ಟೀಂ ಇಂಡಿಯಾ ಉಪನಾಯಕ ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಕ್ರಿಕೆಟ್‌ನಲ್ಲಿ ಹೆಚ್ಚಿನ ಸಾಧನೆಗಾಗಿ ಗಾಲ್ಫ್ ಆಡಲು ಮಾಜಿ ಆಟಗಾರ ಯುವರಾಜ್ ಸಿಂಗ್ ಸಲಹೆ ನೀಡಿದ್ದಾರೆ. ಗಾಲ್ಫ್ ಆಡುವ ಮೂಲಕ ಮಾನಸಿಕ ಸ್ಥಿತಿಯನ್ನು ಉತ್ತಮವಾಗಿಡಲು ಸಹಾಯವಾಗುತ್ತದೆ ಎಂದು ಯುವರಾಜ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ: ಟೀಂ ಇಂಡಿಯಾ ಉಪನಾಯಕ ಶುಭ್‌ಮನ್ ಗಿಲ್ ಮತ್ತು ಸ್ಪೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರಿಗೆ ಕ್ರಿಕೆಟ್‌ನಲ್ಲಿ ಹೆಚ್ಚಿನ ಸಾಧನೆ ಮಾಡಲು ಗಾಲ್ಫ್ ಆಡಲು ಸಲಹೆ ನೀಡಿದ್ದಾರೆ ಮಾಜಿ ಆಟಗಾರ ಯುವರಾಜ್ ಸಿಂಗ್. ಕಳೆದ ಐಪಿಎಲ್ ಸಮಯದಲ್ಲಿ ಯುವರಾಜ್ ಈ ವಿಷಯವನ್ನು ಇಬ್ಬರ ಮುಂದೆಯೂ ಮಂಡಿಸಿದ್ದರು. ಭಾರತದ 2007 ಟಿ20 ವಿಶ್ವಕಪ್ ಮತ್ತು 2011 ಏಕದಿನ ವಿಶ್ವಕಪ್ ವಿಜಯದ ರೂವಾರಿ ಯುವರಾಜ್ ಸಿಂಗ್ ನಿವೃತ್ತಿಯ ನಂತರ ಗಾಲ್ಫ್‌ನಲ್ಲಿ ಹೆಚ್ಚು ಗಮನಹರಿಸುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಎಂ ಎಸ್ ಧೋನಿ, ಬ್ರಿಯಾನ್ ಲಾರಾ ಮುಂತಾದವರು ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಬಳಿಕ ಗಾಲ್ಫ್ ಆಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
“ನಾನು ಇಬ್ಬರಿಗೂ ಗಾಲ್ಫ್ ಆಡಲು ಸಲಹೆ ನೀಡಿದೆ. ಹೇಳುವುದು ಮಾತ್ರವಲ್ಲ, ಪ್ರೋತ್ಸಾಹಿಸಿದೆ ಕೂಡ. ಇತ್ತೀಚಿನ ಕ್ರಿಕೆಟ್ ಕ್ಯಾಲೆಂಡರ್ ತುಂಬಾ ಬ್ಯುಸಿಯಾಗಿದೆ. ಹಾಗಾಗಿ ಸಮಯ ಹೊಂದಿಸುವುದು ಸುಲಭವಲ್ಲ. ಆದರೆ, ಐಪಿಎಲ್ ಸಮಯದಲ್ಲಿ ಗಾಲ್ಫ್ ಆಡಬಹುದು,” ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಕ್ರಿಕೆಟ್‌ನಲ್ಲಿ ಹೆಚ್ಚಿನ ಸುಧಾರಣೆಗಾಗಿ ಆಟಗಾರರು ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಳ್ಳಬೇಕು ಮತ್ತು ಅದಕ್ಕೆ ಗಾಲ್ಫ್ ಒಂದು ಉತ್ತರ ಎಂದು ಯುವರಾಜ್ ಅಭಿಪ್ರಾಯಪಟ್ಟಿದ್ದಾರೆ. ಮಾನಸಿಕ ಸ್ಥಿತಿಯನ್ನು ಉತ್ತಮವಾಗಿಡಲು ಗಾಲ್ಫ್ ಸಹಾಯ ಮಾಡುತ್ತದೆ ಎಂದು ಯುವಿ ವಿಶ್ಲೇಷಿಸಿದ್ದಾರೆ. ಅನೇಕ ವಿಶ್ವದರ್ಜೆಯ ಆಟಗಾರರ ಬೆಳವಣಿಗೆಯ ಹಿಂದೆ ಗಾಲ್ಫ್‌ನಂತಹ ಇತರ ಕ್ರೀಡೆಗಳಿವೆ ಎಂದು ಯುವರಾಜ್ ಹೇಳಿದ್ದಾರೆ.
“ಎಲ್ಲವೂ ಅವರ ನಿರ್ಧಾರ. ಅವರು ಈಗ ಕ್ರಿಕೆಟ್‌ನ ಸೂಪರ್‌ಸ್ಟಾರ್‌ಗಳು. ತಮ್ಮ ಕ್ರಿಕೆಟ್ ಸುಧಾರಿಸಲು ಏನು ಸಹಾಯ ಮಾಡುತ್ತದೆ ಎಂಬುದನ್ನು ಅವರೇ ನಿರ್ಧರಿಸಬೇಕು. ಗಾಲ್ಫ್ ಅಂತಹ ಒಂದು ಕ್ರೀಡೆ. ಕ್ರಿಕೆಟ್ ತಾರೆಗಳನ್ನು ಮಾತ್ರವಲ್ಲ, ಎಲ್ಲಾ ಕ್ರೀಡಾಪಟುಗಳನ್ನು ಗಾಲ್ಫ್ ಆಡಲು ನಾನು ಪ್ರೋತ್ಸಾಹಿಸಲು ಬಯಸುತ್ತೇನೆ,” ಎಂದು ಯುವರಾಜ್ ಹೇಳಿದ್ದಾರೆ.
“ನಿಮ್ಮನ್ನು ಶಾಂತಗೊಳಿಸಲು ಸಹಾಯ ಮಾಡುವ ಯಾವುದೇ ಕ್ರೀಡೆ ಪ್ರಯೋಜನಕಾರಿ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ನಲ್ಲಿರುವ ಗಾಲ್ಫ್ ಸಂಸ್ಕೃತಿಯನ್ನು ನೀವು ನೋಡಿದರೆ, ಹೆಚ್ಚಿನ ಉತ್ತಮ ಕ್ರಿಕೆಟ್ ಆಟಗಾರರು ತುಂಬಾ ಚಿಕ್ಕ ವಯಸ್ಸಿನಿಂದಲೇ ಗಾಲ್ಫ್ ಆಡಿದ್ದಾರೆ. ಒಂದು ಪಂದ್ಯಕ್ಕೆ ನೀವು ಮಾನಸಿಕವಾಗಿ ಹೇಗೆ ಚೈತನ್ಯ ಪಡೆಯಬಹುದು ಎಂಬುದು ಪ್ರಶ್ನೆ. ಪ್ರಪಂಚದ ಪ್ರತಿಯೊಬ್ಬ ಕ್ರೀಡಾಪಟುವೂ ಗಾಲ್ಫ್ ಆಡಬೇಕು, ಏಕೆಂದರೆ ಅದು ಅವರಲ್ಲಿರುವ ಅತ್ಯುತ್ತಮವಾದದ್ದನ್ನು ಹೊರತರಲು ಸಹಾಯ ಮಾಡುತ್ತದೆ. ನಾನು ಮೊದಲಿನಿಂದಲೂ ಗಾಲ್ಫ್ ಆಡಿದ್ದರೆ, 3,000 ರನ್‌ಗಳನ್ನು ಹೆಚ್ಚು ಗಳಿಸಬಹುದಿತ್ತು,” ಎಂದು ಯುವರಾಜ್ ಹೇಳಿದ್ದಾರೆ.
ಏಷ್ಯಾಕಪ್ ಟೂರ್ನಿಗೆ ಭಾರತದ ವೇಳಾಪಟ್ಟಿ:
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಸೆಪ್ಟೆಂಬರ್ 10ರಂದು ಯುಎಇ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಸೆಪ್ಟೆಂಬರ್ 14ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಾದಾಡಲಿದೆ. ಇನ್ನು ಸೆಪ್ಟೆಂಬರ್ 19ರಂದು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಓಮಾನ್ ತಂಡವನ್ನು ಎದುರಿಸಲಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಎಂಟು ಬಾರಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ಹಾಲಿ ಚಾಂಪಿಯನ್ ಭಾರತ 9ನೇ ಏಷ್ಯಾಕಪ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:
ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.
