ಪರ್ತ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಏಳು ತಿಂಗಳ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಮರಳಿದ್ದು, ನಿತೀಶ್ ಕುಮಾರ್ ರೆಡ್ಡಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.
ಪರ್ತ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಇಂದಿನಿಂದ ಅಧಿಕೃತ ಚಾಲನೆ ಸಿಕ್ಕಿದೆ. ಭಾರತ ಎದುರು ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಏಳು ತಿಂಗಳ ಬಳಿಕ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೀಂ ಇಂಡಿಯಾ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದಾರೆ. ಇನ್ನು ಸ್ಟಾರ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಭಾರತ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ನಿರೀಕ್ಷೆಯಂತೆಯೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಮೇಲೆ ಎಲ್ಲರ ಕಣ್ಣಿರಲಿದ್ದು, ಈ ಇಬ್ಬರು ದಿಗ್ಗಜ ಕ್ರಿಕೆಟಿಗರು 2027ರ ಏಕದಿನ ವಿಶ್ವಕಪ್ ಆಡುತ್ತಾರಾ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊಂಚ ಸುಳಿವು ಸಿಗುವ ಸಾಧ್ಯತೆಯಿದೆ. 223 ದಿನಗಳ ಬಳಿಕ ಈ ಇಬ್ಬರು ಆಟಗಾರರು ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಪರ್ತ್ ಪಿಚ್‌ನಲ್ಲಿ ಕೊಹ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದು, ಮತ್ತೊಂದು ದೊಡ್ಡ ಇನ್ನಿಂಗ್ಸ್ ಆಡುವ ವಿಶ್ವಾಸದಲ್ಲಿದ್ದಾರೆ.
ಏಕದಿನ ಕ್ರಿಕೆಟ್‌ಗೆ ನಿತೀಶ್ ರೆಡ್ಡಿ ಪಾದಾರ್ಪಣೆ:
ಈಗಾಗಲೇ ಭಾರತ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ನಿತೀಶ್ ಕುಮಾರ್ ರೆಡ್ಡಿ, ಇದೀಗ ಏಕದಿನ ತಂಡಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಹೈದರಾಬಾದ್ ಮೂಲದ ಈ ಆಲ್ರೌಂಡರ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಇನ್ನು ಭಾರತ ಈ ಪಂದ್ಯದಲ್ಲಿ ಮೂವರು ತಜ್ಞ ವೇಗಿಗಳು ಹಾಗೂ ಮೂವರು ಆಲ್ರೌಂಡರ್‌ಗಳೊಂದಿಗೆ ಕಣಕ್ಕಿಳಿದಿದೆ. ವೇಗಿಗಳ ರೂಪದಲ್ಲಿ ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್ ಹಾಗೂ ಅರ್ಶದೀಪ್ ಸಿಂಗ್ ಸ್ಥಾನ ಪಡೆದರೆ, ಆಲ್ರೌಂಡರ್ ರೂಪದಲ್ಲಿ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆದಿದ್ದಾರೆ.
ಆಸೀಸ್ ಪರ ಇಬ್ಬರು ಪಾದಾರ್ಪಣೆ:
ಇನ್ನು ಆಸ್ಟ್ರೇಲಿಯಾ ತಂಡದ ಪರ ಇಬ್ಬರು ಅಟಗಾರರು ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಆಸೀಸ್ ಪರ ಮ್ಯಾಚ್ ರೆನ್‌ಶೋ ಹಾಗೂ ಮಿಚೆಲ್ ಓವನ್ ತಂಡದಲ್ಲಿ ಸ್ಥಾನ ಪಡೆದಿದ್ದು, ಮೊದಲ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಉಭಯ ತಂಡಗಳ ಆಟಗಾರರ ಪಟ್ಟಿ:
ಭಾರತ: ರೋಹಿತ್ ಶರ್ಮಾ, ಶುಭ್ ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಅಕ್ಷರ್ ಪಟೇಲ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶ್‌ದೀಪ್ ಸಿಂಗ್.
ಆಸ್ಟ್ರೇಲಿಯಾ: ಟ್ರ್ಯಾವಿಸ್ ಹೆಡ್, ಮಿಚ್ ಮಾರ್ಷ್ (ನಾಯಕ), ಮ್ಯಾಟ್ ಶಾರ್ಟ್, ಮ್ಯಾಟ್ ರೆನ್‌ಶೋ, ಜೋಶ್ ಫಿಲಿಪ್, ಮಿಚ್ ಓವನ್, ಕೂಪರ್ ಕಾನೊಲಿ, ಮಿಚೆಲ್ ಸ್ಟಾರ್ಕ್, ನೇಥನ್ ಎಲ್ಲೀಸ್, ಕುಹೈಮನ್, ಜೋಶ್ ಹೇಜಲ್‌ವುಡ್.
ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ-ಹಾಟ್‌ಸ್ಟಾರ್
