2025ರ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿದ ಭಾರತ, ಒಂಬತ್ತನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಪಂದ್ಯದ ನಂತರ, ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರ ಸಂಭ್ರಮಾಚರಣೆಯನ್ನು ಭಾರತೀಯ ಆಟಗಾರರು ಅನುಕರಿಸಿ ಟ್ರೋಲ್ ಮಾಡಿದ್ದಾರೆ.

ದುಬೈ: 2025ರ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ಎದುರು ಟೀಂ ಇಂಡಿಯಾ 5 ವಿಕೆಟ್ ಅಂತರದ ರೋಚಕ ಜಯ ಸಾಧಿಸಿದೆ. ಈ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಒಂಬತ್ತನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. 

ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಎರಡು ಎಸೆತ ಬಾರಿ ಇರುವಂತೆಯೇ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಇನ್ನು ಪಂದ್ಯ ಮುಗಿಯುತ್ತಿದ್ದಂತೆಯೇ ಟೀಂ ಇಂಡಿಯಾ ಆಟಗಾರರು, ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರ ಮಿಮಿಕ್ರಿ ಮಾಡುವ ಮೂಲಕ ಟ್ರೋಲ್ ಮಾಡಿದ್ದಾರೆ.

Scroll to load tweet…

ಭಾರತೀಯ ಆಟಗಾರರನ್ನು ಟ್ರೋಲ್ ಮಾಡಿದ್ದ ಅಬ್ರಾರ್ ಅಹ್ಮದ್!

ಇನ್ನು ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್, ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡಿದ್ದರು. ಇದಾದ ಬಳಿಕ ಅಬ್ರಾರ್ 'ಮನೆಗೆ ಹೋಗು' ಎನ್ನುವಂತಹ ಸಿಗ್ನೇಚರ್ ಸ್ಟೈಲ್ ಸೆಲಿಬ್ರೇಷನ್ ಮಾಡಿದ್ದರು. ಅಂದಹಾಗೆ ಅಬ್ರಾರ್ ಅಹ್ಮದ್ ತಮ್ಮ ಬೌಲಿಂಗ್‌ನಲ್ಲಿ ವಿಕೆಟ್ ಬಿದ್ದಾಗ ಎದುರಾಳಿ ಬ್ಯಾಟರ್‌ ಅವರನ್ನು ಪೆವಿಲಿಯನ್‌ಗೆ ಹೋಗು ಎನ್ನುವಂತೆ ಸೂಚಿಸುವ ಸೆಲಿಬ್ರೇಷನ್ ಮಾಡುತ್ತಾ ಬಂದಿದ್ದಾರೆ. ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಟೀಂ ಇಂಡಿಯಾ ಬಗ್ಗುಬಡಿಯುತ್ತಿದ್ದಂತೆಯೇ ಭಾರತೀಯ ಆಟಗಾರರಾದ ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್ ಹಾಗೂ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸಂಜು ಸ್ಯಾಮ್ಸನ್ ಎದುರುಗಡೆ ಅಬ್ರಾರ್ ರೀತಿ ಸೆಲಿಬ್ರೇಷನ್ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Scroll to load tweet…

ಹ್ಯಾರಿಸ್ ರೌಫ್‌ ಬಾಯಿ ಮುಚ್ಚಿಸಿದ ಬುಮ್ರಾ ಸೆಲಿಬ್ರೇಷನ್!

ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ. ಏಷ್ಯಾಕಪ್‌ ಫೈನಲ್‌ನಲ್ಲಿ ಬುಮ್ರಾ ಪಾಕಿಸ್ತಾನ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರನ್ನು ಕರಾರುವಕ್ಕಾದ ಯಾರ್ಕರ್ ಹಾಕಿ ಕ್ಲೀನ್ ಬೌಲ್ಡ್ ಮಾಡಿದರು. ಹ್ಯಾರಿಸ್ ರೌಫ್ ವಿಕೆಟ್ ಪಡೆಯುತ್ತಿದ್ದಂತೆಯೇ ಜಸ್ಪ್ರೀತ್ ಬುಮ್ರಾ, ಜೆಟ್ ಪತನದ ಆಕ್ಷನ್ ಮಾಡುವ ಮೂಲಕ ಪಾಕ್ ವೇಗಿಗೆ ಮುಟ್ಟಿನೋಡಿಕೊಳ್ಳುವಂತ ಉತ್ತರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆಗ ಬೌಂಡರಿ ಲೈನ್‌ ಬಳಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಹ್ಯಾರಿಸ್ ರೌಫ್ ಅವರನ್ನು ಭಾರತೀಯ ಅಭಿಮಾನಿಗಳು ಕೊಹ್ಲಿ, ಕೊಹ್ಲಿ ಎಂದು ಕೂಗುತ್ತಿದ್ದರು. ಆಗ ರೌಫ್‌ ಅಭಿಮಾನಿಗಳ ಕಡೆ ತಿರುಗಿ ಫೈಟರ್ ಜೆಟ್ ಕ್ರ್ಯಾಷ್ ಆಗುವ ರೀತಿಯ ಆಕ್ಟ್ ಮಾಡಿದ್ದರು. ಈ ತಪ್ಪಿಗೆ ವೇಗಿ ಹ್ಯಾರಿಸ್ ರೌಫ್‌ಗೆ ಪಂದ್ಯದ ಸಂಭಾವನೆಯ 30% ದಂಡ ವಿಧಿಸಲಾಗಿತ್ತು.

ಭಾರತಕ್ಕೆ ರೋಚಕ ಜಯ:

ಇಲ್ಲಿನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ಸ್ಪೋಟಕ ಆರಂಭ ಪಡೆಯಿತು. 113 ರನ್‌ಗಳವರೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ತಂಡವು ಆ ಬಳಿಕ ನಾಟಕೀಯ ಕುಸಿತ ಕಂಡಿತು. ಪರಿಣಾಮ ಕೇವಲ 19.1 ಓವರ್‌ಗಳಲ್ಲಿ 146 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ ಪರ ಕುಲ್ದೀಪ್ ಯಾದವ್ 4 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ ವಿಕೆಟ್ ಕಬಳಿಸಿದರು.

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ 20 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿತ್ತು. ಆದರೆ ತಿಲಕ್ ವರ್ಮಾ ಅಜೇಯ ಅರ್ಧಶತಕ ಸಿಡಿಸುವ ಮೂಲಕ ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.