ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಗೆ ಶುಭ್‌ಮನ್ ಗಿಲ್ ಭಾರತ ತಂಡದ ನಾಯಕರಾಗಿ ಆಯ್ಕೆಯಾಗಿದ್ದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ನಾಯಕತ್ವದಡಿ ಆಡಲಿದ್ದಾರೆ. ಐದು ಪಂದ್ಯಗಳ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ.
ಮುಂಬೈ: ಆಸ್ಟ್ರೇಲಿಯಾ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ಶುಭ್‌ಮನ್ ಗಿಲ್‌ಗೆ ಪಟ್ಟ ಕಟ್ಟಲಾಗಿದೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, 2027ರ ವರೆಗೆ ಭಾರತ ಏಕದಿನ ತಂಡದ ನಾಯಕನಾಗಿ ಮುಂದುವರೆಯಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.
ಭಾರತ ತಂಡವು ಈ ತಿಂಗಳಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆಸೀಸ್ ಎದುರು ಅಕ್ಟೋಬರ್ 19, 23 ಹಾಗೂ 25ರಂದು ಕ್ರಮವಾಗಿ ಪರ್ತ್, ಅಡಿಲೇಡ್ ಹಾಗೂ ಸಿಡ್ನಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇದೀಗ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ಗೆ ಮರಳಿದ್ದಾರೆ. ಆದರೆ ಗಿಲ್ ನಾಯಕತ್ವದಡಿ ಈ ಇಬ್ಬರು ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಳೆದ ಮಾರ್ಚ್‌ನಲ್ಲಿ ಭಾರತ ಪರ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಇದೀಗ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಶುಭ್‌ಮನ್ ಗಿಲ್ ಏಕದಿನ ತಂಡದ ನಾಯಕರಾಗಿ ನೇಮಕವಾಗಿದ್ದು, ಶ್ರೇಯಸ್ ಅಯ್ಯರ್ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನುಳಿದಂತೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆ ಎಲ್ ರಾಹುಲ್ ಹಾಗೂ ಧ್ರುವ್ ಜುರೆಲ್ ಆಯ್ಕೆಯಾಗಿದ್ದಾರೆ. ಇನ್ನು ಬ್ಯಾಕ್‌ಅಪ್ ಓಪನ್ನರ್ ಆಗಿ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆದಿದ್ದಾರೆ.
ರೋಹಿತ್ ಶರ್ಮಾ ನಾಯಕನಾಗಿ ಯುಗಾಂತ್ಯ:
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರ ನಾಯಕತ್ವ ಯುಗಾಂತ್ಯವಾಗಿದೆ. ಕಳೆದ ವರ್ಷ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿತ್ತು. ಇದಾದ ಬಳಿಕ ಭಾರತ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೂಡಾ ರೋಹಿತ್ ನಾಯಕತ್ವದಲ್ಲೇ ಜಯಿಸಿತ್ತು. ಇದೆಲ್ಲದರ ಹೊರತಾಗಿ ರೋಹಿತ್ ಶರ್ಮಾ ಕೆಳಗಿಳಿಸಿ ಶುಭ್‌ಮನ್ ಗಿಲ್‌ಗೆ ಬಿಸಿಸಿಐ ನಾಯಕತ್ವ ಪಟ್ಟ ಕಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.
ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ
ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ದಾಳಿಯ ಮುಂಚೂಣಿ ವಹಿಸಲಿದ್ದಾರೆ. ಇವರಿಗೆ ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ ಪ್ರಸಿದ್ದ್ ಕೃಷ್ಣ ಸಾಥ್ ನೀಡಲಿದ್ದಾರೆ. ಇನ್ನು ಆಲ್ರೌಂಡರ್ ರೂಪದಲ್ಲಿ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆದಿದ್ದಾರೆ. ಕುಲ್ದೀಪ್ ಯಾದವ್ ತಂಡದಲ್ಲಿರುವ ಏಕೈಕ ತಜ್ಞ ಸ್ಪಿನ್ನರ್ ಎನಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸ ಮುಗಿಯುತ್ತಿದ್ದಂತೆಯೇ ಭಾರತ ತಂಡವು ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಪಂದ್ಯವು ನವೆಂಬರ್ 14ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಹೀಗಾಗಿ ಮಹತ್ವದ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿಯು ಬುಮ್ರಾಗೆ ರೆಸ್ಟ್ ನೀಡಿದೆ.
ಇನ್ನು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಅಕ್ಟೋಬರ್ 29ರಿಂದ ನವೆಂಬರ್ 08ರ ವರೆಗೆ ನಡೆಯಲಿದೆ. ಈ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಸೂರ್ಯಕುಮಾರ್ ಯಾದವ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು, ಗಿಲ್ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿದ ತಂಡವೇ ಇದೀಗ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯಲ್ಲೂ ಕಣಕ್ಕಿಳಿಯಲಿದೆ.
ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ಭಾರತ ತಂಡ ಹೀಗಿದೆ:
ಶುಭ್‌ಮನ್ ಗಿಲ್(ನಾಯಕ), ಶ್ರೇಯಸ್ ಅಯ್ಯರ್(ಉಪನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್(ವಿಕೆಟ್ ಕೀಪರ್,), ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಪ್ರಸಿದ್ದ್ ಕೃಷ್ಣ.
ಅಸ್ಟ್ರೇಲಿಯಾ ಎದುರಿನ ಟಿ20 ಸರಣಿಗೆ ಭಾರತ ತಂಡ:
ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್.
