Belagavi Anganwadi Teacher Murdered by Paramour Over ₹5 Lakh Loan Repayment ಖಾನಾಪುರ ತಾಲೂಕಿನ ನಂದಗಡದ ಅಂಗನವಾಡಿ ಶಿಕ್ಷಕಿ ಅಶ್ವಿನಿ ಪಾಟೀಲ್ ಅವರ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಅನೈತಿಕ ಸಂಬಂಧ ಹೊಂದಿದ್ದ ಶಂಕರ್ ಪಾಟೀಲ್ ಎಂಬಾತನನ್ನು ಬಂಧಿಸಿದ್ದಾರೆ.
ಬೆಳಗಾವಿ (ಅ.10): ಖಾನಾಪುರ ತಾಲೂಕಿನ ನಂದಗಡದ ಅಂಗನವಾಡಿ ಶಿಕ್ಷಕಿ ಅಶ್ವಿನಿ ಪಾಟೀಲ್ (50) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ ಅನೈತಿಕ ಸಂಬಂಧ ಹೊಂದಿದ್ದ ಶಂಕರ್ ಪಾಟೀಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಾಲವಾಗಿ ಪಡೆದ ಹಣವನ್ನು ವಾಪಸ್ ಕೇಳಿದ ಕಾರಣಕ್ಕೆ ಈ ಭೀಕರ ಕೃತ್ಯ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಘಟನೆಯ ವಿವರ
ಹತ್ಯೆಯಾದ ಅಶ್ವಿನಿ ಪಾಟೀಲ್ ನಂದನಗಢದ ಅಂಗನವಾಡಿ ಶಿಕ್ಷಕಿಯಾಗಿದ್ದು, ಅಕ್ಟೋಬರ್ 2 ರಂದು ಅಶ್ವಿನಿ ಅವರು ಕಕ್ಕೇರಿ ಬಿಷ್ಟಾದೇವಿ ಜಾತ್ರೆಗೆಂದು ತೆರಳಿದ್ದರು. ಮನೆಗೆ ಮರಳಿರಲಿಲ್ಲ. ಹೀಗಾಗಿ ನಂದಗಡ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ನಾಪತ್ತೆಯಾದ ನಾಲ್ಕು ದಿನಗಳ ನಂತರ ಅಶ್ವಿನಿ ಶವವು ಕಾರವಾರ ಜಿಲ್ಲೆಯ ರಾಮನಗರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಶವ ಸಿಕ್ಕ ಕೂಡಲೇ ರಾಮನಗರ ಪೊಲೀಸರು ನಂದಗಡ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು.
ಅಸಲಿ ವಿಷಯ ಬಯಲು
ಅಶ್ವಿನಿಯನ್ನು ಜಾತ್ರೆಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿ ಶಂಕರ್ ಪಾಟೀಲ್ ಎಂಬ ಡ್ರೈವರ್ ಎಂದು ತಿಳಿದುಬಂದಿತ್ತು. ಪೊಲೀಸರ ತೀವ್ರ ವಿಚಾರಣೆಯ ನಂತರ, ತಾನೇ ಕೊಲೆ ಮಾಡಿ ಶವವನ್ನು ಕಾಡಿನಲ್ಲಿ ಬಿಸಾಡಿ ಬಂದಿದ್ದಾಗಿ ಶಂಕರ್ ಒಪ್ಪಿಕೊಂಡಿದ್ದಾನೆ.
ಅನೈತಿಕ ಸಂಬಂಧ ಮತ್ತು ಸಾಲ
ಡ್ರೈವರ್ ಆಗಿದ್ದ ಶಂಕರ್, ಅಶ್ವಿನಿ ಅವರ ಮನೆಯ ಕೆಲಸದ ಸಮಯದಲ್ಲಿ ಪರಿಚಯವಾಗಿ ಸ್ನೇಹ ಬೆಳೆಸಿ, ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ವೇಳೆ ಆತ ಅಶ್ವಿನಿಯಿಂದ ಐದು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಅಶ್ವಿನಿ ಹಣವನ್ನು ವಾಪಸ್ ಕೇಳಿದ್ದಕ್ಕೆ, ಜಾತ್ರೆ ನೆಪ ಹೇಳಿ ಕರೆದುಕೊಂಡು ಹೋಗಿ ತಲೆಗೆ ರಾಡ್‌ನಿಂದ ಹೊಡೆದು ಆಕೆಯನ್ನು ಕೊಲೆ ಮಾಡಿದ್ದಾನೆ. ಇದನ್ನು ಪೊಲೀಸರು ಕೂಡ ದೃಢಪಡಿಸಿದ್ದಾರೆ.
ಅಶ್ವಿನಿ ಅವರ ಗಂಡ ಕಳೆದ 30 ವರ್ಷಗಳಿಂದ ಗೋವಾದಲ್ಲಿ ಕೆಲಸ ಮಾಡುತ್ತಿದ್ದು, ಮಗ ಕೂಡ ಬೇರೆ ಊರಿನಲ್ಲಿ ವಾಸವಾಗಿದ್ದಾನೆ. ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಅವರು ಮಾತನಾಡಿ, "ಆರೋಪಿ ಶಂಕರ್‌ನನ್ನು ಬಂಧಿಸಿ ರಾಮನಗರ ಪೊಲೀಸರಿಗೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಶೀಘ್ರವೇ ನಂದಗಡ ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ. ಮತ್ತಷ್ಟು ತನಿಖೆ ನಡೆಸಿ ಹತ್ಯೆಗೆ ನಿಖರ ಕಾರಣ ಪತ್ತೆ ಹಚ್ಚುತ್ತೇವೆ," ಎಂದು ತಿಳಿಸಿದ್ದಾರೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
