ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಮೃತಿ ಮಂಧನಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಪೂರೈಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು, ಪ್ರತಿಕಾ ರಾವಲ್ ಜೊತೆಗೂಡಿ ಶತಕದ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.

ವಿಶಾಖಪಟ್ಟಣ: ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಮಹಿಳೆಯರು ಉತ್ತಮ ಆರಂಭ ಪಡೆದಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಉಪನಾಯಕಿ ಸ್ಮೃತಿ ಮಂಧನಾ ಹಾಗೂ ಪ್ರತಿಕ ರಾವಲ್ ಆಕರ್ಷಕ ಅರ್ಧಶತಕ ಸಿಡಿಸಿದ್ದು, ಪ್ರತೀಕ ಶತಕದತ್ತ ಮುನ್ನುಗ್ಗುತ್ತಿದ್ದಾರೆ. ಇನ್ನು ಇದೇ ವೇಳೆ ಎಡಗೈ ಬ್ಯಾಟರ್ ಸ್ಮೃತಿ ಮಂಧನಾ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಬಾರಿಸಿದ ಮೊದಲ ಬ್ಯಾಟರ್ ಮಂಧನಾ

ಇನ್ನು ವೈಯಕ್ತಿಕ ಸ್ಕೋರ್ 18 ತಲುಪುತ್ತಿದ್ದಂತೆ, ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಪಂದ್ಯಗಳಲ್ಲಿ 1,000 ರನ್ ಪೂರೈಸಿದ ವಿಶ್ವದ ಮೊದಲ ಮಹಿಳಾ ಬ್ಯಾಟರ್ ಎಂಬ ದಾಖಲೆಯನ್ನು ಸ್ಮೃತಿ ಮಂಧನಾ ತಮ್ಮದಾಗಿಸಿಕೊಂಡರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಇಳಿಯುವ ಮುನ್ನವೇ, ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮಹಿಳಾ ಏಕದಿನ ಕ್ರಿಕೆಟರ್ ಎಂಬ ದಾಖಲೆ ಸ್ಮೃತಿ ಹೆಸರಿನಲ್ಲಿತ್ತು. ಈ ವರ್ಷ ಆಡಿದ 17 ಏಕದಿನ ಪಂದ್ಯಗಳಿಂದ ಸ್ಮೃತಿ 982 ರನ್ ಗಳಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ 18 ರನ್ ಗಳಿಸುವುದರೊಂದಿಗೆ, ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನೂ ಸ್ಮೃತಿ ತಮ್ಮದಾಗಿಸಿಕೊಂಡರು.

Scroll to load tweet…

1997ರಲ್ಲಿ 970 ರನ್ ಗಳಿಸಿದ್ದ ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ಅವರ ಹೆಸರಿನಲ್ಲಿದ್ದ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸ್ಮೃತಿ ಮುರಿದರು. 2022ರಲ್ಲಿ 882 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಟ್, 1997ರಲ್ಲಿ 880 ರನ್ ಗಳಿಸಿದ್ದ ನ್ಯೂಜಿಲೆಂಡ್‌ನ ಡೆಬ್ಬಿ ಹಾಕ್ಲಿ ಮತ್ತು 2016ರಲ್ಲಿ 853 ರನ್ ಗಳಿಸಿದ್ದ ಆಮಿ ಸ್ಯಾಟರ್‌ವೈಟ್ ಅವರನ್ನೂ ಸ್ಮೃತಿ ಈ ದಾಖಲೆಯ ಸಾಧನೆಯಲ್ಲಿ ಹಿಂದಿಕ್ಕಿದ್ದಾರೆ. ಈ ವರ್ಷ ಆಡಿದ 18 ಪಂದ್ಯಗಳಲ್ಲಿ ಸ್ಮೃತಿ ನಾಲ್ಕು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ.

ಆಸ್ಟ್ರೇಲಿಯಾ ಎದುರು ದಿಟ್ಟ ಆರಂಭ ಪಡೆದ ಭಾರತ

ಟಾಸ್ ಸೋತ ನಂತರ ಕ್ರೀಸ್‌ಗೆ ಇಳಿದ ಭಾರತ ಎಚ್ಚರಿಕೆಯ ಆರಂಭ ಪಡೆಯಿತು. ಮೊದಲ ಓವರ್‌ನಲ್ಲಿ ಬೌಂಡರಿ ಗಳಿಸಿದರೂ, ಮೊದಲ ಮೂರು ಓವರ್‌ಗಳಲ್ಲಿ ಸ್ಮೃತಿ ಮತ್ತು ಪ್ರತಿಕಾ ರಾವಲ್ ಕೇವಲ ಒಂಬತ್ತು ರನ್ ಗಳಿಸಿದರು. ಸೋಫಿ ಮೊಲಿನೆಕ್ಸ್ ಎಸೆದ ಎಂಟನೇ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ ಮಂಧನಾ ಭಾರತವನ್ನು ಟಾಪ್ ಗೇರ್‌ಗೆ ತಂದರು. ಆಶ್ಲೀ ಗಾರ್ಡ್ನರ್ ಎಸೆದ ಒಂಬತ್ತನೇ ಓವರ್‌ನಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್ ಮತ್ತು ಮತ್ತೊಂದು ಬೌಂಡರಿ ಗಳಿಸಿದ ಪ್ರತಿಕಾ ಕೂಡ ಪವರ್‌ಪ್ಲೇಯನ್ನು ಸದುಪಯೋಗಪಡಿಸಿಕೊಂಡರು.

ಸ್ಮೃತಿ ಮಂಧನಾ ಹಾಗೂ ಪ್ರತಿಕಾ ರಾವಲ್ ಮೊದಲ ವಿಕೆಟ್‌ಗೆ ಸ್ಪೋಟಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯದಾರು. ಮೊದಲ ವಿಕೆಟ್‌ಗೆ 155 ರನ್‌ಗಳ ಭರ್ಜರಿ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಬಾರಿಯ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾಗಿದ್ದ ಮಂಧನಾ, ಬಲಿಷ್ಠ ಆಸ್ಟ್ರೇಲಿಯಾ ಎದುರು ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಅಸೀಸ್ ಎದುರು 66 ಎಸೆತಗಳನ್ನು ಎದುರಿಸಿದ ಮಂಧನಾ 9 ಬೌಂಡರಿ ಹಾಗೂ 3 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ 80 ರನ್ ರನ್ ಸಿಡಿಸಿ ಮೊಲಿನಿಕ್ಸ್‌ಗೆ ವಿಕೆಟ್ ಒಪ್ಪಿಸಿದರು.

ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸುತ್ತಿರುವ ಪ್ರತಿಕಾ ರಾವಲ್ 87 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 69 ರನ್ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದಾರೆ. ಭಾರತ 27 ಓವರ್ ಅಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 171 ರನ್ ಸಿಡಿಸಿದೆ.