ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಭಾರತ ತಂಡ, ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು ನ್ಯೂಜಿಲೆಂಡ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಹರ್ಮನ್ ಪ್ರೀತ್ ಕೌರ್ ನಾಯಕತ್ವದ ತಂಡವು ಉಳಿದಿರುವ ಎರಡೂ ಪಂದ್ಯಗಳನ್ನು ಗೆದ್ದರೆ ಮಾತ್ರ ಸೆಮಿಫೈನಲ್ ಪ್ರವೇಶ ಸಾಧ್ಯವಿದೆ.
ನವಿ ಮುಂಬೈ: ಈ ಬಾರಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಆತಿಥೇಯ ಭಾರತ ತಂಡ ಸೆಮಿಫೈನಲ್ ರೇಸ್‌ನಲ್ಲಿ ಉಳಿದುಕೊಳ್ಳಲು ಹೆಣಗಾಡುತ್ತಿದೆ. ತಂಡ ನ್ಯೂಜಿಲೆಂಡ್ ವಿರುದ್ಧ ಗುರುವಾರವಾರವಾದ ಇಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆಡಲಿದ್ದು, ಗೆಲುವಿನ ಕಾತರದಲ್ಲಿದೆ.
ಹ್ಯಾಟ್ರಿಕ್ ಸೋಲು ಕಂಡಿರುವ ಹರ್ಮನ್ ಪಡೆ
ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ 5 ಪಂದ್ಯಗಳನ್ನಾಡಿದ್ದು, 2ರಲ್ಲಿ ಗೆದ್ದು 4 ಅಂಕ ಸಂಪಾದಿಸಿದೆ. ಮೊದಲೆರಡು ಪಂದ್ಯ ಗೆದ್ದು ಬೀಗಿದ್ದ ಭಾರತ ಆ ಬಳಿಕ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ತಂಡಕ್ಕೆ ಕಿವೀಸ್ ಹಾಗೂ ಬಾಂಗ್ಲಾದೇಶ ವಿರುದ್ಧ ಪಂದ್ಯ ಬಾಕಿಯಿವೆ. ಇದರಲ್ಲಿ ಗೆದ್ದರಷ್ಟೇ ತಂಡ ಸೆಮಿಫೈನಲ್‌ಗೆ ಪ್ರವೇಶಿಸಬಹುದು. ಒಂದು ವೇಳೆ ಕಿವೀಸ್ ವಿರುದ್ಧ ಸೋತರೆ ತಂಡದ ಸೆಮೀಸ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಅತ್ತ ಕಿವೀಸ್ ಕೂಡಾ 5 ಪಂದ್ಯಗಳನ್ನಾಡಿದ್ದು, 1ರಲ್ಲಿ ಮಾತ್ರ ಗೆದ್ದಿದೆ. ಇನ್ನೆರಡು ಪಂದ್ಯಗಳು ಮಳೆ ಆಹುತಿಯಾಗಿರುವುದರಿಂದ ತಂಡ ಒಟ್ಟು 4 ಅಂಕ ಸಂಪಾದಿಸಿದೆ. ಆದರೆ ನೆಟ್ ರನ್‌ರೇಟ್ ಆಧಾರದಲ್ಲಿ ಭಾರತ 4ನೇ, ಕಿವೀಸ್ 5ನೇ ಸ್ಥಾನದಲ್ಲಿದೆ.
ಲೆಕ್ಕಾಚಾರವೇನು?
ಆಸ್ಟ್ರೇಲಿಯಾ, ಇಂಗ್ಲೆಂಡ್, ದ.ಆಫ್ರಿಕಾ ಈಗಾಗಲೇ ಸೆಮಿಫೈನಲ್ ತಲುಪಿವೆ. ಇನ್ನೊಂದು ಸ್ಥಾನ ಬಾಕಿ ಇದೆ. ಇದಕ್ಕೆ ಭಾರತ, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಪೈಪೋಟಿಯಲ್ಲಿವೆ. ಭಾರತ ಉಳಿದ 2 ಪಂದ್ಯಗಳಲ್ಲೂ ಗೆದ್ದರೆ ಸೆಮೀಸ್‌ಗೇರಲಿದೆ. ಭಾರತ ಒಂದರಲ್ಲಿ ಸೋತು, ಅತ್ತ ಕಿವೀಸ್ ಎರಡರಲ್ಲೂ ಗೆದ್ದರೆ ಭಾರತದ ಹಾದಿ ಬಂದ್ ಆಗಲಿದ್ದು, ಕಿವೀಸ್ ಸೆಮೀಸ್ ತಲುಪಲಿವೆ. ನ್ಯೂಜಿಲೆಂಡ್ ತಂಡವು ಭಾರತ ಮಾತ್ರವಲ್ಲದೇ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಲಂಕಾಗೆ ಇನ್ನು ಪಾಕ್ ವಿರುದ್ಧ 1 ಪಂದ್ಯ ಬಾಕಿಯಿವೆ. ಅದರಲ್ಲಿ ಲಂಕಾ ಗೆದ್ದರೂ ಸೆಮೀಸ್ ಗೇರಲು ಭಾರತ, ಕಿವೀಸ್ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಿದೆ.
ಪಂದ್ಯ ಆರಂಭ: ಮಧ್ಯಾಹ್ನ 3 ಗಂಟೆಗೆ
