ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿಫಲರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಮೇಲೆ ಒತ್ತಡ ಹೆಚ್ಚಾಗಿದೆ. ನಿವೃತ್ತಿಯ ಊಹಾಪೋಹಗಳ ನಡುವೆ, ಈ ಸರಣಿಯು ಇಬ್ಬರ ಏಕದಿನ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆಯಿದೆ.

ಪರ್ತ್: ಭಾರತದ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದೀರ್ಘ ಸಮಯದ ಬಳಿಕ ಕ್ರಿಕೆಟ್ ಅಂಗಳಕ್ಕೆ ಮರಳಿದ್ದಾರೆ. ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆದರೆ ಇಬ್ಬರ ಪಾಲಿಗೂ ಕಮ್‌ಬ್ಯಾಕ್ ಪಂದ್ಯ ಕಹಿಯಾಗಿದ್ದಂತೂ ಸುಳ್ಳಲ್ಲ. ಇಬ್ಬರೂ ಪಂದ್ಯದಲ್ಲಿ ಮಿಂಚಲು ವಿಫಲರಾಗಿದ್ದಾರೆ.

ಕ್ರಿಕೆಟ್‌ನಲ್ಲಿ ಎಲ್ಲವನ್ನೂ ಒಂದೇ ಪಂದ್ಯ ಅಥವಾ ಸರಣಿಯಲ್ಲಿ ನಿರ್ಧರಿಸಲು ಸಾಧ್ಯವಿಲ್ಲ. ಆಟಗಾರರು ವಿಫಲವಾದರೆ ಅವರಿಗೆ ಮತ್ತಷ್ಟು ಅವಕಾಶಗಳೂ ಸಿಗುತ್ತಿರುತ್ತವೆ. ಒಮ್ಮೆ ವಿಫಲವಾದರೆ ತಂಡದಿಂದಲೇ ಹೊರಗಿಡುವುದು ಕಡಿಮೆ. ಆದರೆ ವಿರಾಟ್ ಹಾಗೂ ರೋಹಿತ್ ಪಾಲಿಗೆ ಈಗ ಪ್ರತಿ ಪಂದ್ಯ, ಸರಣಿ ಕೂಡಾ ನಿರ್ಣಾಯಕ. ಹೀಗಾಗಿ ಮೊದಲ ಪಂದ್ಯದ ಕಳಪೆ ಆಟ ಇವರಿಬ್ಬರ ಮೇಲಿನ ಒತ್ತಡ ಹೆಚ್ಚಿಸಿದೆ. ಈ ವೈಫಲ್ಯ ಸರಣಿಯಲ್ಲಿ ಮುಂದುವರಿದರೆ ಅದು ಇಬ್ಬರು ಭವಿಷ್ಯಕ್ಕೂ ಮುಳ್ಳಾಗುವುದಂತೂ ಖಚಿತ.

ನಿವೃತ್ತಿಯ ಊಹಾಪೋಹ:

ಕೊಹ್ಲಿ, ರೋಹಿತ್ ಈಗಾಗಲೇ ಟೆಸ್ಟ್, ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನದಿಂದಲೂ ಇವರಿಬ್ಬರು ದೂರವಾಗುವ ಸಮಯ ಹತ್ತಿರದಲ್ಲೇ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅದರಲ್ಲೂ ರೋಹಿತ್ ಶರ್ಮಾರ ನಾಯಕತ್ವದ ಹೊಣೆಗಾರಿಕೆಯನ್ನು ಶುಭಮನ್‌ ಗಿಲ್‌ಗೆ ವಹಿಸಲಾಗಿದೆ. 36 ವರ್ಷದ ಕೊಹ್ಲಿ, 38 ವರ್ಷದ ರೋಹಿತ್ ಇಬ್ಬರ ನಿವೃತ್ತಿ ಬಗ್ಗೆಯೂ ಊಹಾಪೋಹಗಳು ಹರಿದಾಡುತ್ತಿವೆ. ವರದಿಗಳ ಪ್ರಕಾರ, ಆಸೀಸ್ ಸರಣಿಯೇ ಇವರಿಬ್ಬರ ಪಾಲಿಗೆ ಕೊನೆ ಅಂತಾರಾಷ್ಟ್ರೀಯ ಸರಣಿ ಆದರೂ ಆಗಲೂಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಸರಣಿಯ ಇನ್ನುಳಿದ 2 ಪಂದ್ಯಗಳಲ್ಲೂ ಇವರಿಬ್ಬರು ಅಬ್ಬರಿಸಬೇಕಾದ ಅನಿವಾರ್ಯತೆ ಹೆಚ್ಚಿದೆ.

ಆಟಗಾರರ ನಿವೃತ್ತಿ ಬಗ್ಗೆ ಬಿಸಿಸಿಐ ಸ್ಪಷ್ಟ ನಿಲುವು!

ಸದ್ಯ ಬಿಸಿಸಿಐ, ತಂಡದ ಆಯ್ಕೆ ಸಮಿತಿ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಕಿರಿಯ ಆಟಗಾರರಿಗೆ ಅವಕಾಶ, ನಾಯಕತ್ವ, ಹಿರಿಯರ ನಿವೃತ್ತಿ ಬಗ್ಗೆ ಮಂಡಳಿ ಹಾಗೂ ಆಯ್ಕೆ ಸಮಿತಿ ಸ್ಪಷ್ಟನಿಲುವು ಹೊಂದಿದೆ. ಕೊಹ್ಲಿ, ರೋಹಿತ್ ಅಂ.ರಾ. ಟಿ20ಗೆ ನಿವೃತ್ತಿ ಘೋಷಿಸಿದ್ದು ಸ್ವಯಂ ನಿರ್ಧಾರವೇ ಆಗಿದ್ದರೂ, ಟೆಸ್ಟ್‌ನಿಂದ ಹೊರಗುಳಿಯಲು ಬಿಸಿಸಿಐ ಸೂಚನೆಯೇ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಏಕದಿನದಲ್ಲೂ ಇವರಿಬ್ಬರು ಮುಂದುವರಿಯಬೇಕಿದ್ದರೆ ಆಸೀಸ್ ಸರಣಿಯಲ್ಲಿ ಮಿಂಚಬೇಕಿದೆ. ಒಂದು ವೇಳೆ ವಿಫಲವಾದರೆ ಇಬ್ಬರನ್ನೂ ತಂಡದಲ್ಲಿ ಉಳಿಸಿಕೊಳ್ಳುವುದು ಕಷ್ಟ.

ವಿಶ್ವಕಪ್‌ ಗೂ ಇರುತ್ತಾರಾ?

ಮುಂದಿನ ಏಕದಿನ ವಿಶ್ವಕಪ್ ನಡೆಯುವುದು 2027ರಲ್ಲಿ, ಕೊಹ್ಲಿ, ರೋಹಿತ್ ಮುಂದೆ ಈಗ ಇರುವ ಪ್ರಮುಖ ಗುರಿ ಎಂದರೆ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವುದು. ಆದರೆ ವಿಶ್ವಕಪ್‌ವರೆಗೂ ಇಬ್ಬರೂ ತಂಡದಲ್ಲಿ ಇರಲಿದ್ದಾರೊ? ಇಬ್ಬರನ್ನೂ ಉಳಿಸಿಕೊಳ್ಳಲಾಗುತ್ತಾ ಎನ್ನುವ ಕುತೂಹಲಕ್ಕೆ ಈ ಸರಣಿಯಲ್ಲಿ ಸಂಪೂರ್ಣ ಉತ್ತರ ಸಿಗದಿದ್ದರೂ ಕೊಂಚ ಸುಳಿವಂತೂ ಖಂಡಿತವಾಗಿಯೂ ಸಿಗುವ ನಿರೀಕ್ಷೆ ಇದೆ. ಹೀಗಾಗಿಯೇ ಪ್ರತಿ ಪಂದ್ಯಗಳೂ ಈಗ ಇವರಿಬ್ಬರ ಮೇಲೆ ಕೇಂದ್ರೀಕೃತವಾಗಿದೆ.

ಕೊಹ್ಲಿ, ರೋಹಿತ್‌ಗೆ ಅಭ್ಯಾಸದ ಕೊರತೆ

ಕೊಹ್ಲಿ, ರೋಹಿತ್ ಮೊದಲ ಪಂದ್ಯದಲ್ಲಿ ವಿಫಲರಾದ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಬೊಟ್ಟು ಮಾಡಿದ್ದು ಅಭ್ಯಾಸ ಕೊರತೆ ಬಗ್ಗೆ ಕಳೆದ ಮಾರ್ಚ್‌ನಲ್ಲಿ ಚಾಂಪಿಯನ್ ಟ್ರೋಫಿ ಆಡಿದ ಬಳಿಕ ಕೊಹ್ಲಿ, ರೋಹಿತ್ ಇಬ್ಬರೂ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಆಸೀಸ್ ಸರಣಿಗೆ ಹಲವು ದಿನಗಳ ಮೊದಲು ಅಭ್ಯಾಸ ಆರಂಭಿಸಿದರೂ, ದೀರ್ಘ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರ ಪರಿಣಾಮ ಲಯ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಾದರೂ ಮಿಂಚುವ ವಿಶ್ವಾಸ ಸದ್ಯ ಅಭಿಮಾನಿಗಳಲ್ಲಿದೆ.

ಮೊದಲ ಪಂದ್ಯದಲ್ಲಿ ಕೊಹ್ಲಿ ರನ್ ಖಾತೆ ತೆರೆಯಲು ವಿಫಲರಾಗಿದ್ದರೆ, ರೋಹಿತ್ ಕೇವಲ 8 ರನ್ ಗಳಿಸಿದ್ದರು. ಇನ್ನೆರಡು ಪಂದ್ಯಗಳು ಅ.23ರಂದು ಆಡಿಲೇಡ್‌ನಲ್ಲಿ, ಆ.25ರಂದು ಸಿಡ್ನಿಯಲ್ಲಿ ನಡೆಯಲಿವೆ. ಈ ಎರಡೂ ಪಂದ್ಯಗಳಲ್ಲಿ ಕೊಹ್ಲಿ ರೋಹಿತ್ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿರುವುದು ತಂಡಕ್ಕೆ ಹಾಗೂ ವೈಯಕ್ತಿಕವಾಗಿಯೂ ಆನಿವಾರ್ಯ. ಇದರಲ್ಲಿ ಮಿಂಚಿದರೆ ಅವರ ನಿವೃತ್ತಿ ಬಗ್ಗೆ ಹರಿದಾಡುತ್ತಿರುವ ಪ್ರಶ್ನೆಗಳು ಸ್ವಲ್ಪ ಸಮಯಕ್ಕಂತೂ ಕಡಿಮೆ ಯಾಗಬಹುದು. ಒಂದು ವೇಳೆ ವಿಫಲವಾದರೆ, ಅವರ ನಿವೃತ್ತಿ ಬಗ್ಗೆ ಕೂಗು ಹೆಚ್ಚಲಿದೆ. ಪ್ರಮುಖವಾಗಿ, ಬಿಸಿಸಿಐನಿಂದಲೇ ನಿವೃತ್ತಿಗೆ ಸೂಚನೆ ಬರುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.

ಕಳೆದ 2 ವರ್ಷ ಕೊಹ್ಲಿ 4, ರೋಹಿತ್ ಶರ್ಮಾ ಕೇವಲ ಒಂದೇ ಶತಕ!

ರೋಹಿತ್ ಶರ್ಮಾರ ಏಕದಿನ ದಾಖಲೆ ಉತ್ತಮವಾಗಿದ್ದರೂ ಕಳೆದ ಎರಡು ವರ್ಷ ಗಳಲ್ಲಿ ಅವರು ಏಕದಿನದಲ್ಲಿ ಒಂದು ಶತಕ ಮಾತ್ರ ಬಾರಿಸಿದ್ದಾರೆ. 2023ರ ಅಕ್ಟೋಬರ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸಿ ಮಾತ್ರ ಮೂರಂಕಿ ಮೊತ್ತ ಗಳಿಸಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ 119 ರನ್ ಸಿಡಿಸಿದ್ದರು. ಉಳಿದ ಕೆಲ ಪಂದ್ಯ ಗಳಲ್ಲಿ ಉತ್ತಮ ಆಟವಾಡಿದ್ದರೂ ಶತಕ ಗಳಿಸಲಾಗಿಲ್ಲ, ಮತ್ತೊಂದೆಡೆ ಕೊಹ್ಲಿ 2023ರ ಅಕ್ಟೋಬರ್‌ನಿಂದ 4 ಶತಕ ಸಿಡಿಸಿದ್ದಾರೆ.