ಮೂರನೇ ಟಿ20 ಪಂದ್ಯದಲ್ಲಿ, ಆರಂಭಿಕ ಕುಸಿತದ ಹೊರತಾಗಿಯೂ ಟಿಮ್ ಡೇವಿಡ್ (74) ಮತ್ತು ಮಾರ್ಕಸ್ ಸ್ಟೋನಿಸ್ (64) ಅವರ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ಚೇತರಿಸಿಕೊಂಡಿತು. ಅಂತಿಮವಾಗಿ, ಆಸ್ಟ್ರೇಲಿಯಾ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 186 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿದೆ.
ಹೋಬಾರ್ಟ್: ಟಿಮ್ ಡೇವಿಡ್ ಹಾಗೂ ಮಾರ್ಕಸ್ ಸ್ಟೋನಿಸ್ ಬಾರಿಸಿದ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವು ಮೂರನೇ ಟಿ20 ಪಂದ್ಯದಲ್ಲಿ ಬೃಹತ್ ಮೊತ್ತ ಕಲೆಹಾಕಿದೆ. ಮಿಚೆಲ್ ಮಾರ್ಷ್ ನೇತೃತ್ವದ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ ಬಾರಿಸಿದ್ದು, ಭಾರತಕ್ಕೆ ಸವಾಲಿನ ಗುರಿ ನೀಡಿದೆ.
ಆಸ್ಟ್ರೇಲಿಯಾಗೆ ಆರಂಭಿಕ ಆಘಾತ
ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಅರ್ಶದೀಪ್ ಸಿಂಗ್ ಶಾಕ್ ನೀಡಿದರು. ಮೊದಲೆರಡು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಅರ್ಶದೀಪ್ ಸಿಂಗ್, ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲೇ ಟ್ರ್ಯಾವಿಸ್ ಹೆಡ್(6) ವಿಕೆಟ್ ಕಬಳಿಸಿದರು. ಇನ್ನು ಅರ್ಶದೀಪ್ ಎಸೆದ ಎರಡನೇ ಓವರ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಶ್(1)ಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ ತಾನೆಷ್ಟು ಅಪಾಯಕಾರಿ ಬೌಲರ್ ಎನ್ನುವುದನ್ನು ಮತ್ತೊಮ್ಮೆ ಅನಾವರಣ ಮಾಡಿದರು.
ಇನ್ನು ನಾಯಕ ಮಿಚೆಲ್ ಮಾರ್ಷ್(11) ಹಾಗೂ ಮಿಚೆಲ್ ಓವನ್ ಅವರನ್ನು(0) ಸತತ ಎರಡು ಎಸೆತಗಳಲ್ಲಿ ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿ ಬಲಿ ಪಡೆಯುವ ಮೂಲಕ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಒಂದು ಹಂತದಲ್ಲಿ ಆಸ್ಟ್ರೇಲಿಯಾ ತಂಡವು 73 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು.
ಗುಡುಗಿದ ಟಿಮ್ ಡೇವಿಡ್-ಮಾರ್ಕಸ್ ಸ್ಟೋನಿಸ್:
ಆರಂಭಿಕ ವಿಕೆಟ್ ಪತನದಿಂದ ಕಂಗಾಲಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಟಿಮ್ ಡೇವಿಡ್ ಹಾಗೂ ಮಾರ್ಕಸ್ ಸ್ಟೋನಿಸ್ ಆಸರೆಯಾದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಟಿಮ್ ಡೇವಿಡ್ ಕೇವಲ 38 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಸ್ಪೋಟಕ 74 ರನ್ ಸಿಡಿಸಿ ಶಿವಂ ದುಬೆಗೆ ವಿಕೆಟ್ ಒಪ್ಪಿಸಿದರು.
ಇನ್ನು ಮತ್ತೋರ್ವ ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ ಕೂಡಾ ವಿಸ್ಪೋಟಕ ಅರ್ಧಶತಕ ಸಿಡಿಸಿದರು. ಸ್ಟೋನಿಸ್ ಕೇವಲ 39 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 64 ರನ್ ಸಿಡಿಸಿ ಅರ್ಶದೀಪ್ ಸಿಂಗ್‌ಗೆ ಮೂರನೇ ಬಲಿಯಾದರು.
