Bengaluru Chain Snatchers Use Machete to Attack ಬೆಂಗಳೂರಿನಲ್ಲಿ ಒಂದೇ ದಿನ ಐದು ಕಡೆ ಲಾಂಗ್‌ ಹಿಡಿದು ಸರಗಳ್ಳತನ ಮಾಡಿದ ಪ್ರಕರಣದಲ್ಲಿ ಓರ್ವ ಆರೋಪಿ ಪ್ರವೀಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜೈಲಿನಲ್ಲಿ ಸ್ನೇಹಿತರಾಗಿದ್ದ ಇವರು, ಮಹಿಳೆಯರಿಗೆ ಲಾಂಗ್‌ನಿಂದ ಬೆದರಿಸಿ ಸರ ಕದಿಯುತ್ತಿದ್ದರು.

ಬೆಂಗಳೂರು (ಅ.3): ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿ ಹದಗೆಟ್ಟಿದೆ ಅನ್ನೋದನ್ನ ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೋ (ಎನ್‌ಸಿಆರ್‌ಬಿ) ಇತ್ತೀಚೆಗೆ ತಿಳಿಸಿದೆ. 2023ರ ಎನ್‌ಸಿಆರ್‌ಬಿ ವರದಿ ಈಗ ಹೊರಬಿದ್ದಿದ್ದು, ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಪ್ರಮಾಣದಲ್ಲಿ ಶೇ.40ರಷ್ಟು ಏರಿಕೆಯಾಗಿದೆ ಅನ್ನುವ ಸ್ಫೋಟಕ ವರದಿಯನ್ನು ನೀಡಿದೆ. ಇದೇ ಹೊತ್ತನಲ್ಲಿ ಬೆಂಗಳೂರಿನಲ್ಲಿ ಕಳೆದ ತಿಂಗಳ 13 ರಂದು ಒಂದೇ ದಿನ ಮಹಿಳೆಯರ ಕುತ್ತಿಗೆಗೆ ಲಾಂಗ್‌ ಹಿಡಿದು ಐದು ಕಡೆ ಚೈನ್‌ ಸ್ನ್ಯಾಚ್‌ ಮಾಡಿರುವ ಪ್ರಕರಣ ವರದಿಯಾಗಿದೆ.

ಜೈಲಲ್ಲಿ ಇದ್ದಾಗ ಫ್ರೆಂಡ್‌ಶಿಪ್‌ ಮಾಡಿಕೊಂಡಿದ್ದ ಆರೋಪಿಗಳು, ರಿಲೀಸ್‌ ಆದ ಬಳಿಕ ಚೈನ್‌ ಸ್ನ್ಯಾಚ್‌ಗೆ ಇಳಿದಿದ್ದರು. ಕಳೆದ ತಿಂಗಳು ನಡೆದ ಗಣೇಶ ಹಬ್ಬದ ಸಂಭ್ರಮದಲ್ಲಿ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಸರಗಳ್ಳರ ಅರೆಸ್ಟ್‌ ನಡೆದಿತ್ತು. ಸರಗಳ್ಳತನ ಮಾಡಿದ್ದ ಗೇರಿ ರಾಮನಗರ ಮೂಲದ ಪ್ರವೀಣ್‌ನನ್ನು ಪೊಲೀಸರು ಬಂಧಿಸಿದ್ದರೆ, ಮಹಿಳೆಯರ ಕುತ್ತಿಗೆಗೆ ಲಾಂಗ್‌ ಇಟ್ಟಿದ್ದ ಯೋಗಾನಂದ್‌ಗಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ.

ಒಂದೇ ರಾತ್ರಿಯಲ್ಲಿ ಪ್ರವೀಣ್‌ ಹಾಗೂ ಯೋಗಾನಂದ್‌ ಐದು ಕಡೆ ಸರಗಳ್ಳತನ ಮಾಡಿದ್ದರು. ಗಿರಿನಗರ, ಹನುಮಂತನಗರ, ಕೋಣನಕುಂಟೆಯಲ್ಲಿ ಮಹಿಳೆಯರ ಸರವನ್ನು ಕಳ್ಳತನ ಮಾಡಿದ್ದರು.

ಪ್ರತಿರೋಧ ತೋರಿಸಿದ್ದ ಮಹಿಳೆಯ ಕೈಬೆರಳು ಕಟ್‌

ಕಳ್ಳತನ ಮಾಡುವ ವೇಳೆ ಮಹಿಳೆಯರ ಕುತ್ತಿಗೆಗೆ ಲಾಂಗ್‌ ಇಟ್ಟು ಬೆದರಿಸಿದ್ದರು ಎನ್ನಲಾಗಿದೆ. ಗಿರಿನಗರದಲ್ಲಿ ಸರಗಳ್ಳರಿಗೆ ಪ್ರತಿರೋಧ ತೋರಿದ್ದ ಮಹಿಳೆ ಮೇಲೆ ಆರೋಪಿಗಳು ಲಾಂಗ್‌ ಬೀಸಿದ್ದಾರೆ. ಸೆಪ್ಟೆಂಬರ್ 14 ರಂದು ಈ ಘಟನೆ ನಡೆದಿತ್ತು. ಆರೋಪಿಗಳ ಮಚ್ಚಿನೇಟಿಗೆ ಮಹಿಳೆಯ ಕೈಬೆರಳು ಕಟ್ ಆಗಿದ್ದವು.

ಪ್ರವೀಣ್‌ ಬಂಧನ, ಯೋಗಾನಂದ್‌ಗೆ ಹುಡುಕಾಟ

ಸದ್ಯ ಗಿರಿನಗರ ಪೊಲೀಸರಿಂದ ಕುಖ್ಯಾತ ಸರಗಳ್ಳ ಪ್ರವೀಣ್‌ನನ್ನು ಬಂಧಿಸಲಾಗಿದೆ. ಪ್ರವೀಣ್ ಬಂಧನದ ನಂತರ ಆರೋಪಿಗಳ ಹಲವು ವಿಚಾರಗಳು ಬಯಲಿಗೆ ಬಂದಿವೆ. ಇಬ್ಬರು ಆರೋಪಿಗಳು ಜೈಲಿನಲ್ಲಿ ಪರಿಚಯವಾಗಿದ್ದರು. ಜೈಲಿನಿಂದ ಹೊರಬಂದ ನಂತರ ಚೈನ್ ಸ್ನಾಚ್ ಮಾಡಲು ಇಳಿದಿದ್ದರು. ಪರಾರಿಯಾಗಿರುವ ಯೋಗಾನಂದ್‌ಗಾಗಿ ಪೊಲೀಸರು ಈಗ ಬಲೆ ಬೀಸಿದ್ದಾರೆ.