ಪರ್ತ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ, ಅಗ್ರಕ್ರಮಾಂಕದ ವೈಫಲ್ಯದಿಂದ 9 ವಿಕೆಟ್‌ಗೆ 136 ರನ್ ಗಳಿಸಿತು. ಮಳೆಯಿಂದಾಗಿ ಆಸ್ಟ್ರೇಲಿಯಾಗೆ ಡೆಕ್ವರ್ತ್ ಲೂಯಿಸ್ ನಿಯಮದಡಿ 26 ಓವರ್‌ಗಳಲ್ಲಿ 131 ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿದೆ.

ಪರ್ತ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯವು ಮಳೆಯ ಅಡಚಣೆಯ ನಡುವೆ ಸಾಗುತ್ತಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡು 136 ರನ್ ಬಾರಿಸಿದೆ. ಮಳೆ ಅಡಚಣೆಯಿಂದ ಪಂದ್ಯದಲ್ಲಿ ಡೆಕ್ವರ್ತ್ ಲೂಯಿಸ್ ನಿಯಮದನ್ವಯ ಆಸ್ಟ್ರೇಲಿಯಾಗೆ 26 ಓವರ್‌ಗಳಲ್ಲಿ 131 ರನ್ ಟಾರ್ಗೆಟ್ ಸಿಕ್ಕಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ

ಇಲ್ಲಿನ ಆಪ್ಟಸ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಆಸೀಸ್ ವೇಗಿಗಳು ಯಶಸ್ವಿಯಾದರು. ಪವರ್ ಪ್ಲೇನಲ್ಲೇ ಭಾರತದ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಏಳು ತಿಂಗಳ ಬಳಿಕ ಟೀಂ ಇಂಡಿಯಾ ಪರ ಕಣಕ್ಕಿಳಿದ ರೋಹಿತ್ ಶರ್ಮಾ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಇನ್ನು ನಾಯಕನಾಗಿ ಮೊದಲ ಏಕದಿನ ಪಂದ್ಯವನ್ನಾಡಿದ ಶುಭ್‌ಮನ್ ಗಿಲ್ ಬ್ಯಾಟಿಂಗ್ ಕೇವಲ 10 ರನ್‌ಗಳಿಗೆ ಸೀಮಿತವಾಯಿತು. ಭಾರತ 27 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.

ಪಂದ್ಯಕ್ಕೆ ಮಳೆ ಅಡ್ಡಿ

ಇನ್ನು ಪಂದ್ಯಕ್ಕೆ ಪದೇ ಪದೇ ಮಳೆ ಅಡ್ಡಿಪಡಿಸಿದ್ದು, ಆಟಗಾರರ ಏಕಾಗ್ರತೆಗೆ ಧಕ್ಕೆಯನ್ನುಂಟು ಮಾಡಿತು. ಇನ್ನು ಉಪನಾಯಕ ಶ್ರೇಯಸ್ ಅಯ್ಯರ್ 11 ರನ್ ಗಳಿಸಿ ಜೋಶ್ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಆಗ ಭಾರತದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 45 ರನ್

ಇದಾದ ಬಳಿಕ ಕೆ ಎಲ್ ರಾಹುಲ್ ಹಾಗೂ ಅಕ್ಷರ್ ಪಟೇಲ್ 5ನೇ ವಿಕೆಟ್‌ಗೆ ಅಮೂಲ್ಯ 39 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಅಕ್ಷರ್ ಪಟೇಲ್ 31 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಕೆ ಎಲ್ ರಾಹುಲ್ ಕೇವಲ 31 ಎಸೆತಗಳನ್ನು ಎದುರಿಸಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ಸಹಿತ ಆಕರ್ಷಕ 38 ರನ್ ಸಿಡಿಸಿದರು. ಇನ್ನು ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ 10 ಹಾಗೂ ನಿತೀಶ್ ಕುಮಾರ್ ರೆಡ್ಡಿ ಅಜೇಯ 19 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.