ಇಂಡೋ ಪಾಕ್ ಫೈನಲ್ ಆರಂಭದಲ್ಲೇ ಹೈಡ್ರಾಮ, ರವಿ ಶಾಸ್ತ್ರಿ-ವಕಾರ್ ಇಬ್ಬರು ಟಾಸ್ ಪ್ರೆಸೆಂಟರ್ ಬಳಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಟಾಸ್ ಪ್ರಕ್ರಿಯೆಗೆ ಇಬ್ಬರು ನಿರೂಪಕರ ಬಳಕೆ ಮಾಡಲಾಗಿದೆ. ಇದರ ಹಿಂದೆ ಪಾಕಿಸ್ತಾನದ ಬಹಿಷ್ಕಾರದ ಕತೆ ಇದೆ.

ದುಬೈ (ಸೆ.28) ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಫೈನಲ್ ಪಂದ್ಯ ಆರಂಭದಲ್ಲೇ ಹೈಡ್ರಾಮ ನಡೆದಿದೆ. ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕ್ರಿಕೆಟ್ ಟಾಸ್ ಪ್ರಕ್ರಿಯೆ ವೇಳೆ ಇಬ್ಬರು ನಾಯಕರು, ಟಾಸ್ ಪ್ರಕ್ರಿಯೆ ನಡೆಸಿಕೊಡುವ ಪ್ರಸೆಂಟರ್, ಮ್ಯಾಚ್ ರೆಫ್ರಿ ಇರುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಟಾಸ್ ಪ್ರಕ್ರಿಯೆಗೆ ಇಬ್ಬರು ಪ್ರೆಸೆಂಟರ್ ಬಳಕೆ ಮಾಡಲಾಗಿದೆ. ಕಮೆಂಟೇಟರ್ ರವಿ ಶಾಸ್ತ್ರಿ ಹಾಗೂ ವಕಾರ್ ಯೂನಿಸ್ ಇಬ್ಬರು ಟಾಸ್ ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ. ಇದರ ಹಿಂದೆ ಪಾಕಿಸ್ತಾನ ಬಹಿಷ್ಕಾರದ ಕತೆಯೊಂದಿದೆ.

ಇದೇ ಮೊದಲ ಬಾರಿಗೆ ಇಬ್ಬರು ಪ್ರೆಸೆಂಟರ್

ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಪ್ರಸೆಂಟರ್ ಮೂಲಕ ಟಾಸ್ ಪ್ರಕ್ರಿಯೆ ನಡೆಸಲಾಗಿದೆ. ಪಾಕಿಸ್ತಾನ ತಂಡದ ಜೊತೆಗೆ ಭಾರತ ಹ್ಯಾಂಡ್‌ಶೇಕ್ ನಿರಾಕರಿಸಿದ ಕಾರಣ, ಫೈನಲ್ ಪಂದ್ಯಕ್ಕೆ ಪಾಕಿಸ್ತಾನ ಕೂಡ ಭಾರತದ ಪ್ರೆಸೆಂಟರ್ ಜೊತೆ ಮಾತನಾಡಲು ನಿರಾಕರಿಸಿದೆ. ಹೀಗಾಗಿ ಪಾಕಿಸ್ತಾನ ನಾಯಕನ ಮಾತನಾಡಿಸಲು ಪಾಕಿಸ್ತಾನದ ಕಮೆಂಟೇಟರ್ ವಕಾರ್ ಯೂನಿಸ್ ಕರೆತರಲಾಗಿತ್ತು. ಇತ್ತ ಸೂರ್ಯಕುಮಾರ್ ಮಾತನಾಡಿಸಲು ರವಿ ಶಾಸ್ತ್ರಿಯನ್ನು ಬಳಸಿಕೊಳ್ಳಲಾಗಿದೆ.

ಮೂರನೇ ವ್ಯಕ್ತಿ ಪ್ರೆಸೆಂಟರ್ ಮಾಡಲು ಪಾಕಿಸ್ತಾನ ಆಗ್ರಹ

ಟಾಸ್ ಪ್ರಕ್ರಿಯೆ ವೇಳೆ ಭಾರತದ ವ್ಯಕ್ತಿ ಜೊತೆ ಮಾತನಾಡಲು ಪಾಕಿಸ್ತಾನ ಕ್ರಿಕೆಟ್ ತಂಡ ನಿರಾಕರಿಸಿದೆ. ಇಷ್ಟೇ ಅಲ್ಲ ಮೂರನೇ ದೇಶದ ವ್ಯಕ್ತಿ ಪ್ರೆಸೆಂಟರ್ ಆಗಿ ಬಳಕೆ ಮಾಡಲು ಪಾಕಿಸ್ತಾನ ಆಗ್ರಹಿಸಿತ್ತು. ಇದರ ಬದಲು ಭಾರತ ಹಾಗೂ ಪಾಕಿಸ್ತಾನ ಇಬ್ಬರನ್ನು ಟಾಸ್ ಪ್ರೆಸೆಂಟರ್‌ಗಾಗಿ ಬಳಕೆ ಮಾಡಲಾಗಿದೆ.

ಶಾಸ್ತ್ರಿ ಬದಲಿಸಲು ಸಾಧ್ಯವಿಲ್ಲ ಎಂದ ಬಿಸಿಸಿಐ

ಮೂರನೇ ದೇಶದ ವ್ಯಕ್ತಿಯನ್ನು ಪ್ರೆಸೆಂಟರ್ ಆಗಿ ಬಳಕೆ ಮಾಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಏಷ್ಯನ್ ಕೌನ್ಸಿಲ್‌ಗೆ ಮನವಿ ಮಾಡಿತ್ತು. ಈ ಕುರಿತು ಏಷ್ಯನ್ ಕೌನ್ಸಿಲ್ ಬಿಸಿಸಿಐ ಸಂಪರ್ಕಿಸಿತ್ತು. ಆದರೆ ಬಿಸಿಸಿಐ ಪಾಕಿಸ್ತಾನ ಮನವಿಗೆ ಖಡಕ್ ಉತ್ತರ ನೀಡಿತ್ತು. ಟಾಸ್ ಪ್ರಸೆಂಟರ್ ಸ್ಥಾನದಿಂದ ರವಿ ಶಾಸ್ತ್ರಿಯನ್ನು ಬದಲಿಸಲು ಸಾಧ್ಯವಿಲ್ಲ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿತ್ತು. ರವಿ ಶಾಸ್ತ್ರಿ ಇದ್ದೇ ಇರುತ್ತಾರೆ. ಇದನ್ನು ಹೊರತುಪಡಿಸಿ ಬೇರೆ ಏನಾದರು ನಿರ್ಧಾರ ಮಾಡಲು ಸೂಚಿಸಿದೆ. ಕೊನೆಗೆ ರವಿ ಶಾಸ್ತ್ರಿ ಜೊತೆ ವಕಾರ್ ಯೂನಿಸ್ ಸೇರಿಸಿ ಟಾಸ್ ಪ್ರಕ್ರಿಯೆ ಮುಗಿಸಲಾಗಿದೆ.

ಏಕಾಂಗಿಯಾಗಿ ಫೋಟೋ ಶೂಟ್ ಮಾಡಿದ ಪಾಕ್ ನಾಯಕ

ಪಾಕಿಸ್ತಾನ ನಾಯಕನ ಜೊತೆ ಫೈನಲ್ ಪಂದ್ಯಕ್ಕೂ ಮುನ್ನ ಟ್ರೋಫಿ ಫೋಟೋ ಶೂಟ್ ಮಾಡಲು ಭಾರತ ನಿರಾಕರಿಸಿದೆ. ಹೀಗಾಗಿ ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಏಕಾಂಗಿಯಾಗಿ ಫೋಟೋ ಶೂಟ್ ಮಾಡಿದ್ದಾರೆ.

ಫೈನಲ್ ಪಂದ್ಯದಲ್ಲೂ ಹ್ಯಾಂಡ್‌ಶೇಕ್ ಇಲ್ಲ

ಪಾಕಿಸ್ತಾನ ಜೊತೆಗೆ ನೋ ಹ್ಯಾಂಡ್‌ಶೇಕ್ ಪಾಲಿಸಿಯನ್ನು ಟೀಂ ಇಂಡಿಯಾ ಮುಂದುವರಿಸಿದೆ. ಲೀಗ್, ಸೂಪರ್ 4 ಹಂತದಲ್ಲೂ ಇದೇ ಪಾಲಿಸಿ ಮುಂದುವರಿಸಿತ್ತು. ಇದೀಗ ಫೈನಲ್ ಪಂದ್ಯದಲ್ಲೂ ಟಾಸ್ ಪ್ರಕ್ರಿಯೆ ವೇಳೆ ಪಾಕಿಸ್ತಾನ ಕ್ರಿಕೆಟಿಗನ ಜೊತೆಗೆ ನಾಯಕ ಸೂರ್ಯಕುಮಾರ್ ಯಾವುದೇ ಹ್ಯಾಂಡ್‌ಶೇಕ್ ಮಾಡಿಲ್ಲ.

Scroll to load tweet…