ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದು, ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಈ ಡಕೌಟ್‌ನಿಂದಾಗಿ, ಕೊಹ್ಲಿಯವರ ದೀರ್ಘಕಾಲದ 50+ ಏಕದಿನ ಬ್ಯಾಟಿಂಗ್ ಸರಾಸರಿಯು 50ಕ್ಕಿಂತ ಕೆಳಗೆ ಕುಸಿದಿದೆ. 

ಬೆಂಗಳೂರು: ದೀರ್ಘಕಾಲದ ನಂತರ ಟೀಂ ಇಂಡಿಯಾಗೆ ಮರಳಿದ ಕಿಂಗ್ ವಿರಾಟ್ ಕೊಹ್ಲಿ ಅವರ ಆರಂಭವು ತುಂಬಾ ಕೆಟ್ಟದಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು ಖಾತೆ ತೆರೆಯದೆ ಔಟಾದರು. ಬಹಳ ದಿನಗಳ ನಂತರ ವಿರಾಟ್ ಬ್ಯಾಟ್‌ನಿಂದ ದೊಡ್ಡ ಇನ್ನಿಂಗ್ಸ್ ನೋಡುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಯಿತು. ಮಿಚೆಲ್ ಸ್ಟಾರ್ಕ್ ಅವರ ಅದ್ಭುತ ಎಸೆತಕ್ಕೆ ಉತ್ತರವಿಲ್ಲದೇ ಶೂನ್ಯ ಸುತ್ತಿ ಪೆವಿಲಿಯನ್‌ಗೆ ಮರಳಿದರು. ಪರ್ತ್‌ನಲ್ಲಿ ಔಟಾದ ನಂತರ, ಕೊಹ್ಲಿಯವರ ಏಕದಿನ ವೃತ್ತಿಜೀವನದ ಅಂಕಿಅಂಶಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ಬಹುಶಃ ಅವರು ಕೂಡ ಇದನ್ನು ನಿರೀಕ್ಷಿಸಿರಲಿಲ್ಲ.

ಮಿಚೆಲ್ ಸ್ಟಾರ್ಕ್ ಮುಂದೆ ನಡೆಯಲಿಲ್ಲ ವಿರಾಟ್ ಕೊಹ್ಲಿ ಆಟ!

ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿರುವ ವಿರಾಟ್ ಕೊಹ್ಲಿಯನ್ನು ಏಕದಿನ ಕ್ರಿಕೆಟ್‌ನ ಕಿಂಗ್ ಎಂದು ಕರೆಯಲಾಗುತ್ತದೆ. ಅವರ ಹೆಸರಿನಲ್ಲಿ ಒಟ್ಟು 51 ಶತಕಗಳಿವೆ. ಆದರೆ, ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಬ್ಯಾಟಿಂಗ್‌ಗೆ ಬಂದು 0 ರನ್‌ಗಳಿಗೆ ವಾಪಸಾದರು. ಮಿಚೆಲ್ ಸ್ಟಾರ್ಕ್ ಅವರು ಎಸೆದ ಇನ್ನಿಂಗ್ಸ್‌ನ ಏಳನೇ ಓವರ್‌ನಲ್ಲಿ ಹೊರಗೆ ಹೋಗುತ್ತಿದ್ದ ಚೆಂಡನ್ನು ಕಟ್ ಮಾಡಿ ಬೌಂಡರಿ ಬಾರಿಸುವ ಯತ್ನದಲ್ಲಿ ಅವರು ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿದ್ದ ಫೀಲ್ಡರ್‌ಗೆ ಕ್ಯಾಚ್ ನೀಡಿದರು. ಈ ಮಧ್ಯೆ, ಅವರ ಅಂಕಿಅಂಶಗಳಲ್ಲಿ ದೊಡ್ಡ ಬದಲಾವಣೆಯಾಗಿದೆ.

0ಕ್ಕೆ ಔಟಾಗುತ್ತಿದ್ದಂತೆ ಕೊಹ್ಲಿ ಏಕದಿನ ವೃತ್ತಿಜೀವನದಲ್ಲಿ ಕುಸಿತ!

ಅಂದಹಾಗೆ ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿಯವರ ಏಕದಿನ ವೃತ್ತಿಜೀವನದ ಬ್ಯಾಟಿಂಗ್ ಸರಾಸರಿ 50.04 ಆಗಿತ್ತು. ಆದರೆ, ಈಗ ಅದು 50ಕ್ಕಿಂತ ಕೆಳಗೆ ಇಳಿದಿದೆ. ಆಸ್ಟ್ರೇಲಿಯಾ ವಿರುದ್ಧ 0ಕ್ಕೆ ಔಟಾದ ನಂತರ, ಕೊಹ್ಲಿಯವರ ಸರಾಸರಿ 49.14ಕ್ಕೆ ಇಳಿದಿದೆ. ಇದು ಅವರಿಗೆ ದೊಡ್ಡ ನಷ್ಟವಾಗಿದೆ. ಏಕದಿನ ಕ್ರಿಕೆಟ್‌ನ ಕಿಂಗ್ ವಿರಾಟ್ ಆರಂಭದಿಂದಲೂ 50+ ಸರಾಸರಿಯನ್ನು ಕಾಯ್ದುಕೊಂಡಿದ್ದರು. ಈಗ ಅದಕ್ಕಿಂತ ಕೆಳಗೆ ಬಂದಿರುವುದು ಅವರ ಅಭಿಮಾನಿಗಳಿಗೂ ಆಘಾತ ತಂದಿದೆ. ಅವರು ಬೇಗನೆ ಔಟಾಗಿದ್ದರಿಂದ ಭಾರತಕ್ಕೂ ದೊಡ್ಡ ನಷ್ಟವಾಯಿತು.

ಅತಿಹೆಚ್ಚು ಶೂನ್ಯ ಸುತ್ತಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಕೊಹ್ಲಿ!

ಆಸ್ಟ್ರೇಲಿಯಾ ಎದುರು ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಂದು ಕುಖ್ಯಾತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಇದೀಗ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿ ಇದುವರೆಗೂ ಒಟ್ಟು 39 ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನು 43 ಬಾರಿ ಶೂನ್ಯ ಸುತ್ತಿರುವ ಜಹೀರ್ ಖಾನ್ ಮೊದಲ ಸ್ಥಾನದಲ್ಲಿದ್ದರೇ, 40 ಬಾರಿ ಖಾತೆ ತೆರೆಯುವ ಮೊದಲೇ ವಿಕೆಟ್‌ ಒಪ್ಪಿಸಿದ ಇಶಾಂತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾ ಎದುರು ಕೇವಲ 136ಕ್ಕೆ ಕುಸಿದ ಟೀಂ ಇಂಡಿಯಾ

ವಿರಾಟ್ ಕೊಹ್ಲಿ ಔಟಾದ ಪರಿಣಾಮ ಟೀಂ ಇಂಡಿಯಾ ಮೇಲೂ ಕಂಡುಬಂತು. ಮಳೆಯಿಂದ ಅಡ್ಡಿಪಡಿಸಿದ ಪಂದ್ಯದಲ್ಲಿ ಭಾರತ 26 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು. ವಿರಾಟ್ ಹೊರತುಪಡಿಸಿ, ರೋಹಿತ್ ಶರ್ಮಾ 8, ಶುಭಮನ್ ಗಿಲ್ 10, ಶ್ರೇಯಸ್ ಅಯ್ಯರ್ 11, ವಾಷಿಂಗ್ಟನ್ ಸುಂದರ್ 10, ಹರ್ಷಿತ್ ರಾಣಾ 1 ಮತ್ತು ಅರ್ಷದೀಪ್ ಸಿಂಗ್ 0 ರನ್ ಗಳಿಸಿದರು. ಈ ಸ್ಕೋರ್ ತಲುಪಲು ಕೆಎಲ್ ರಾಹುಲ್ 31 ಎಸೆತಗಳಲ್ಲಿ 38, ಅಕ್ಷರ್ ಪಟೇಲ್ 31 ಮತ್ತು ನಿತೀಶ್ ಕುಮಾರ್ ರೆಡ್ಡಿ 11 ಎಸೆತಗಳಲ್ಲಿ 19 ರನ್‌ಗಳ ಕೊಡುಗೆ ನೀಡಿದರು.

ಇನ್ನು ಡೆಕ್ವರ್ತ್ ಲೂಯಿಸ್ ನಿಯಮದನ್ವಯ ಆಸ್ಟ್ರೇಲಿಯಾಗೆ ಕೇವಲ 131 ರನ್ ಗುರಿ ಸಿಕ್ಕಿತು. ಈ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 3 ವಿಕೆಟ್ ಕಳೆದುಕೊಂಡು ಅನಾಯಾಸವಾಗಿ ಗೆಲುವಿನ ನಗೆ ಬೀರಿತು.