ಏಷ್ಯಾ ಕಪ್‌ನಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್‌ಗೆ ಭಾರತ 'ಎ' ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಆಸ್ಟ್ರೇಲಿಯಾ 'ಎ' ವಿರುದ್ಧದ ಸರಣಿಯಲ್ಲಿ ಮಿಂಚುವ ಮೂಲಕ ಮತ್ತೆ ಭಾರತ ತಂಡಕ್ಕೆ ಮರಳುವ ಅವಕಾಶ ಅವರ ಮುಂದಿದೆ. ರಾಹುಲ್ ಮತ್ತು ಸಿರಾಜ್ ಸಹ ತಂಡ ಸೇರಿಕೊಳ್ಳಲಿದ್ದಾರೆ.

ಬೆಂಗಳೂರು (ಸೆ.06): ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಆಯ್ಕೆ ಆಗದೇ ನಿರಾಶೆ ಅನುಭವಿಸಿದ್ದ ಭಾರತದ ಪ್ರತಿಭಾವಂತ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್‌ಗೆ ಇದೀಗ ಮಹತ್ವದ ಜವಾಬ್ದಾರಿ ಸಿಕ್ಕಿದೆ. ಆಸ್ಟ್ರೇಲಿಯಾ 'ಎ' ವಿರುದ್ಧ ನಡೆಯಲಿರುವ ಎರಡು ದಿನಗಳ (ಮಲ್ಟಿ-ಡೇ) ಪಂದ್ಯಗಳಿಗೆ ಭಾರತ 'ಎ' ತಂಡದ ನಾಯಕನಾಗಿ ಬಿಸಿಸಿಐ ಶ್ರೇಯಸ್ ಅಯ್ಯರ್ ಅವರನ್ನು ನೇಮಕ ಮಾಡಿದೆ. ಈ ಸರಣಿ ಸೆಪ್ಟೆಂಬರ್ 16ರಿಂದ ಲಖನೌನಲ್ಲಿ ಪ್ರಾರಂಭವಾಗಲಿದೆ.

ತಂಡದ ರಚನೆ: ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ-ಎ ತಂಡದಲ್ಲಿ ಹಲವು ಯುವ ಪ್ರತಿಭೆಗಳ ಜೊತೆಗೆ ಅನುಭವಿಗಳೂ ಸೇರಿದ್ದಾರೆ. ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್ ಧ್ರುವ್ ಜುರೇಲ್ ಉಪನಾಯಕನಾಗಿ ಆಯ್ಕೆಗೊಂಡಿದ್ದಾರೆ. ದೇವದತ್ತ ಪಡಿಕ್ಕಲ್, ಸಾಯಿ ಸುಧರ್ಶನ್, ಪ್ರಸಿದ್ಧ ಕೃಷ್ಣ, ಖಲೀಲ್ ಅಹ್ಮದ್ ಮುಂತಾದವರು ತಂಡದಲ್ಲಿದ್ದಾರೆ. ಆಸ್ಟ್ರೇಲಿಯಾ 'ಎ' ವಿರುದ್ಧ ತಮ್ಮ ಸಾಮರ್ಥ್ಯ ತೋರಿಸಲು ಈ ಆಟಗಾರರಿಗೆ ಬಂಗಾರದಂತ ಅವಕಾಶ ಲಭಿಸಿದೆ.

ಅಯ್ಯರ್‌ಗೆ ಪುನರ್‌ ಪ್ರವೇಶದ ದಾರಿ?

ಅಯ್ಯರ್‌ಗಾಗಿ ಈ ನಾಯಕತ್ವವು ಒಂದು ರೀತಿಯಲ್ಲಿ ಸೀನಿಯರ್ ತಂಡಕ್ಕೆ ಮರಳುವ ಹೆಜ್ಜೆಯಾಗಿ ಕಾಣಲಾಗುತ್ತಿದೆ. ಕೊನೆಯದಾಗಿ ಅವರು ಫೆಬ್ರವರಿ 2024ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಿದ್ದರು. ನಂತರ ತಂಡದಿಂದ ಹೊರಗುಳಿದಿದ್ದರೂ, ದೇಸಿ ಕ್ರಿಕೆಟ್‌ನಲ್ಲಿ ಅಯ್ಯರ್ ಮಿಂಚಿದ್ದರು. ರಣಜಿ ಟ್ರೋಫಿ 2024-25ರಲ್ಲಿ ಮುಂಬೈ ಪರ 7 ಇನ್ನಿಂಗ್ಸ್‌ಗಳಲ್ಲಿ 68.57 ಸರಾಸರಿ ಸಾಧಿಸಿ 480 ರನ್ ಗಳಿಸಿದ್ದರು. ಇದರಲ್ಲಿ ಎರಡು ಶತಕಗಳೂ ಸೇರಿವೆ.

ರಾಹುಲ್–ಸಿರಾಜ್ ಸೇರ್ಪಡೆ

ಆಸ್ಟ್ರೇಲಿಯಾ 'ಎ' ವಿರುದ್ಧದ ಮೊದಲ ಮಲ್ಟಿ-ಡೇ ಪಂದ್ಯ ಮುಗಿದ ಬಳಿಕ, ಸ್ಟಾರ್ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಇವರು ಇಬ್ಬರು ಸೇರಿದ ನಂತರ ತಂಡದ ಸಂಯೋಜನೆ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

Scroll to load tweet…

ಒಡಿಐ ಸರಣಿಯೂ ಎದುರು

ಈ ಎರಡು ಸರಣಿ ಪಂದ್ಯಗಳ ನಂತರ, ಭಾರತ 'ಎ' ಮತ್ತು ಆಸ್ಟ್ರೇಲಿಯಾ 'ಎ' ನಡುವೆ ಮೂರು ಏಕದಿನ (ಒಡಿಐ) ಪಂದ್ಯಗಳ ಸರಣಿಯೂ ನಡೆಯಲಿದೆ. ಸೆಪ್ಟೆಂಬರ್ 30, ಅಕ್ಟೋಬರ್ 3 ಮತ್ತು ಅಕ್ಟೋಬರ್ 5ರಂದು ಈ ಪಂದ್ಯಗಳು ಕಾನ್ಪುರದಲ್ಲಿ ನಡೆಯಲಿವೆ. ಈ ಸರಣಿಗೆ ತಂಡದ ಘೋಷಣೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಇನ್ನೂ ರೋಚಕವೆಂದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡಾ ಈ ಸರಣಿಯಲ್ಲಿ ಆಡಬಹುದು ಎಂಬ ಅಂದಾಜು ಮಾಡಲಾಗಿದೆ.

ತಂಡದಲ್ಲಿ ಅನುಭವಿ ಮತ್ತು ಯುವ ಆಟಗಾರರು

ಅಯ್ಯರ್ ಅವರ ನಾಯಕತ್ವದಲ್ಲಿ ಭಾರತ 'ಎ' ತಂಡವು ಅನುಭವಿ ಹಾಗೂ ಯುವ ಪ್ರತಿಭೆಗಳ ಉತ್ತಮ ಮಿಶ್ರಣವನ್ನು ಹೊಂದಿದೆ. ತಂಡದಲ್ಲಿ ವಿಕೆಟ್‌ಕೀಪರ್ ಬ್ಯಾಟರ್‌ಗಳಾದ ಎನ್. ಜಗದೀಸನ್ ಮತ್ತು ಧ್ರುವ ಜುರೆಲ್ ಇದ್ದು, ಜುರೆಲ್ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಕರ್ನಾಟಕದ ಪ್ರತಿಭಾವಂತ ಆಟಗಾರರಾದ ದೇವದತ್ ಪಡಿಕ್ಕಲ್ ಮತ್ತು ಪ್ರಸಿದ್ಧ ಕೃಷ್ಣ ಕೂಡ ತಂಡದ ಭಾಗವಾಗಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಖಲೀಲ್ ಅಹ್ಮದ್ ಮತ್ತು ಯಶ್ ಠಾಕೂರ್ ಇದ್ದರೆ, ಸ್ಪಿನ್ನರ್‌ಗಳಾದ ತನುಷ್ ಕೋಟಿಯಾನ್, ಮಾನುಷ್ ಸುತಾರ್ ಮತ್ತು ಹರ್ಷ್ ದುಬೆ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಭಾರತ ‘ಎ’ ತಂಡ (ಮಲ್ಟಿ-ಡೇ ಪಂದ್ಯಗಳಿಗೆ):

  • ಶ್ರೇಯಸ್ ಅಯ್ಯರ್ (ಕ್ಯಾಪ್ಟನ್)
  • ಅಭಿಮನ್ಯು ಈಶ್ವರನ್
  • ಎನ್. ಜಗದೀಶನ್ (ವಿಕೆಟ್‌ಕೀಪರ್)
  • ಸಾಯಿ ಸುಧರ್ಶನ್
  • ಧ್ರುವ್ ಜುರೇಲ್ (ಉಪನಾಯಕ ಮತ್ತು ವಿಕೆಟ್‌ಕೀಪರ್)
  • ದೇವದತ್ತ ಪಡಿಕ್ಕಲ್
  • ಹರ್ಷ ದುಬೆ
  • ಆಯುಷ್ ಬಡೋನಿ
  • ನಿತೀಶ್ ಕುಮಾರ್ ರೆಡ್ಡಿ
  • ತನುಷ್ ಕೋಟಿಯನ್
  • ಪ್ರಸಿದ್ಧ ಕೃಷ್ಣ
  • ಗುರುನೂರ್ ಬರಾಡ್
  • ಖಲೀಲ್ ಅಹ್ಮದ್
  • ಮಾನವ ಸುಥಾರ್
  • ಯಶ್ ಠಾಕೂರ್