ಮೂರನೇ ಟಿ20 ಪಂದ್ಯದಲ್ಲಿ, ಅರ್ಶದೀಪ್ ಸಿಂಗ್ ಅವರ ಮಾರಕ ಬೌಲಿಂಗ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತವು ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ, ಐದು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-1 ಅಂತರದಲ್ಲಿ ಸಮಬಲ ಸಾಧಿಸಿದೆ.

ಹೋಬಾರ್ಟ್: ಅರ್ಶದೀಪ್ ಸಿಂಗ್ ಮಾರಕ ದಾಳಿ ಹಾಗೂ ವಾಷಿಂಗ್ಟನ್ ಸುಂದರ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ 5 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಗೆಲ್ಲಲು 186 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

ಆಸ್ಟ್ರೇಲಿಯಾ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಸ್ಪೋಟಕ ಆರಂಭ ಪಡೆಯಿತಾದರೂ, ನಾಲ್ಕನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 25 ರನ್ ಸಿಡಿಸಿದರು. ಇನ್ನು ಉಪನಾಯಕ ಶುಭ್‌ಮನ್ ಗಿಲ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಾಯಕ ಸೂರ್ಯಕುಮಾರ್ ಯಾದವ್ ಕೇವಲ 11 ಎಸೆತಗಳಲ್ಲಿ 24 ರನ್ ಸಿಡಿಸಿದರು. ಇನ್ನು ಅಕ್ಷರ್ ಪಟೇಲ್ ಚುರುಕಿನ 17 ರನ್ ಸಿಡಿಸಿದರು.

Scroll to load tweet…

ಗುಡುಗಿದ ವಾಷಿಂಗ್ಟನ್ ಸುಂದರ್:

ಬೌಲಿಂಗ್ ಆಲ್ರೌಂಡರ್ ಆಗಿ ತಂಡ ಕೂಡಿಕೊಂಡ ವಾಷಿಂಗ್ಟನ್ ಸುಂದರ್, ಆಸೀಸ್ ಎದುರು ಬೌಲಿಂಗ್ ಮಾಡಲಿಲ್ಲ. ಆದರೆ ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡಲಿಳಿದ ಸುಂದರ್, ಕೇವಲ 23 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 49 ರನ್ ಸಿಡಿಸಿದರು. ಇನ್ನು ಸಂಜು ಸ್ಯಾಮ್ಸನ್ ಬದಲಿಗೆ ಅಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಜಿತೇಶ್ ಶರ್ಮಾ ಕೇವಲ 13 ಎಸೆತಗಳಲ್ಲಿ ಮೂರು ಬೌಂಡರಿ ಸಹಿತ ಅಜೇಯ 22 ರನ್ ಬಾರಿಸಿ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದರು.

ಆಸ್ಟ್ರೇಲಿಯಾಗೆ ಎದುರಾದ ಆರಂಭಿಕ ಆಘಾತ

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಆಸ್ಟ್ರೇಲಿಯಾ ತಂಡವು ಆರಂಭಿಕ ಆಘಾತ ಅನುಭವಿಸಿತು. ಆಸ್ಟ್ರೇಲಿಯಾ 73 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ಕು ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು. ಮೊದಲೆರಡು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಅರ್ಶದೀಪ್ ಸಿಂಗ್ ಪವರ್‌ಪ್ಲೇನಲ್ಲೇ ಮಾರಕ ದಾಳಿ ನಡೆಸಿ ಎರಡು ವಿಕೆಟ್ ಕಬಳಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಟಿಮ್ ಡೇವಿಡ್ ಹಾಗೂ ಮಾರ್ಕಸ್ ಸ್ಟೋನಿಸ್ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಟಿಮ್ ಡೇವಿಡ್ ಕೇವಲ 38 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 74 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಮಾರ್ಕಸ್ ಸ್ಟೋನಿಸ್ 39 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 64 ರನ್ ಸಿಡಿಸಿ ಅರ್ಶದೀಪ್ ಸಿಂಗ್‌ಗೆ ಮೂರನೇ ಬಲಿಯಾದರು.

ಭಾರತ ಪರ ಅರ್ಶದೀಪ್ ಸಿಂಗ್ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ವರುಣ್ ಚಕ್ರವರ್ತಿ ಎರಡು ಹಾಗೂ ಶಿವಂ ದುಬೆ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.