ಪಾಕಿಸ್ತಾನ ಏಕದಿನ ತಂಡದ ನಾಯಕತ್ವದಿಂದ ಮೊಹಮ್ಮದ್ ರಿಜ್ವಾನ್‌ರನ್ನು ಕೆಳಗಿಳಿಸಲಾಗಿದ್ದು, ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರನ್ನು ಹೊಸ ನಾಯಕರನ್ನಾಗಿ ನೇಮಿಸಲಾಗಿದೆ. ಕೋಚ್ ಮೈಕ್ ಹೆಸ್ಸನ್ ಅವರ ಮನವಿಯ ಮೇರೆಗೆ ದಕ್ಷಿಣ ಆಫ್ರಿಕಾ ಸರಣಿಗೆ ಮುನ್ನ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕರಾಚಿ: ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ರನ್ನು ಪಾಕಿಸ್ತಾನ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನದ ಹೊಸ ನಾಯಕ. ನವೆಂಬರ್ 4 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ರಿಜ್ವಾನ್‌ರನ್ನು ನಾಯಕತ್ವದಿಂದ ವಜಾಗೊಳಿಸಲಾಗಿದೆ. ರಿಜ್ವಾನ್‌ರನ್ನು ನಾಯಕತ್ವದಿಂದ ತೆಗೆದುಹಾಕುವಂತೆ ಪಾಕ್ ಕೋಚ್ ಮೈಕ್ ಹೆಸ್ಸನ್ ಪಾಕ್ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದರು.
ಮೊಹಮ್ಮದ್ ರಿಜ್ವಾನ್‌ಗೆ ಶಾಕ್ ಕೊಟ್ಟ ಪಿಸಿಬಿ
ರಿಜ್ವಾನ್ ಮತ್ತು ಶಾಹೀನ್ ಅಫ್ರಿದಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಆಡುತ್ತಿದ್ದಾಗಲೇ, ಪಾಕ್ ಕ್ರಿಕೆಟ್ ಮಂಡಳಿ ಏಕದಿನ ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿತು. ರಿಜ್ವಾನ್‌ರನ್ನು ವಜಾಗೊಳಿಸಲು ಮಂಡಳಿ ಯಾವುದೇ ಕಾರಣ ನೀಡಿಲ್ಲ. ಆಯ್ಕೆ ಸಮಿತಿ ಮತ್ತು ವೈಟ್ ಬಾಲ್ ಕೋಚ್ ಮೈಕ್ ಹೆಸ್ಸನ್ ನಡುವಿನ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವರ್ಷ ಜನವರಿಯಲ್ಲಿ ಶಾಹೀನ್ ಶಾ ಅಫ್ರಿದಿಯನ್ನು ಪಾಕ್ ಟಿ20 ತಂಡದ ನಾಯಕನಾಗಿ ಆಯ್ಕೆ ಮಾಡಲಾಗಿತ್ತು, ಆದರೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಾಕಿಸ್ತಾನ 1-4 ಅಂತರದಲ್ಲಿ ಸೋತಿದ್ದರಿಂದ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಗಿತ್ತು. ನಂತರ ಬಾಬರ್ ಅಜಮ್ ಅವರನ್ನು ಮತ್ತೆ ನಾಯಕರನ್ನಾಗಿ ಮಾಡಲಾಯಿತು. ರಿಜ್ವಾನ್ ನಾಯಕತ್ವದಲ್ಲಿ ಪಾಕಿಸ್ತಾನ 2024ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿಗಳನ್ನು ಗೆದ್ದಿತ್ತು. ಆದರೆ ಈ ವರ್ಷದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಸೆಮಿಫೈನಲ್ ತಲುಪದೆ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡವು 9 ಗೆಲುವು ಹಾಗೂ 11 ಸೋಲು ಕಂಡಿತ್ತು.
ಎರಡನೇ ಬಾರಿಗೆ ಅಫ್ರಿದಿಗೆ ನಾಯಕ ಪಟ್ಟ
ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನ ತಂಡದ ನಾಯಕರಾಗುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು 2024ರಲ್ಲಿ ಶಾಹೀನ್ ಅಫ್ರಿದಿ ಪಾಕಿಸ್ತಾನ ಟಿ20 ತಂಡದ ನಾಯಕರಾಗಿ ನೇಮಕವಾಗಿದ್ದರು. ಆದರೆ ತವರಿನಾಚೆ ಕಿವೀಸ್ ಎದುರಿನ ಐದು ಪಂದ್ಯಗಳ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಗೆದ್ದು ನಾಲ್ಕರಲ್ಲಿ ಸೋತು ಮುಖಭಂಗ ಅನುಭವಿಸಿತ್ತು. ಹೀಗಾಗಿ ಶಾಹೀನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಇದೀಗ ಸದ್ಯ ಪಾಕಿಸ್ತಾನ ಟಿ20 ತಂಡದ ನಾಯಕರಾಗಿ ಸಲ್ಮಾನ್ ಅಲಿ ಅಘಾ ಮುನ್ನಡೆಸುತ್ತಿದ್ದಾರೆ.
ಶಾಹೀನ್ ಶಾ ಅಫ್ರಿದಿ ಸದ್ಯ ಪಾಕಿಸ್ತಾನ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಪಾಕಿಸ್ತಾನ ಸೀಮಿತ ಓವರ್‌ಗಳ ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ದಾಳಿಯ ಮುಂಚೂಣಿ ವಹಿಸುತ್ತಾ ಬಂದಿದ್ದಾರೆ. ಶಾಹೀನ್ ಅಫ್ರಿದಿ ಇಲ್ಲಿಯವರೆಗೆ ಪಾಕಿಸ್ತಾನ ಪರ ಮೂರು ಮಾದರಿಯ ಕ್ರಿಕೆಟ್‌ನಿಂದ 194 ವಿಕೆಟ್ ಕಬಳಿಸಿದ್ದಾರೆ.
