದ್ ಬೆಡ್ ರೂಂನಲ್ಲಿ ಕ್ಯಾಮಾರ ಪಿಕ್ಸ್ ಮಾಡಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.ಸೈಯದ್ ಜಗಳವಾಡಿ ಹಲ್ಲೆ ಮಾಡಿದ ನಂತರ ಸೆಪ್ಟೆಂಬರ್ 21, 2025 ರಂದು ಮನೆ ಬಿಟ್ಟು ಹೋಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಪುಟ್ಟೇನಹಳ್ಳಿ ಪೊಲೀಸರು ಈ ಗಂಭೀರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.